ಎಚ್.ಎಸ್.ಆರ್.ಪಿ ನೋಂದಣಿ ಮಾಡದವರಿಗೆ ಸಿಹಿ ಸುದ್ದಿ

2 years ago

ಬೆಂಗಳೂರು: ವಾಹನಗಳ ಸುರಕ್ಷತೆ ದೃಷ್ಟಿಯಿಂದ ರೂಪಿಸಲಾಗಿರುವ ಅತಿ ಭದ್ರತೆಯುಳ್ಳ ನೋಂದಣಿ ಫಲಕ( ಹೆಚ್ ಎಸ್ ಆರ್ ಪಿ) ಪಡೆಯಲು ಪರದಾಡುತ್ತಿರುವ ವಾಹನ ಮಾಲೀಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಹಿ ಸುದ್ದಿ ನೀಡಿದ್ದಾರೆ.

ಸರ್ವರ್ ಸಮಸ್ಯೆ ಸೇರಿದಂತೆ ಹಲವಾರು ತಾಂತ್ರಿಕ ಕಾರಣಗಳಿಂದ ವಾಹನ ಮಾಲೀಕರು ತಮ್ಮ ವಾಹನಗಳಿಗೆ ನಿಗದಿತ ಸಮಯದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಪಡೆಯಲು ಸಾಧ್ಯವಾಗಿಲ್ಲ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಬೇಡಿಕೆ ಆಧರಿಸಿ ಹೆಚ್ ಎಸ್ ಆರ್ ಪಿ ಅಳವಡಿಸುವುದಕ್ಕೆ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ರಾಮಲಿಂಗಾರೆಡ್ಡಿ ವಿಧಾನಪರಿಷತ್ತಿನಲ್ಲಿ ಘೋಷಿಸಿದರು.

ರಾಜ್ಯದಲ್ಲಿ ಈಗಾಗಲೇ 18 ಲಕ್ಷ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಉಳಿದ ವಾಹನಗಳಿಗೂ ಈ ನಂಬರ್ ಪ್ಲೇಟ್ ಅಳವಡಿಸಲು ಮೂರು ತಿಂಗಳ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದರು.

ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವುದು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.

ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವ ಕುರಿತಂತೆ ತಲೆ ಎತ್ತಿರುವ ಕೆಲವು ನಕಲಿ ವೆಬ್ ಸೈಟ್ ಗಳ ಬಗ್ಗೆ ನಿಗಾ ವಹಿಸಲಾಗಿದ್ದು,ಅಂತಹವುಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಅತಿ ಸುರಕ್ಷತಾ ನೋಂದಣಿ ಫಲಕಗಳ ಯೋಜನೆಯನ್ನು ಭದ್ರತೆಯ ದೃಷ್ಟಿಯಿಂದ ಜಾರಿಗೊಳಿಸಲಾಗಿದೆ. ಇದರಿಂದಾಗಿ ವಾಹನಗಳನ್ನು ಬಳಸಿಕೊಂಡು ಎಸಗುವ ಅಪರಾಧಗಳನ್ನು ತಡೆಗಟ್ಟುವುದು ಮತ್ತು ರಸ್ತೆಯ ಮೇಲೆ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನೋಂದಣಿ ಫಲಕಗಳನ್ನು ವಿರೂಪಗೊಳಿಸುವ ಮತ್ತು ನಕಲಿ ನೋಂದಣಿ ಫಲಕಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ ಎಂದರು.

ನೋಂದಣಿ ಫಲಕ ಅಲ್ಯೂಮಿನಿಯಂನಿಂದ ನಿರ್ಮಿತವಾದ “ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ರೇಟ್” ಆಗಿದ್ದು, ಮರುಬಳಕೆ ಮಾಡಲಾಗದ ಎರಡು ಲಾಕ್ಗಳನ್ನು ಬಳಸಿಕೊಂಡು ವಾಹನದ ಮೇಲೆ ಸ್ಥಿರವಾಗಿ ಅಳವಡಿಸಲಾಗುತ್ತದೆ. ನಕಲಿನಿಂದ ರಕ್ಷಿಸಲು 20 ಎಂಎಂ x 20 ಎಂಎಂ ಗಾತ್ರದ ಚಕ್ರದ ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಅನ್ನು ಮುಂಭಾಗ ಮತ್ತು ಹಿಂಭಾಗದ ಎರಡೂ ಪ್ಲೇಟ್ಗಳ ಮೇಲಿನ ಎಡ ಮೂಲೆಯಲ್ಲಿ ಬಿಸಿ ಸ್ಯಾಂಪಿಂಗ್ ಮೂಲಕ ಅಳವಡಿಸಲಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ಆದೇಶದನ್ವಯ ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿರುತ್ತದೆ. ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು 2 ಕೋಟಿ ವಾಹನಗಳು ಇವೆ ಎಂದರು.

Leave a Reply