ದಳವಾಯಿಯವರ ಪಾಠಗಳು ಎಂದೂ ಬೋರ್ ಎನಿಸುತ್ತಿರಲಿಲ್ಲ

2 years ago

ನನ್ನ ಪ್ರೀತಿಯ ಮೇಷ್ಟ್ರು ಪ್ರೊ. ರಾಜಪ್ಪ ದಳವಾಯಿಯವರು ಮೊನ್ನೆ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾದ ದಳವಾಯಿಯವರು ಅಧ್ಯಾಪನ, ರಂಗಭೂಮಿಯ ಚಟುವಟಿಕೆಗಳ ಮೂಲಕ ಒಂದು ಪ್ರಜ್ಞಾವಂತ ಜನಾಂಗವನ್ನು ರೂಪಿಸಿದವರು.

ಹಾಗೆ ನೋಡಿದರೆ ತಮ್ಮ ಅಪಾರವಾದ ಓದು, ವಿದ್ವತ್ತಿನ ಮೂಲಕ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವ ದಳವಾಯಿಯವರಿಗೆ ಕರ್ನಾಟಕದಾದ್ಯಂತ ಲಕ್ಷಾಂತರ ಜನ ಶಿಷ್ಯರಿದ್ದಾರೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ದಳವಾಯಿಯವರ ಹೆಸರನ್ನು ಕೇಳದೇ ಇರಲಾರರು. ಅಷ್ಟರಮಟ್ಟಿಗೆ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು.

ದಳವಾಯಿವರನ್ನು ನಾನು ನೋಡಿದ್ದು ಬಹುಶಃ ೨೦೦೫-೦೬ರಲ್ಲಿ ಅನಿಸುತ್ತದೆ. ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಕೆ.ನಾಗಭೂಷಣ ಅವರ “ಜಿಜ್ಞಾಸೆ” ಕೃತಿ ಬಿಡುಗಡೆ ಸಮಾರಂಭದಲ್ಲಿ. ಆಗ ಪ್ರಾಂಶುಪಾಲರಾಗಿದ್ದವರು ಪ್ರೊ.ಎಸ್.ಜಿ. ಸಿದ್ಧರಾಮಯ್ಯನವರು. ಆ ದಿನದ ಕಾರ್ಯಕ್ರಮದಲ್ಲಿ ಅವರು ತುಂಬಾ ಚೆನ್ನಾಗಿ ಮಾತಾಡಿ ನಮ್ಮನ್ನು ಆಕರ್ಷಿಸಿದ್ದರು.

ತುಮಕೂರು ಭಾಗದ ಅಧ್ಯಾಪಕರು ಬಹುತೇಕವಾಗಿ ದಳವಾಯಿಯವರ ಶಿಷ್ಯರೇ ಆಗಿದ್ದರು. ಬಹುಶಃ ತುಮಕೂರು ಅವರ ವೃತ್ತಿ ಜೀವನದಲ್ಲಿ ಹೊಸ ತಿರುವು ನೀಡಿತೆಂದೆ ನನ್ನ ಅನಿಸಿಕೆ. ನಮಗೆ ಮೇಷ್ಟ್ರುಗಳಾಗಿದ್ದ ಡಾ. ಕೆ.ನಾಗಭೂಷಣ, ಡಾ. ರವಿಕುಮಾರ್ ನೀಹ, ಡಾ. ಬಂದ್ರೇಹಳ್ಳಿ ಕುಮಾರ್, ಡಾ.ಬಡವನಹಳ್ಳಿ ಪ್ರಕಾಶ್, ಲಿಂಗರಾಜು, ಲಕ್ಷ್ಮೀನರಸಯ್ಯ, ಶ್ರೀನಿವಾಸ್, ಡಾ. ನಾಗಭೂಷಣ ಬಗ್ಗನಡು ಹಾಗೂ ಗುರು ಸಮಾನರು, ಸ್ನೇಹಿತರು ಆದ ಡಾ.ಶಿವಣ್ಣ ತಿಮ್ಲಾಪುರ, ಡಾ. ಮೂರ್ತಿ ತಿಮ್ಮನಹಳ್ಳಿ, ಡಾ. ಪ್ರದೀಪ್ ಮಾಲ್ಗುಡಿ, ಡಾ. ಎಸ್.ಬಿ.ಲಕ್ಷ್ಮೀಕಾಂತ್, ಡಾ.ಪುಟ್ಟರಾಜು ಇವರೆಲ್ಲರ ಮೂಲಕ ದಳವಾಯಿಯವರ ಹೆಸರು ತರಗತಿಯಲ್ಲಾಗಲೀ, ತರಗತಿಯಾಚೆಯಾಗಲೀ ವಿವಿಧ ಕಾರಣಗಳಿಗಾಗಿ ಉಲ್ಲೇಖವಾಗುತ್ತಿತ್ತು.

ನಾನು ನೋಡಿದ ಹಾಗೆ, ದಳವಾಯಿಯವರ ಹಿಂದೆ ವಿದ್ಯಾರ್ಥಿಗಳು ಕಿಂದರಿಜೋಗಿಯ ಹಿಂದೆ ಸುತ್ತುವಂತೆ ತಿರುಗುತ್ತಿದ್ದರು. ಹೀಗೆ ಸುತ್ತಲು ಕಾರಣ ಅವರಲ್ಲಿರುವ ವಿದ್ವತ್ತು. ನಾನು ಕಂಡಹಾಗೆ ಕರ್ನಾಟಕದ ಅಪರೂಪದ ಹಾಗೂ ವಿರಳ ಮೇಷ್ಟ್ರುಗಳಲ್ಲಿ ಇವರು ಒಬ್ಬರು. ಪಡೆಯುವ ಸಂಬಳಕ್ಕೆ ಪಾಠಮಾಡಲು ಕೂಡ ಮೈಗಳ್ಳರಾಗಿ ಸುತ್ತುವ ಮೇಷ್ಟ್ರುಗಳ ನಡುವೆ ದಳವಾಯಿಯವರು ಗಂಟೆಗಳ ಲೆಕ್ಕದಲ್ಲಿ ಪಾಠ ಮಾಡಿದವರಲ್ಲ; ದಿನಗಟ್ಟಲೆ ಪಾಠ ಮಾಡುತ್ತಿದ್ದವರು. ಇಡೀ ದಿನದಲ್ಲಿ ಅರ್ಧ ಅಥವಾ ಮುಕ್ಕಾಲು ದಿನ ಪಾಠ ಮಾಡುವುದು ಅವರ ಜಾಯಮಾನವಾಗಿತ್ತು. ಹಲವು ಸಲ ದಿನಪೂರ್ತಿ ಪಾಠ ಮಾಡಿರುವುದನ್ನೂ ನಾನು ನೋಡಿ ಚಕಿತನಾಗಿದ್ದೇನೆ.

ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆ ಅವರು ಗಂಭೀರವಾಗಿ ಓದಿಕೊಂಡಿದ್ದರು. ಆದರೆ ರಂಗಭೂಮಿ ಕುರಿತು ವಿಶೇಷ ಆಸಕ್ತಿ, ಪ್ರೀತಿ ಇತ್ತು. ಕನ್ನಡ ರಂಗಭೂಮಿಯ ಕ್ಷೇತ್ರಕ್ಕೆ ಅಪರೂಪದ ನಾಟಕಗಳನ್ನು ನೀಡಿದ ಹೆಗ್ಗಳಿಕೆ ದಳವಾಯಿಯವರದ್ದು. ಅವರ ದಾರಾಶಿಕೋ, ಕುಲಂ, ಸುಯೋಧನ, ಒಂದು ಬೊಗಸೆ ನೀರು, ಯಲುರಾಜನ ಮಡದಿ ನನ್ನ ಮೆಚ್ಚಿನ ನಾಟಕಗಳು. ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು ಕೂಡ ಅವರ ವಿದ್ವತ್ತನ್ನು ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ ಅದನ್ನು ಅಷ್ಟಾಗಿ ಪರಿಗಣಿಸಲಿಲ್ಲ ಅನಿಸುತ್ತದೆ. ಅವರು ರಚಿಸಿರುವ ದಾರಾಶಿಕೋ ನಾಟಕದ ಪ್ರದರ್ಶನ ನೋಡಿ ನಾಟಕ ಪ್ರಕಾರದ ಬಗ್ಗೆ ಆಸಕ್ತಿ ಮೂಡಿತು.

ಅವರು ತಿರುಗಾಟ ಪ್ರಿಯರು. ಅವರಿಗೆ ಕರ್ನಾಟಕದ ಎಲ್ಲಾ ಊರುಗಳ ಪರಿಚಯ ಇದೆ. ಅಲ್ಲೆಲ್ಲ ಅವರ ಗೆಳೆಯರು, ವಿದ್ಯಾರ್ಥಿಗಳು ಇದ್ದೇ ಇದ್ದಾರೆ. ದಳವಾಯಿವರ ಪುಸ್ತಕ ಪ್ರೀತಿ ದೊಡ್ಡದು. ಅವರು ಪ್ರಯಾಣದ ಸಂದರ್ಭದಲ್ಲಿಯೇ ತುಂಬಾ ಓದುತ್ತಿದ್ದರು.

ನಾನು ಅವರ ನೇರ ವಿದ್ಯಾರ್ಥಿಯಲ್ಲ; ಆದರೆ ಹಲವು ಸಂದರ್ಭಗಳಲ್ಲಿ ಅವರ ಪಾಠ, ಚರ್ಚೆ, ಸಂವಾದಗಳಲ್ಲಿ ಅವರಿಂದ ತುಂಬಾ ಕಲಿತಿದ್ದೇನೆ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯುಜಿಸಿ ಪರೀಕ್ಷೆಯ ತರಬೇತಿಗಾಗಿ ತರಗತಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವು ತರಗತಿಗಳ ನಾನು ಕೇಳಿ, ಅವರ ಪಾಠದಿಂದ ಸ್ಪೂರ್ತಿ ಪಡೆದು ಯುಜಿಸಿ-ಜೆ.ಆರ್.ಎಫ್. ಪರೀಕ್ಷೆಯಲ್ಲಿ ತೇರ್ಗಡೆಯಾದೆ. ಇದರ ಸಂಪೂರ್ಣ ಕಾರಣಕರ್ತರು ದಳವಾಯಿಯವರು.

ತಮ್ಮ ನಿರರ್ಗಳವಾದ ಪಾಠ, ಕಲಿಕಾ ಚಟುವಟಿಕೆ, ತಯಾರಿಯ ಜೊತೆ ಜೊತೆಗೆ ಅವರ ಉತ್ತೇಜಕ ನುಡಿಗಳು ನಾವು ಯುಜಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮುಖ್ಯ ಕಾರಣ. ಪರೀಕ್ಷೆಯ ಸಮಯದಲ್ಲಿ ಅವರು ವಿದ್ಯಾರ್ಥಿಗಳಲ್ಲಿ ತುಂಬುತ್ತಿದ್ದ ಉತ್ಸಾಹ ರೀತಿಯೇ ಎಂಥಹ ದಡ್ಡನಲ್ಲೂ ಸ್ಪರ್ಧಾತ್ಮಕ ಮನೋಭಾವ ಮೂಡಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಚೈತನ್ಯ ತುಂಬುತ್ತಿತ್ತು.

ಮೂಲತಃ ರಂಗಭೂಮಿಯ ಬಗ್ಗೆ ಹೆಚ್ಚು ಆಸಕ್ತಿ, ಪ್ರೀತಿಯಿದ್ದ ಕಾರಣಕ್ಕೆ ದಳವಾಯಿಯವರ ಪಾಠಗಳು ಎಂದೂ ಬೋರ್ ಎನಿಸುತ್ತಿರಲಿಲ್ಲ. ಸ್ವತಃ ರಂಗಭೂಮಿ ನಟರೂ ಆಗಿದ್ದರಿಂದ ಸಭಾ ಪ್ರೇಕ್ಷಕರಂತೆಯೇ ವಿದ್ಯಾರ್ಥಿಗಳ ಮನಸ್ಸನ್ನು ಅರಿತು, ಸಂದರ್ಭೋಚಿತವಾಗಿ ನಗಿಸುತ್ತಾ, ತಿಳಿ ಹೇಳುತ್ತಾ ಪಾಠ ಮಾಡುತ್ತಿದ್ದರು.

ದಳವಾಯಿಯವರು ಬರೀ ತರಗತಿಗೆ ಸೀಮಿತವಾಗಿದ್ದ ಪ್ರಾಧ್ಯಾಪಕರಷ್ಟೇ ಆಗಿರಲಿಲ್ಲ; ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ಸ್ನೇಹಿತರು, ಮಾರ್ಗದರ್ಶಕರೂ ಆಗಿದ್ದರು. ಅದಕ್ಕೆ ದಳವಾಯಿಯವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಏನೋ ಒಂದು ರೀತಿಯ ಅವ್ಯಕ್ತವಾದ ಪ್ರೀತಿ, ಆತ್ಮೀಯತೆ ಇತ್ತು.

ನಾನು ಕೇಳಿದಂತೆ ಇಡೀ ಕರ್ನಾಟಕದಲ್ಲಿ ಕಿ.ರಂ. ನಾಗರಾಜರ ನಂತರ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಂಪಾದಿಸಿದ್ದ ಅಧ್ಯಾಪಕರೆಂದರೆ ಅದು ದಳವಾಯಿ ಮಾತ್ರ. ದಳವಾಯಿ ನನಗೆ ಪರಿಚಯ ಆಗಿದ್ದು ಆಕಸ್ಮಿಕ. ಆದರೆ ಪರಿಚಯ ಆದಮೇಲೆ ನನ್ನ ಪ್ರೀತಿಯ ಮೇಷ್ಟ್ರುಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.

ಯೋಗಾಯೋಗವೆಂದರೆ ನಾನು ದಳವಾಯಿಯವರ ಹತ್ತಿರ ಪಿ.ಎಚ್.ಡಿ., ಅಧ್ಯಯನ ಮಾಡಬೇಕು ಅಂದುಕೊಂಡಿದ್ದೆ, ಆಗಲಿಲ್ಲ. ಆದರೆ ನನ್ನ ಪಿ.ಎಚ್.ಡಿ., ಮಹಾಪ್ರಬಂಧವು ಮೌಲ್ಯಮಾಪನಕ್ಕೆ ಅವರಿಗೆ ಹೋಗುತ್ತದೆಂದು ಎಂದೂ ನಿರೀಕ್ಷೆ ಮಾಡಿರಲಿಲ್ಲ. ತುಂಬಾ ಚೆನ್ನಾಗಿ ವರದಿಯನ್ನು ಕೊಟ್ಟಿದ್ದರು. ಮಹಾಪ್ರಬಂಧ ಮಂಡನೆ ಒಂದು ವಾರ ಇರುವವರೆಗೆ ನನ್ನ ಪ್ರಬಂಧವನ್ನು ಯಾರು ಮೌಲ್ಯಮಾಪನ ಮಾಡಿದ್ದಾರೆಂಬ ಸುಳಿವು ಕೂಡ ನನಗೆ ಗೊತ್ತಿರಲಿಲ್ಲ. ವರದಿ ಬಂದು, ಮೌಖಿಕ ಪರೀಕ್ಷೆ ನಿಗದಿಯಾದಾಗ ಯಾರ್ಯಾರಿಗೆ ಮೌಲ್ಯಮಾಪನಕ್ಕೆ ಕಳಿಸಲಾಗಿತ್ತು ಎಂಬ ಸುದ್ದಿ ತಿಳಿಯಿತು. ನಾನು ಬರೆದ ಪ್ರಬಂಧವನ್ನು ಮೌಲ್ಯಮಾಪನ ಮಾಡಿದ್ದೂ ಅಲ್ಲದೇ ಮತ್ತೊಬ್ಬ ಮೌಲ್ಯಮಾಪಕರಾದ ತುಮಕೂರು ವಿಶ್ವವಿದ್ಯಾಲಯದ ಶ್ರೀಪಾದ ಭಟ್ ಬರದೇ ಇರುವ ಕಾರಣಕ್ಕಾಗಿ ದಳವಾಯಿಯವರೇ ಆಂತರಿಕ ಮೌಲ್ಯಮಾಪಕರಾಗಿಯೂ ಬಂದು ನನ್ನ ಬರವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಪ್ರಬಂಧ ಮಂಡಿಸಿ, ಪ್ರಶ್ನೋತ್ತರಕ್ಕೆ ಅವಕಾಶ ಕಲ್ಪಿಸಿದಾಗ, ದಳವಾಯಿಯವರು ಪ್ರತಿಕ್ರಿಯಿಸುತ್ತಾ, ‘ನರಸಿಂಹಮೂರ್ತಿ, ಇದು ನಿನ್ನ ಥೀಸಿಸ್ ಅಂತ ಗೊತ್ತಿರಲಿಲ್ಲ ಕಣಯ್ಯಾ! ಯಾರೋ ಎಪ್ಪತ್ತು-ಎಂಭತ್ತು ವರ್ಷದ ಮುದುಕರ ಬರವಣಿಗೆ ಅಂದುಕೊಂಡಿದ್ದೆ; ತುಂಬಾ ಚೆನ್ನಾಗಿ ಬರೆದಿದ್ದೀಯಾ. Very good’ ಎಂದು ಹರಸಿದ್ದರು. ಆಗ ನನಗೆ ಒಟ್ಟೊಟ್ಟಿಗೆ ಒಂದು ರೀತಿಯ ಸಂತೋಷ, ಮುಜುಗರ ಎರಡೂ ಆಯಿತು. ಆ ಕ್ಷಣ ನನಗಿಂತ ನನ್ನ ಮಾರ್ಗದರ್ಶಕರಾದ ಡಾ. ಮಾಧವ ಪೆರಾಜೆಯವರು ತುಂಬಾ ಖುಷಿ ಪಟ್ಟರು. ಆನಂತರ ಕ್ಯಾಂಟೀನ್ ನಲ್ಲಿ ಸುಜ್ಞಾನಮೂರ್ತಿಯವರೊಂದಿಗೆ ಟೀ ಕುಡಿಯುತ್ತ, ‘ಈ ಥೀಸಿಸನ್ನು ಬೇಗ ಪ್ರಕಟಿಸು. ತಡಮಾಡಬೇಡ’ ಎಂದು ಸಲಹೆ ನೀಡಿದರು. ಆದರೆ ಅತಿಯಾದ ‘ಸಮಾಜಸೇವೆ’ಯ ಕಾರಣದಿಂದ ನನ್ನ ಪ್ರಬಂಧವನ್ನು ಪ್ರಕಟಿಸದೇ ಹೋದೆ.

ಒಬ್ಬ ಅಧ್ಯಾಪಕನಿಗೆ ಈ ಸಮಾಜದಲ್ಲಿ ಸಿಗುವ ಗೌರವ, ಜನಮನ್ನಣೆ ಎಂತಹದ್ದು ಎಂಬುದನ್ನು ಅವರನ್ನು ನೋಡಿ ಅರ್ಥ ಮಾಡಿಕೊಂಡಿದ್ದೇನೆ. ಎಲ್ಲಾ ವಿಷಯಗಳ ಬಗ್ಗೆ ತಿಳಿದಿರಬೇಕು. ಅಧ್ಯಾಪಕನಾದವನಿಗೆ ಯಾವುದೇ ವಿಷಯ ಕೊಟ್ಟರು ನನಗೆ ಗೊತ್ತಿಲ್ಲ ಅಂತ ಸಬೂಬು ಹೇಳದೆ, ಅಚ್ಚುಕಟ್ಟಾಗಿ, ಅಷ್ಟೇ ಪ್ರಾಮಾಣಿಕವಾಗಿ ಪಾಠಗಳನ್ನು ಮುಗಿಸಿಕೊಡಬೇಕು. ಅದು ಅಧ್ಯಾಪಕರ ಜವಾಬ್ದಾರಿ ಎಂದು ತರಗತಿಯ ಪಾಠಗಳಂತೆಯೇ ಜೀವನದ ಪಾಠಗಳನ್ನು ಕೂಡ ಹೇಳಬಲ್ಲವರಾಗಿದ್ದರು. ಈ ಸಮಾಜದ ಏಳಿಗೆಯಲ್ಲಿ ಅಧ್ಯಾಪಕರ ಪಾತ್ರ ತುಂಬಾ ಮಹತ್ವದ್ದು ಎಂದು ಸಾರಿದ; ಅದರಂತೆಯೇ ಬದುಕಿದ ಡಾ. ರಾಜಪ್ಪ ದಳವಾಯಿ ನನ್ನ ಆದರ್ಶ ಮೇಷ್ಟ್ರುಗಳಲ್ಲಿ ಒಬ್ಬರು.

ಹೇಳುವುದು ತುಂಬಾ ಇದೆ. ಸದ್ಯಕ್ಕೆ ಇಷ್ಟು ಸಾಕು ಅನಿಸುತ್ತದೆ. ಕರ್ನಾಟಕದ ಯಾವುದಾದರೂ ವಿಶ್ವವಿದ್ಯಾಲಯಗಳು ದಳವಾಯಿಯವರ ಬಹುಶ್ರುತ ವಿದ್ವತ್ತನ್ನು ಗೌರವಿಸಿ, ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳುವ ಮೂಲಕ ಅವರ ವಿದ್ವತ್ತನ್ನು ವಿದ್ಯಾರ್ಥಿಗಳಿಗೆ ಹಂಚವಂತೆ ಏರ್ಪಾಡು ಮಾಡಲಿ ಎಂದು ಕೋರುತ್ತೇನೆ.

ಡಾ. ರಾಜಪ್ಪ ದಳವಾಯಿಯವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುವೆ. ಶುಭಾಶಯಗಳು ಸರ್…

  • ನರಸಿಂಹಮೂರ್ತಿ ಹಳೇಹಟ್ಟಿ, ಕನ್ನಡ ಅಧ್ಯಾಪಕರು

Leave a Reply