ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕ ಡಾ.ರಾಜಪ್ಪ ದಳವಾಯಿಯವರು ಮಾರ್ಚ್ 30, 2024ರಂದು ಅಧ್ಯಾಪಕ ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರದು ಬಹುಮುಖಿ ವ್ಯಕ್ತಿತ್ವ. ಚಿತ್ರಕಲೆ, ಕತೆ, ಕವಿತೆ, ವಿಮರ್ಶೆ, ನಾಟಕ ಮತ್ತು ರಂಗಗೀತೆಗಳ ರಚನೆ ಹಾಗೂ ನಟನೆ, ಪ್ರಕಾಶನ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 4 ದಶಕಗಳಷ್ಟು ಅಪಾರ ಅನುಭವ ಅವರಿಗಿದೆ.
ಡಾ.ರಾಜಪ್ಪ ದಳವಾಯಿಯವರ ಸಮಗ್ರ ನಾಟಕಗಳು ಮತ್ತು ಪ್ರೀತಿಯ ದಳವಾಯಿ ಮೇಷ್ಟ್ರು ಇತ್ತೀಚೆಗೆ ಬಿಡುಗಡೆಯಾಗಿವೆ. ಅವರ “ಕನ್ನಡ ಸಾಹಿತ್ಯ ಕೋಶ” ಅಸಂಖ್ಯಾತ ಜನರ ಬದುಕನ್ನು ರೂಪಿಸಿದ ಕೃತಿ. ಇದರ ಲಾಭ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕ, ಪ್ರೌಢ ಶಾಲಾ ಶಿಕ್ಷಕ, ಎಸ್.ಡಿ.ಎ, ಎಫ್.ಡಿ.ಎ, ಕೆ. ಎ. ಎಸ್, ಐ. ಎ.ಎಸ್. ಮಾಡಿಕೊಂಡಿರುವವರು ಮತ್ತು ಇನ್ನಿತರ ಹುದ್ದೆಗಳು ಹಾಗೂ ನೆಟ್, ಜೆ.ಆರ್.ಎಫ್ ಮತ್ತು ಸ್ಲೆಟ್ ಪಾಸ್ ಆಗಿ ಜೀವನ ರೂಪಿಸಿಕೊಂಡ ಲಕ್ಷಾಂತರ ಜನರಿದ್ದಾರೆ.
ಹೀಗೆ ಜೀವನ ರೂಪಿಸಿಕೊಂಡವರು ತಮ್ಮ ಅನುಭವವನ್ನು ಹೇಳಿಕೊಳ್ಳಲು ಅವಕಾಶವಾಗಿಲ್ಲ. ಈ ಹಿನ್ನೆಲೆಯಲ್ಲಿ “ಕನ್ನಡ ಸಾಹಿತ್ಯ ಕೋಶ” ಕೃತಿ ಮತ್ತು ರಾಜಪ್ಪ ದಳವಾಯಿಯವರ ವ್ಯಕ್ತಿತ್ವದ ಕುರಿತ ಲೇಖನಗಳನ್ನು ಕಳುಹಿಸಬಹುದು. ಜೊತೆಗೆ, ಕುವೆಂಪು ವಿವಿ, ಮೈಸೂರು ವಿವಿ, ಮಂಡ್ಯ ಪಿಜಿ ಸೆಂಟರ್, ಬೆಂಗಳೂರು ವಿವಿ, ತುಮಕೂರು ವಿವಿ, ಕಲಬುರ್ಗಿ ವಿವಿ, ಬೆಳಗಾವಿ ವಿಶ್ವವಿದ್ಯಾಲಯದ ಒಡನಾಡಿಗಳು ಕೂಡ ದಳವಾಯಿಯವರ ವ್ಯಕ್ತಿತ್ವ ಮತ್ತು ಕೃತಿ ಕುರಿತ ಲೇಖನಗಳನ್ನು ಕಳುಹಿಸಲು ಅವಕಾಶವಿದೆ.
ಡಾ.ರಾಜಪ್ಪ ದಳವಾಯಿ ಅವರಿಗೆ 50 ವರ್ಷಗಳಾದಾಗ ತುಮಕೂರಿನ ವಿದ್ಯಾರ್ಥಿ ಮಿತ್ರರು ‘ಡಾ.ರಾಜಪ್ಪ ದಳವಾಯಿಯವರ ಬದುಕು ಬರಹ’ ಹೆಸರಿನ ವಿಚಾರ ಸಂಕಿರಣವನ್ನು ಆಯೋಜಿಸಿದ್ದರು. ಅಲ್ಲಿ ಮಂಡನೆಯಾದ ಪ್ರಬಂಧಗಳನ್ನು ಡಾ.ರವಿಕುಮಾರ್ ನೀಹ ಅವರು ‘ಕ್ರಿಯಾಪದ’ ಎಂಬ ಹೆಸರಿನಲ್ಲಿ ಕೃತಿಯನ್ನು ಪ್ರಕಟಿಸಿದ್ದರು.
ರಾಜಪ್ಪ ದಳವಾಯಿಯವರ ರಂಗಭೂಮಿಯ ಕೊಡುಗೆ ಕುರಿತಂತೆ ‘ಡಾ.ರಾಜಪ್ಪ ದಳವಾಯಿ ಅವರ ರಂಗಾನುಸಂಧಾನ’ ಎಂಬ ವಿಚಾರ ಸಂಕಿರಣವನ್ನು ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರು ನಡೆಸಿದ್ದು, ಅಲ್ಲಿ ಮಂಡನೆಯಾದ ಪ್ರಬಂಧಗಳನ್ನು ಡಾ.ಟಿ.ಎಸ್.ವಿವೇಕಾನಂದ ಅವರು ಅದೇ ಹೆಸರಿನಲ್ಲಿ ಸಂಪಾದಿಸಿದ್ದಾರೆ.
