ಮತ್ತೆ ಹಿಜಾಬ್ ವಿವಾದ ಭಾರೀ ಚರ್ಚೆಯಲ್ಲಿದೆ. “ಹಿಜಾಬ್ ನಿಷೇಧದ ಆದೇಶ ಹಿಂಪಡೆಯುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯನವರು ಡಿ.21ರಂದು ಮೈಸೂರಲ್ಲಿ ಹೇಳಿದ್ದೇ ತಡ ಸಂಘ ಪರಿವಾರದವರು ತಕದಿಮಿ ಕುಣಿಯತೊಡಗಿದ್ದಾರೆ. ಬಿಜೆಪಿ ಅಳಿದುಳಿದ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಇದಕ್ಕಾಗಿಯೇ ಕಾಯುತ್ತಿದ್ದಂತಿದ್ದ ಸುದ್ದಿ ಮಾಧ್ಯಮಗಳು ಕಿಡಿಗೆ ಗಾಳಿ ಊದಿ ಬೆಂಕಿಯಾಗಿಸುವಲ್ಲಿ ನಿರತರಾಗಿದ್ದಾರೆ.
ಹಿಜಾಬ್ ಎಂದರೆ ಯಾಕೆ ಈ ಮತಾಂಧರು ಉರಿದೇಳುತ್ತಾರೆ. ಯಾಕೆ ಸರಕಾರಿ ಶಾಲೆ ಕಾಲೇಜಲ್ಲಿ ಓದುವ ಮುಸ್ಲಿಂ ಹೆಣ್ಮಕ್ಕಳ ಶಿರವಸ್ತ್ರವನ್ನು ದ್ವೇಷಿಸುತ್ತಿದ್ದಾರೆ. ಓದುವ ವಿದ್ಯಾರ್ಥಿಗಳಲ್ಲೂ ಕೋಮುದ್ವೇಷವನ್ನು ಬಿತ್ತಿ ಧರ್ಮದ್ವೇಷವನ್ನು ಬೆಳೆಸುತ್ತಿದ್ದಾರೆ?
ಇದಕ್ಕೆ ಇಸ್ಲಾಮೋಫೋಬಿಯಾ ಎನ್ನುವ ಕಾಯಿಲೆ ಎನ್ನಬಹುದು. ಅನ್ಯ ಧರ್ಮದವರ ಆಚರಣೆ ಆರಾಧನೆ ಉಡುಗೆ ತೊಡುಗೆ ಎಲ್ಲವನ್ನೂ ವಿರೋಧಿಸುವ ಮನೋಭಾವವೇ ಈ ರೋಗದ ಲಕ್ಷಣ. ಈ ಕಾಯಿಲೆಯ ವೈರಸ್ಸನ್ನು ಶಾಲೆ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳ ಮನಸ್ಸಿಗೆ ಇಂಜೆಕ್ಟ್ ಮಾಡುವ ಮೂಲಕ ಮತಾಂಧತೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವೇ ಈ ಹಿಜಾಬ್ ನಿಷೇಧ.
ಎಸ್.ಎಂ.ಕೃಷ್ಣರವರು ಮುಖ್ಯ ಮಂತ್ರಿಯಾಗಿದ್ದಾಗ ಎಲ್ಲಾ ಸರಕಾರಿ ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದರು. ಮುಸ್ಲಿಂ ಹೆಣ್ಮಕ್ಕಳು ಕಾಲೇಜು ಸಮವಸ್ತ್ರದ ಜೊತೆ ತಮ್ಮ ಸಂಪ್ರದಾಯದಂತೆ ತಲೆಗೆ ಹಿಜಾಬ್ ಧರಿಸಿ ಶಿಕ್ಷಣ ಪಡೆಯುತ್ತಿದ್ದರು. ಆಗ ಯಾರಿಗೂ ಹಿಜಾಬ್ ಬಗ್ಗೆ ತಕರಾರಿರಲಿಲ್ಲ. ಆದರೆ ಯಾವಾಗ ಎರಡು ವರ್ಷಗಳ ಹಿಂದೆ ಉಡುಪಿಯ ಶಾಸಕ ರಘುಪತಿ ಭಟ್ ರವರ ಚಿತಾವಣೆಯಿಂದಾಗಿ ಉಡುಪಿಯ ಕಾಲೇಜಿನ ಕೆಲವು ಹುಡುಗರ ತಲೆಯಲ್ಲಿ ಸಂಘ ಪರಿವಾರದವರು ಹಿಂದುತ್ವದ ವಿಷ ತುಂಬಿದರೋ ಆಗ ಹಿಜಾಬ್ ಸಮಸ್ಯೆ ಉಲ್ಬಣಿಸಿತು. “ಅವರು ಹಿಜಾಬ್ ಧರಿಸಿ ಬಂದರೆ ನಾವು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆ” ಎಂದು ಆ ಮೆದುಳು ತೊಳೆಸಿಕೊಂಡ ಹುಡುಗರು ಹಠಕ್ಕೆ ಬಿದ್ದರು. ಆರು ಜನ ಮುಸ್ಲಿಂ ಯುವತಿಯರು ಹಿಜಾಬ್ ಹಕ್ಕಿಗಾಗಿ ಆಗ್ರಹಿಸಿದರು. ಕಾಲೇಜಿನಲ್ಲಿ ಆರಂಭವಾದ ಈ ಕೇಸರಿ ವರ್ಸಸ್ ಹಿಜಾಬ್ ವಿವಾದ ರಾಜಕೀಕರಣಗೊಂಡು ಬೇರೆ ಬೇರೆ ಕಾಲೇಜುಗಳಿಗೂ ಆವರಿಸಿತು. ಸಂಘಿಗಳು ಬೀದಿಗಿಳಿದು ಪ್ರತಿಭಟಿಸಿದರು. ಕಾಲೇಜು ಹುಡುಗರಿಗೆ ಕೇಸರಿ ಶಾಲುಗಳನ್ನು ಕೊಟ್ಟು ಕೆರಳಿಸಿದರು. ಆಗ ಬಿಜೆಪಿ ಸರಕಾರವೇ ಇದ್ದುದರಿಂದ ಕಾಲೇಜು ಆಡಳಿತ ಮಂಡಳಿಯ ಮೇಲೆ ಒತ್ತಡ ಹಾಕಿ 2022 ಜನವರಿ 1 ರಂದು ಉಡುಪಿ ಕಾಲೇಜಿನಲ್ಲಿ ಹಿಜಾಬ್ ಬ್ಯಾನ್ ಮಾಡಿಸಲಾಯ್ತು. 2022 ಜ 31 ರಂದು ಹಿಜಾಬ್ ವಿವಾದ ಹೈಕೋರ್ಟ ಮೆಟ್ಟಿಲೇರಿತು. ಫೆ.5 ರಂದು ಸಮವಸ್ತ್ರ ಕಡ್ಡಾಯ ಮಾಡಿ ಸರಕಾರ ಆದೇಶ ಹೊರಡಿಸಿತು. ಮಾರ್ಚ 15 ರಂದು ಸರಕಾರದ ಆದೇಶವನ್ನು ಹೈಕೋರ್ಟ ಬೆಂಬಲಿಸಿತು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರಲ್ಲಿ ಒಬ್ಬರು ಸಮವಸ್ತ್ರದ ಪರವಾಗಿ ತೀರ್ಪು ನೀಡಿದರೆ, ಇನ್ನೊಬ್ಬರು ಹಿಜಾಬ್ ಪರ ತೀರ್ಪು ನೀಡಿದರು. ಹೀಗಾಗಿ ಈ ಪ್ರಕರಣ ಈಗ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠದ ಮುಂದೆ ಆಮೆಗತಿಯಲ್ಲಿ ಪ್ರಗತಿಯಲ್ಲಿದೆ.
ಸಂಘ ಪರಿವಾರದ ವಿರೋಧ ಹಾಗೂ ಹಿಜಾಬ್ ಪರ ಸಂಪ್ರದಾಯವಾದಿ ಮುಸ್ಲಿಂ ಸಮುದಾಯದವರ ಪ್ರತಿರೋಧದಿಂದಾಗಿ ನೂರಾರು ಮುಸ್ಲಿಂ ಯುವತಿಯರು ಪರೀಕ್ಷೆಯನ್ನು ಬಹಿಷ್ಕರಿಸಿದರು. ಹಾಗೂ ಹಲವರು ಕಾಲೇಜನ್ನೇ ತ್ಯಜಿಸಿದರು. ಈ ಕೇಸರಿ ಮತಾಂಧರ ದ್ವೇಷದಿಂದಾಗಿ ಹಲವಾರು ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾದರು.
