ಸಣ್ಣ ಎಳೆಯೊಂದನ್ನೇ ಹಿಂಜಿ ಹೇಗೆ ಅದ್ಭುತವಾದ ಸಿನಿಮಾ ಮಾಡಬಹುದು ಎಂಬುದಕ್ಕೆ “ರವಿಕೆ ಪ್ರಸಂಗ” ಒಂದು ಉದಾಹರಣೆ. ಇತ್ತೀಚೆಗೆ ಬರೇ ಹೊಡಿ, ಬಡಿ, ಕೊಚ್ಚು, ಕೊಲ್ಲು ಸಿನಿಮಾಗಳನ್ನೇ ನೋಡಿ, ಥಿಯೇಟರ್ ಬಳಿಯೂ ಸುಳಿಯಬಾರದು ಎಂದುಕೊಂಡವರು ಕೂಡಾ ಕುಟುಂಬ ಸಮೇತ ಸಿನೆಮಾ ಮಂದಿರಕ್ಕೆ ಲಗ್ಗೆ ಇಟ್ಟು, ಭರಪೂರ್ತಿ ಎಂಜಾಯ್ ಮಾಡಬಹುದಾದಂತಹ ಸಿನೆಮಾ ಇದು.
ಚಿತ್ರದ ನಿರ್ದೇಶಕ ಸಂತೋಷ್ ಕೋಡಂಕೇರಿ ಅವರಿಗೆ ಸಿನಿಮಾ ಕಲೆ ಸಿದ್ದಿಸಿದೆ. ಯಾವುದನ್ನು, ಹೇಗೆ, ಎಷ್ಟು ಹೇಳಬೇಕೋ ಅಷ್ಟನ್ನೇ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪಾವನಾ ಸಂತೋಷ್ ಅವರ ಕಥೆ, ಮತ್ತದನ್ನು ಸಿನಿಮಾಕ್ಕೆ ಒಗ್ಗಿಸಿರುವ ಶೈಲಿ ಅನನ್ಯ. ಆರಂಭದಿಂದ ಕೊನೆಯವರೆಗೂ ಸಂಭಾಷಣೆ ಕಚಗುಳಿ ಇಡುತ್ತದೆ. ಟೈಲರ್ ಚಂದ್ರಣ್ಣನ ಪಾತ್ರಧಾರಿ ಸಂಪತ್ ಕುಮಾರ್, ನಾಯಕಿ ಗೀತಾ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಅರಿತು ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.
ಅನುಮಾನವೇ ಬೇಡ; ಗಂಗಾವತಿ ಪ್ರಾಣೇಶ ಅಂಡ್ ಗ್ಯಾಂಗ್ ನಡೆಸಿಕೊಡುವ ಹಾಸ್ಯಾಸ್ಪದ ನಗೆಹಬ್ಬಗಳಲ್ಲಿ ಅವವೇ ಹಳಸಲು, ಡಬ್ಬಾ ಡೈಲಾಗುಗಳನ್ನು ಕೇಳಿಕೇಳಿ ತಲೆಚಿಟ್ಟು ಹಿಡಿದು ನಗುವುದನ್ನೇ ಮರೆತವರನ್ನೂ ಸಹ
“ರವಿಕೆ ಪ್ರಸಂಗ” ಮತ್ತೊಮ್ಮೆ ನಗುವಿನ ಹೊಸಲೋಕಕ್ಕೆ ಕರೆದೊಯ್ಯುತ್ತದೆ.
– ಸಂಗಮ್ ದೇವ್




