ನ್ಯಾಯಾಂಗದ ವಿಚಾರಣೆಯ ಸಂದರ್ಭದಲ್ಲಿ ಸಂಬಂಧಿತ ಪ್ರಕರಣದ ತಾತ್ವಿಕತೆಯು ಸಂವಿಧಾನ ಪೀಠದ ಆದ್ಯತೆಯಾಗಿರುವುದಿಲ್ಲ. ಎಂತಹ ವಿಚಾರಗಳನ್ನು ಮಂಡಿಸಿದರೂ ಸಹ ಅದನ್ನು speculation ಎಂದು ತಳ್ಳಿ ಹಾಕಿ ಬಿಡುತ್ತಾರೆ.
ಕಲಮು 370ನ್ನು ರದ್ದುಗೊಳಿಸಿದ ವಿಧಾನದ ತಾಂತ್ರಿಕತೆ ಕುರಿತು ಮಾತ್ರ ಸಂವಿಧಾನ ಪೀಠಕ್ಕೆ ಮುಖ್ಯವಾಗುತ್ತದೆ. ಆದರೆ ಅದನ್ನು ರದ್ದುಗೊಳಿಸಿದ ಹಿಂದಿನ ಆರೆಸ್ಸೆಸ್ ನ ಹಿಂದುತ್ವ ಸಿದ್ಧಾಂತದ ಹಿತಾಸಕ್ತಿಯನ್ನು ಪೀಠಕ್ಕೆ ಸಂಬಂಧಿಸಿಲ್ಲ ಎಂದು ತಿರಸ್ಕರಿಸುತ್ತಾರೆ. ಯಾಕೆಂದರೆ ಇದು ವ್ಯಕ್ತಿನಿಷ್ಠವಾದದ್ದು (subjective) ಎಂದೇ ನಂಬಿರುತ್ತಾರೆ. ಹಾಗಿದ್ದರೆ ವಸ್ತುನಿಷ್ಠವಾಗಿರುವುದು (objective) ಯಾವುದು ಎನ್ನುವ ಪ್ರಶ್ನೆಗೆ ಪೀಠದ ಬಳಿ ಉತ್ತರವಿರುವುದಿಲ್ಲ. ಇದು ತಲೆ ಹರಟೆ ಎಂದು ಟೀಕಿಸುತ್ತಾರೆ.
ಹೀಗಾಗಿ 2019ರಲ್ಲಿ ಏಕಪಕ್ಷೀಯವಾಗಿ ಕಾಶ್ಮೀರದ ರಾಜ್ಯದ ಸ್ಥಾನಮಾನ ಕಿತ್ತುಕೊಂಡಿರುವುದು, ರಾಜ್ಯ ಸರ್ಕಾರ ಮತ್ತು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಕುರಿತು ಕೇವಲ ತಮ್ಮ ಅಭಿಪ್ರಾಯ ಮಾತ್ರ ದಾಖಲಿಸುತ್ತಾರೆ. ಇದಕ್ಕೂ ತೀರ್ಪಿಗೆ ಯಾವುದೇ ಸಂಬಂಧವಿರುವುದಿಲ್ಲ. ರಾಜ್ಯದ ಸ್ಥಾನಮಾನ ಕಿತ್ತುಕೊಂಡು ಕೇಂದ್ರದ ಆಡಳಿತ ಹೇರಿದ ನಂತರದ ಆ ಸರ್ವಾಧಿಕಾರಿ ನೀತಿಗಳ ಉಕ್ಕಿನ ಆಡಳಿತ, ಪ್ರಜೆಗಳ ಸ್ವಾತಂತ್ರವನ್ನೇ ಕಸಿದುಕೊಂಡು ನಡೆಸಿದ ದೌರ್ಜನ್ಯ ಮುಂತಾದ ಸಂಗತಿಗಳ ಕುರಿತು ಒಂದು passing remark ಹೇಳಬಹುದು ಅಥವಾ ಇಲ್ಲವೇ ಇಲ್ಲ.
ಆದರೂ ಕಡೆಗೂ ಪ್ರಜಾಪ್ರಭುತ್ವದ ಗೋರಿಯ ಮೇಲೆ, ಭಯದ ನೆರಳಿನಲ್ಲಿ ಹೇರಲ್ಪಟ್ಟ ಆಡಳಿತ ಸರಿಯೇ? ಇದರಿಂದ ಭಯೋತ್ಪಾದನೆ ಕಡಿಮೆಯಾಗಿದೆಯೇ? ನಾಗರಿಕರ ಹತ್ಯೆ ಕುಂಠಿತವಾಗಿದೆಯೇ? ಒಂದು ವೇಳೆ ಆಗಿದ್ದರೆ ಈ ಸರ್ವಾಧಿಕಾರಿ ನೀತಿಯೇ ಪರಿಹಾರವೇ? ಏನೂ ವ್ಯತ್ಯಾಸವಾಗದೆ ಯಥಾಸ್ಥಿತಿ ಮುಂದುವರಿದಿದ್ದರೆ ಕೇಂದ್ರ ಸರ್ಕಾರಕ್ಕೆ ಯಾವ ಶಿಕ್ಷೆ ಕೊಡಬೇಕು? ಈ ತಾತ್ವಿಕತೆ ಕುರಿತು ಸಂವಿಧಾನ ಪೀಠಕ್ಕೆ ಆಸಕ್ತಿ ಇಲ್ಲ.
ಹಾಗಿದ್ದರೆ ಇಂದು ಸುಪ್ರೀಂಕೋರ್ಟ್ ಏನು ತೀರ್ಪು ಕೊಡುತ್ತದೆ? ಅದೇ ಎಲ್ಲರಿಗೂ ಅಚ್ಚರಿಯಾಗಿರುವುದು, ಕುತೂಹಲವಲ್ಲ.
ವಿ. ಸೂ. 1 : ಇಂದಿನ ತೀರ್ಪು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಣಾಮ ಬೀರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಭಾರತದ ಪ್ರಜಾಪ್ರಭುತ್ವದ ದಿಕ್ಕು ಮತ್ತು ಗತಿಯ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಈಗಾಗಲೇ ರಾಮ ಜನ್ಮ ಭೂಮಿ ವಿವಾದ ಕುರಿತಾದ ತೀರ್ಪು ಪ್ರಜಾಪ್ರಭುತ್ವದ ತಳಹದಿಯನ್ನೇ ಶಿಥಿಲಗೊಳಿಸಿದೆ. ಇನ್ನು ಇದು….
ವಿ.ಸೂ 2: ಮೇಲಿನದೆಲ್ಲಾ ಸುಳ್ಳಾಗಿ ಸಕಾರಾತ್ಮಕ ತೀರ್ಪು ಬಂದರೆ ಕೆಳಕ್ಕೆ ಬಿದ್ದು ಮೀಸೆ ಮಣ್ಣಾದರೂ ಸಹ ಖುಷಿ ಪಡುತ್ತೇನೆ.
- ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