ಹೀಗೆ ಮುಸ್ಲಿಂ ಆಚರಣೆಗಳಾದ ಹಿಜಾಬ್, ಹಲಾಲ್, ಆಜಾನ್ ಗಳ ವಿರುದ್ದದ ದ್ವೇಷೋತ್ಪಾದನೆಯಿಂದ ಹಿಂದೂಗಳ ಮತಗಳನ್ನು ಕ್ರೂಢೀಕರಿಸಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂದು ಬಿಜೆಪಿ ಇಂತಹ ಪ್ರಯತ್ನಗಳನ್ನು ಮಾಡುತ್ತಲೇ ಇತ್ತು. ಇದಕ್ಕೆಲ್ಲಾ ಸಂಘ ಪರಿವಾರ ಸಾತ್ ಕೊಟ್ಟಿತ್ತು. ಆದರೆ ಕರ್ನಾಟಕದ ಜನರು ಪ್ರಜ್ಞಾವಂತರಾಗಿದ್ದರಿಂದಾಗಿ, ಈ ಮತಾಂಧರ ದ್ವೇಷ ರಾಜಕಾರಣ ಅರಿತಿದ್ದರಿಂದಾಗಿ 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಹೀನಾಯವಾಗಿ ಸೋಲಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದಿರುವಾಗ ಸಿಎಂ ಸಿದ್ದರಾಮಯ್ಯನವರು ‘ಹಿಜಾಬ್ ನಿಷೇಧದ ಆದೇಶ ಹಿಂಪಡೆಯಲಾಗುವುದು’ ಎಂದು ಹೇಳುವ ಮೂಲಕ ಸಂಘ ಪರಿವಾರದ ಬುಡಕ್ಕೆ ಬಾಂಬು ಸಿಡಿಸಿದರು. ಕಾಂಗ್ರೆಸ್ ವಿರುದ್ದ ಹೂಡಿದ ಎಲ್ಲಾ ಅಸ್ತ್ರಗಳೂ ವಿಫಲವಾಗಿ ಕಂಗೆಟ್ಟು ಕೂತಿದ್ದ ಬಿಜೆಪಿ ಕೈಗೆ ಹಿಜಾಬ್ ಅಸ್ತ್ರ ಸಿಕ್ಕಂತಾಗಿ ಬಿಜೆಪಿಗರು ಖಂಡನಾ ಹೇಳಿಕೆ ನೀಡತೊಡಗಿದರು. ಮುಸ್ಲಿಂ ತುಷ್ಟೀಕರಣ ಎಂದು ಆರೋಪಿಸಿದರು. ನ್ಯಾಯಾಂಗ ನಿಂದನೆ ಎಂದು ಅವಲತ್ತುಕೊಂಡರು. ಸಿದ್ದರಾಮಯ್ಯನವರನ್ನು ತುಘಲಕ್ ಎಂದು ಜರಿದರು. ಟಿಪ್ಪುವಿನ ಅವತಾರವೆಂದು ಹೀಯಾಳಿಸಿದರು. ಇದೆಲ್ಲದರಿಂದ ಸ್ವಲ್ಪ ವಿಚಲಿತರಾದ ಸಿದ್ದರಾಮಯ್ಯನವರು ‘ಹಿಜಾಬ್ ನಿಷೇಧ ತೆರವಿನ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿ ಹತ್ತಿದ್ದ ಬೆಂಕಿಯನ್ನು ಶಮನಗೊಳಿಸಲು ನೋಡಿದರು.