‘ಡಾ.ರಾಜಪ್ಪ ದಳವಾಯಿ ಅವರ ಸಾಂಸ್ಕೃತಿಕ ಚಿಂತನೆ’ ಎಂಬ ವಿಚಾರ ಸಂಕಿರಣವನ್ನು ಪದ ದೇವರಾಜ್ ನಡೆಸಿದ್ದು, ಈ ಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಶ್ರೀನಿವಾಸ ಪಾರಿಜಾತ ಅವರು ಸಂಪಾದಿಸಿದ್ದಾರೆ.
‘ಒಂದು ಬೊಗಸೆ ನೀರು ಮೂರು ದಶಕದ ಪಯಣ’ ಎಂಬ ವಿಚಾರ ಸಂಕಿರಣವನ್ನು ಸಂಭ್ರಮ ಸಂಸ್ಥೆಯ ಜಾನಪದ ಗಾಯಕ ಜೋಗಿಲ ಸಿದ್ದರಾಜು ನಡೆಸಿದ್ದು, ಅಲ್ಲಿ ಮಂಡನೆಯಾದ ಪ್ರಬಂಧಗಳನ್ನು ಮಂಜುಳಾ ಜಿ ಅವರು ಸಂಪಾದಿಸಿದ್ದಾರೆ.
ಡಾ.ರಾಜಪ್ಪ ದಳವಾಯಿಯವರ ನಾಟಕಗಳ ಕುರಿತ ವಿಮರ್ಶಾ ಸಂಕಲನವನ್ನು ‘ಡಾ.ರಾಜಪ್ಪ ದಳವಾಯಿಯವರ ನಾಟಕಗಳ ಅವಲೋಕನ’ ಡಾ.ಕೈಲಾಶ್ ಡೋಣಿಯವರು ಕೃತಿಯನ್ನು ಸಂಪಾದಿಸಿದ್ದಾರೆ.
ಡಾ.ಪ್ರದೀಪ್ ಮಾಲ್ಗುಡಿ ಅವರು ಸಂಪಾದಿಸಿರುವ ‘ಪ್ರೀತಿಯ ದಳವಾಯಿ ಮೇಷ್ಟ್ರು’ ರಾಜಪ್ಪ ದಳವಾಯಿ ಅವರ 60ನೇ ವರ್ಷದ ಹುಟ್ಟುಹಬ್ಬದಲ್ಲಿ ಬಿಡುಗಡೆಯಾಗಿದ್ದು, ಈ ಕೃತಿಯಲ್ಲಿ ರಾಜಪ್ಪ ದಳವಾಯಿ ಅವರ ಒಡನಾಡಿಗಳು ಮತ್ತು ವಿದ್ಯಾರ್ಥಿಗಳು ಬರೆದ ಒಟ್ಟು 117 ಲೇಖನಗಳಿವೆ. ಕೆಲವು ಹಳೆಯ ವಿದ್ಯಾರ್ಥಿಗಳು ‘ನಮ್ಮ ಬರಹ ಸೇರಬೇಕಿತ್ತು’ ಎಂದು ಆಕ್ಷೇಪ ರೂಪದ ಅಪೇಕ್ಷೆಪಟ್ಟಿದ್ದರಿಂದ ಈ ಕೃತಿಯನ್ನು ಪರಿಷ್ಕರಿಸಿ ಮುದ್ರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಹೊಸದಾಗಿ ಲೇಖನ ಬರೆದು ಕಳಿಸುವ ರಾಜಪ್ಪ ದಳವಾಯಿ ಅವರ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವನ್ನು ನೀಡಲಾಗಿದ್ದು, ಅಂಥವರು ತಕ್ಷಣವೇ ಲೇಖನ ಕಳಿಸಲು ಕೋರಲಾಗಿದೆ.
ಮೇಲಿನ ಎಲ್ಲ ಕೃತಿಗಳು ದಿನಾಂಕ 31.03.2024ರಂದು ಬೆಂಗಳೂರಿನಲ್ಲಿ ರಾಜಪ್ಪ ದಳವಾಯಿಯವರು ನಿವೃತ್ತಿಯಾಗುವ ದಿನ ಬಿಡುಗಡೆ ಆಗಲಿವೆ.
ಸೂಚನೆಗಳು:
- ದಿನಾಂಕ 10/03/2024ರ ಒಳಗೆ ಕಳುಹಿಸಬೇಕು.
- ಕಡ್ಡಾಯವಾಗಿ ನುಡಿಯಲ್ಲಿ ಟೈಪ್ ಮಾಡಿ ಕೆಳಗಿನ ಈ-ಮೇಯ್ಲ್ ವಿಳಾಸಕ್ಕೆ ಕಳುಹಿಸಬೇಕು.
- ಪ್ರೀತಿಯ ದಳವಾಯಿ ಮೇಷ್ಟ್ರು ಕೃತಿಗೆ ಲೇಖನಗಳನ್ನು ಕಳುಹಿಸಿದವರು ಮತ್ತೊಮ್ಮೆ ಹಳೆಯ ಲೇಖನವನ್ನು ಕಳುಹಿಸುವ ಅಗತ್ಯವಿಲ್ಲ.
- ಈ ಹಿಂದೆ ಲೇಖನಗಳನ್ನು ಕಳುಹಿಸದೇ ಇರುವವರು ಮಾತ್ರ ಲೇಖನಗಳನ್ನು ಕಳಿಸಿ.
ಈ-ಮೇಯ್ಲ್ ವಿಳಾಸ: pradeeplmalgudi@gmail.com
ಸಂಪರ್ಕ ಸಂಖ್ಯೆ: 9844086993




