ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಸ್ಮಾರಕ ನಿರ್ಮಾಣ ಒತ್ತಾಯಿಸಿ ಫ್ರೀಡಂ ಪಾರ್ಕ್ ಅವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಮತ್ತು ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಶ್ರೀನಿವಾಸ್, ರವಿಕೃಷ್ಣಾ ರೆಡ್ಡಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮತ್ತು ರಾಜ್ಯಾದ್ಯಂತ ಇರುವ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಕಾಡಿನಲ್ಲಿ ಆ ಸಿಂಹ ನಾಡಿನಲ್ಲಿ ಸಾಹಸಿಸಿಂಹ ಇರಬೇಕು ಎಂದು ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಬೇಕು ಮತ್ತು ಕಳೆದ ಐದು ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲಾಗಿದೆ ಎಂದು ಪ್ರತಿಭಟನಾ ನಿರತರು ಹೇಳಿದರು.

ದೇಶ, ವಿದೇಶ ಮತ್ತು ನಾಡಿನಲ್ಲಿ ಕೊಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ನಿರಾಶೆ ಮಾಡಬೇಡಿ, ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದರು.