ಸಿದ್ದರಾಮಯ್ಯನವರು ಅನುಭವಸ್ಥ ರಾಜಕಾರಣಿಯಾಗಿದ್ದು ಏನೇ ಮಾತಾಡಿದರು ಅದರ ಹಿಂದೆ ಇನ್ನೇನೋ ಉದ್ದೇಶ ಇರುತ್ತದೆ. ನಿಗಮ ಮಂಡಳಿಗಳಿಗೆ ಆಯ್ಕೆ ವಿಚಾರ ಕಗ್ಗಂಟಾಗಿತ್ತು. ಶಾಲಾ ಶೌಚಾಲಯವನ್ನು ಶಿಕ್ಷಕರು ಮಕ್ಕಳಿಂದ ಸ್ವಚ್ಚಗೊಳಿಸಿದ ಸುದ್ದಿ ಕಳೆದ ಮೂರು ದಿನಗಳಿಂದ ಮಾರ್ದನಿಸುತ್ತಿತ್ತು. ಅದಕ್ಕೂ ಮುನ್ನ ಬರಪರಿಹಾರ ಕೇಳಲು ದೆಹಲಿಗೆ ಹೋಗಿ ಬರುವಾಗ ಐಷಾರಾಮಿ ವಿಶೇಷ ವಿಮಾನದಲ್ಲಿ ಸಿಎಂ ಬಂದರು ಎನ್ನುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಈ ನಕಾರಾತ್ಮಕ ಸುದ್ದಿಗಳನ್ನು ನಿಲ್ಲಿಸಲು ಹೊಸ ವಿವಾದ ಹುಟ್ಟಿಸಬೇಕಿತ್ತು. ಅದಕ್ಕಾಗಿ ಹಿಜಾಬ್ ನಿಷೇಧ ವಾಪಸಾತಿ ಮಾತು ಸಿದ್ದರಾಮಯ್ಯನವರ ಬಾಯಲ್ಲಿ ಬಂತು. ನ್ಯೂಸ್ ಚಾನೆಲ್ಗಳು ಹಿಂದಿನ ಸಮಸ್ಯೆ ಬಿಟ್ಟು ಹೊಸ ವಿವಾದಕ್ಕೆ ಪ್ರಾಮುಖ್ಯತೆ ಕೊಟ್ಟರು. ಬಿಜೆಪಿಗರು ಉರಿದುರಿದು ಬಿದ್ದರು. ಮುಸ್ಲಿಂ ಬಾಂಧವರು ಖುಷಿಯಾದರು, ಹಿಜಾಬ್ ಸಂತ್ರಸ್ತ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದರು. ಕಾಂಗ್ರೆಸ್ಸಿಗರು ಸಿಎಂ ಮಾತುಗಳನ್ನು ಸಮರ್ಥಿಕೊಂಡು ಐಕ್ಯತೆ ತೋರಿದರು. ಸಿದ್ದರಾಮಯ್ಯನವರ ತಂತ್ರಗಾರಿಕೆ ಅಂದುಕೊಂಡಂತೆ ಕೆಲಸ ಮಾಡಿತು. ಒಂದೇ ಕಲ್ಲಲ್ಲಿ ಹಲವು ಗುರಿ ತಲುಪಿಯಾಗಿತ್ತು. ವಿವಾದ ತೀವ್ರತೆ ಪಡೆಯುತ್ತಿದ್ದಂತೆಯೇ ” ಹಿಜಾಬ್ ನಿಷೇಧ ವಾಪಸ್ ಕುರಿತು ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗುವುದು” ಎಂದು ಹೇಳಿದ ಸಿಎಂ ರವರು ಅದರ ತೀವ್ರತೆಯನ್ನು ಕಡಿಮೆ ಮಾಡಿ ಸುಮ್ಮನಾದರು.
ಇದೇ ಅಸಲಿ ರಾಜಕಾರಣ. ಪಕ್ಷ ಯಾವುದೇ ಇರಲಿ ವಿಷಯಾಂತರ ಮಾಡುವ ಮೂಲಕ, ಒಂದು ವಿವಾದ ನಿಯಂತ್ರಿಸಲು ಇನ್ನೊಂದು ವಿವಾದ ಹುಟ್ಟಿಹಾಕುವ ಮೂಲಕ ರಾಜಕಾರಣ ಮಾಡುವುದೇ ತಂತ್ರಗಾರಿಕೆಯಾಗಿದೆ. ಇದನ್ನು ಎಲ್ಲಾ ಪಕ್ಷಗಳೂ ಮಾಡುತ್ತವೆ. ಸಿದ್ದರಾಮಯ್ಯನವರೂ ಅದಕ್ಕೆ ಹೊರತಾಗಿಲ್ಲ.
ನಿಜಕ್ಕೂ ಹಿಜಾಬ್ ನಿಷೇಧ ಹಿಂಪಡಿಯಲಾಗುತ್ತದಾ? ನೋ ಚಾನ್ಸ್. ಲೋಕಸಭೆ ಚುನಾವಣೆಯಾಗುವವರೆಗಂತೂ ಆ ಸಾಧ್ಯತೆಗಳಿಲ್ಲ. ವಿರೋಧಿಗಳ ಕೈಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ದಡ್ಡತನವನ್ನು ಕಾಂಗ್ರೆಸ್ ಮಾಡುವುದಿಲ್ಲ. ಮುಸ್ಲಿಂ ಸಮುದಾಯದಿಂದ ಶಾಲೆಗಳಲ್ಲಿ ಹಿಜಾಬ್ ಇರಲಿ ಎಂದು ಒತ್ತಾಯ ಬಂದಿದ್ದೇ ಆದರೆ ಸುಪ್ರೀಂ ಕೋರ್ಟಿನ ತೀರ್ಪಿನ ನೆಪ ಹೇಳುವುದಂತೂ ಇದ್ದೇ ಇದೆ.
ಇವೆಲ್ಲವೂ ಪಾಲಿಟಿಕಲ್ ಸ್ಟಂಟ್ಸ್. ಆದರೆ ಈ ಹಿಜಾಬ್ ಪರ ವಿರೋಧಗಳ ಗಲಾಟೆಯಲ್ಲಿ ಶಿಕ್ಷಣ ವಂಚಿತ ವಿದ್ಯಾರ್ಥಿನಿಯರ ಬಗ್ಗೆ ಯೋಚಿಸುವವರು ಯಾರು? ಹಿಜಾಬ್ ಇಲ್ಲದೇ ಕಾಲೇಜಿಗೆ ಕಳುಹಿಸುವುದಿಲ್ಲವೆಂದು ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದವರು ನಿರ್ಬಂಧಿಸುತ್ತಿದ್ದಾರೆ. ಹಿಜಾಬ್ ಹಾಕಿದರೆ ಶಾಲೆಗೆ ಬರಬಾರದು ಎಂದು ಬಿಜೆಪಿ ಸರಕಾರದ ಆದೇಶ ಹಾಗೂ ಹೈಕೋರ್ಟ್ ತೀರ್ಪು ಹೇಳುತ್ತದೆ. ಸುಪ್ರೀಂ ಕೋರ್ಟಲ್ಲಿ ಅಂತಿಮ ತೀರ್ಮಾನ ಬಾಕಿ ಇದೆ. ಇದೆಲ್ಲದರಿಂದಾಗಿ ಹಿಜಾಬ್ ದಾರಿ ಹೆಣ್ಣುಮಕ್ಕಳ ಶೈಕ್ಷಣಿಕ ಭವಿಷ್ಯ ಸರ್ವನಾಶವಾಗುತ್ತಿದೆ. ಸಂಘ ಪರಿವಾರದ ಧರ್ಮದ್ವೇಷದ ರಾಜಕಾರಣಕ್ಕೆ ಪಾಪ ಓದಲು ಬಯಸುವ ಹೆಣ್ಮಕ್ಕಳು ಬಲಿಪಶುವಾಗಿದ್ದಾರೆ. ಪಾಲಿಟಿಕಲ್ ಗೇಮಿಗೆ ದಾಳವಾಗಿದ್ದಾರೆ. ಇದಕ್ಕೆ ಪರಿಹಾರ ಏನು? ಬೇಟಿ ಪಡಾವೋ, ಬೇಟಿ ಬಚಾವೋ ಎನ್ನುವ ಮೋದಿಯವರ ಘೋಷಣೆಯಲ್ಲಿ ಮುಸ್ಲಿಂ ಸಂಜಾತ ಬೇಟಿಗಳು ಬರೋದಿಲ್ವಾ. ಕೇವಲ ಒಂದು ಶಿರವಸ್ತ್ರವನ್ನು ನೆಪವಾಗಿಟ್ಟು ಅನೇಕ ಬೇಟಿಗಳನ್ನು ಓದಿನಿಂದ ವಂಚಿಸುತ್ತಿರುವ ಮತಾಂಧರಿಗೆ ಮಾನವೀಯತೆ ಎಂಬುದೇ ಇಲ್ವಾ? ಕಾಲವೇ ಉತ್ತರಿಸಬೇಕು.
- ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ




