ಮತದಾನ ಹೆಚ್ಚಳಕ್ಕೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನಜಾಗೃತಿ

2 years ago

ಸಮಗ್ರವಾಗಿ ಎಲ್ಲ ರೀತಿಯ ಮತದಾರರನ್ನು ತಲುಪುವ ಕ್ರಿಯಾಯೋಜನೆ: ಜಿ.ಪಂ.ಸಿಇಓ ಸ್ವರೂಪ ಟಿ.ಕೆ.

ಧಾರವಾಡ: ಮೇ 7ರಂದು ಜರುಗುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಶೇ 100ರಷ್ಟು ಮತದಾನ ಆಗುವಂತೆ ಪ್ರತಿ ಮತದಾರನಿಗೆ ಮತದಾನದ ಮಹತ್ವ ತಲುಪಿಸುವಂತಹ ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಸ್ವೀಪ್ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ನೊಡಲ್ ಅಧಿಕಾರಿ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ. ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರ ಹಾಗೂ ಸರಕಾರಿ ನೌಕರ ಸಂಘದ ಪದಾಧಿಕಾರಿಗಳೊಂದಿಗೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಸ್ವೀಪ್ ಕಾರ್ಯ ಚಟುವಟಿಕೆಗಳ ಕ್ರಿಯಾಯೋಜನೆ ರೂಪಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಮಾರ್ಚ್ 26 ರಿಂದ ಏಪ್ರಿಲ್ 30 ರ ವರೆಗಿನ ಮುಂದಿನ ಆರು ವಾರಗಳಲ್ಲಿ ಪ್ರತಿವಾರ ಮೂರು ಹಂತದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಳೆದ ಚುನಾವಣೆಯಲ್ಲಿ ಮತದಾನವಾಗಿರುವ ಮತಗಟ್ಟೆಗಳನ್ನು ಗಮನದಲ್ಲಿಟ್ಟು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ 71 ಮತ್ತು 73 ಮತಕ್ಷೇತ್ರಗಳ 6 ಮತಗಟ್ಟೆಗಳು, ಕಲಘಟಗಿ ಪಟ್ಟಣದ 2 ಮತಗಟ್ಟೆಗಳು ಮತ್ತು ಶಿಗ್ಗಾಂವ ಮತಕ್ಷೇತ್ರ ವ್ಯಾಪ್ತಿಯ 1 ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗಿದೆ. ಈ ಎಲ್ಲ 9 ಮತಗಟ್ಟೆಗಳಲ್ಲಿ ಮತದಾರ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಮತದಾರರಲ್ಲಿ ಮತದಾನ ಜಾಗೃತಿಗಾಗಿ ಈಗಾಗಲೇ ಜಿಲ್ಲೆಯ ನಗರ, ಗ್ರಾಮೀಣ ವ್ಯಾಪ್ತಿಯ ಪ್ರಮುಖ ಸ್ಥಳ, ಸರಕಾರಿ ಕಚೇರಿಗಳ ಮುಂಭಾಗದಲ್ಲಿ ಫಲಕ, ಹೊರ್ಡಿಂಗ್ಸ್ಗಳನ್ನು ಹಾಕಲಾಗಿದೆ. ಕರಪತ್ರಗಳನ್ನು ಹಂಚಲು ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗ ಜಿಂಗಲ್ಸ್ಗಳನ್ನು ನೀಡಿದ್ದು, ಅವುಗಳನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚಿತ್ರಮಂದಿರ ಮುಂತಾದ ಪ್ರಮುಖ ಸ್ಥಳಗಳಲ್ಲಿ ಪ್ರಸಾರ ಮಾಡಲು ತಿಳಿಸಲಾಗಿದೆ ಎಂದರು.

ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಪ್ರತಿ ಮತದಾರನಿಗೆ ಮತದಾನದ ಮಾಹಿತಿ ಮತ್ತು ಮಹತ್ವ ತಿಳಿಸಲು ಸರ್ಕಾರದ ಇಲಾಖೆ ಹಾಗೂ ಮತದಾರ ಕ್ಲಬ್ಗಳಿಗೆ ಕ್ರಿಯಾ ಯೋಜನೆ ನೀಡಲಾಗಿದೆ ಎಂದರು.

ಮುಖ್ಯವಾಗಿ ಜಿಲ್ಲೆಯ ಪ್ರತಿ ಮತಗಟ್ಟೆಯ ವ್ಯಾಪ್ತಿಯಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು. ವಾಕ್ತಾನ್, ಸಹಿ ಸಂಗ್ರಹಣೆ ಅಭಿಯಾನ, ಬೈಕ್ ರ್ಯಾಲಿ, ರಂಗೋಲಿ, ಮೇಹಂದಿ, ಪಂಜಿನ ಮೆರವಣಿಗೆ, ಮೇಣಬತ್ತಿ ದೀಪದ ರ್ಯಾಲಿ ಮತ್ತು ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಮಾತನಾಡಿ, ಮತದಾರ ಜಾಗೃತಿಗಾಗಿ ಸ್ವೀಪ್ ಸಮಿತಿಯಿಂದ ಸಂಘಟಿಸುವ ಪ್ರತಿ ಕಾರ್ಯಕ್ರಮ ಸಂಯೋಜನೆಗೆ ಒಂದು ಸರಕಾರಿ ಇಲಾಖೆಯನ್ನು ಸಂಯೋಜಕರನಾಗಿ ನೇಮಿಸಲಾಗಿರುತ್ತದೆ. ಆಯಾ ದಿನದ ಕಾರ್ಯಕ್ರಮವನ್ನು ಜಿಲ್ಲಾ ಸ್ವೀಪ್ ಸಮಿತಿಯ ನೇತ್ರತ್ವದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಮುಖ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಮಹಾನಗರ ಪಾಲಿಕೆ ಮತ್ತು ಪಂಚಾಯತ ರಾಜ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿ, ಮತದಾನ ಜಾಗೃತಿ ಮಹತ್ವದ ಕಾರ್ಯಕ್ರಮ ಎಲ್ಲಾ ಹಂತದ ಜಾಗೃತಿ ಕಾರ್ಯಕ್ರಮಗಳಲ್ಲಿ ಸರಕಾರಿ ನೌಕರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದರು.

ಮತದಾರ ಜಾಗೃತ ಘಟಕದ ಅಧಿಕಾರಿ ಕೆ.ಎಂ.ಶೇಖ್ ಸಭೆ ನಿರ್ವಹಿಸಿ, ವಂದಿಸಿದರು. ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply