“ಇತಿಹಾಸದಲ್ಲಿ ಅನೇಕ ರಾಜರು ಹೊಸ ಕರೆನ್ಸಿಯನ್ನು ಜಾರಿಗೆ ತಂದಿದ್ದಾರೆ. ಕೆಲ ರಾಜರು ಹೊಸ ನೋಟುಗಳನ್ನು ಪರಿಚಯಿಸಿದರೂ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲಿಲ್ಲ. ಆದರೆ, 700 ವರ್ಷಗಳ ಹಿಂದಿನ ರಾಜ ಮೊಹಮದ್ ಬಿನ್ ತುಘಲಕ್ ಮಾತ್ರ ಹಳೆಯ ಕರೆನ್ಸಿಯನ್ನು ಹಿಂತೆಗೆದುಕೊಂಡು ಹೊಸ ಕರೆನ್ಸಿಯನ್ನು ಪರಿಚಯಿಸಿದ. ಅವನು ಕೂಡ ನೋಟುಗಳನ್ನು ನಿಷೇಧಿಸಿದ್ದ” ಎಂದು ಮಾಹಿತಿ ನೀಡುವ ಮೂಲಕ ಯಶವಂತ್ ಸಿನ್ಹಾ ಪರೋಕ್ಷವಾಗಿ ನೋಟು ನಿಷೇಧವನ್ನು ಖಂಡಿಸಿದ್ದರು. ನೋಟು ನಿಷೇಧದ ನಿರ್ಧಾರದಿಂದಾಗಿ ದೇಶದ 3.75 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅವರು ಆರೋಪಿಸಿದ್ದರು.
“ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದಿಂದಾಗಿ ದೇಶಕ್ಕೆ ಒಟ್ಟು 1,28,000 ಕೋಟಿ ರೂ. ನಷ್ಟವಾಗಿದೆ. ನೋಟು ನಿಷೇಧದ ನಂತರ ಹೊಸ ನೋಟುಗಳ ಮುದ್ರಣಕ್ಕಾಗಿ ಅಪಾರ ಪ್ರಮಾಣದ ಹಣವನ್ನು ವೆಚ್ಚ ಮಾಡಲಾಗಿದೆ. ಇದರಿಂದಾಗಿ ಆರ್ಥಿಕ ಬೆಳವಣಿಗೆಯ ದರ 1.5ರಷ್ಟು ಕುಸಿದಿದೆ. ಈ ನಷ್ಟದ ಹೊರೆಯ ಪ್ರಮಾಣ 2,25,000 ಕೋಟಿ ರೂ.ಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಬಹುದು. ಜಿಎಸ್ಟಿ ಮತ್ತು ನೋಟು ನಿಷೇಧ ನಿರ್ಧಾರಗಳು ಕೇವಲ ಮಾಧ್ಯಮಗಳ ಮುಂದಿನ ಪ್ರದರ್ಶನ. ನಾವು ಯಾವುದಕ್ಕಾಗಿ ಏನನ್ನು ಮಾಡಿದ್ದೇವೆ ಎಂದು ಆಲೋಚಿಸಬೇಕು. ಈಗ ಎಲ್ಲವನ್ನೂ ಮಾಡುತ್ತಿರುವುದು ಕೇವಲ ಮಾಧ್ಯಮಗಳ ಮುಂದೆ ತೋರಿಸಿಕೊಳ್ಳುವ ಸಲುವಾಗಿ” ಎಂದು ಅವರು ಪರೋಕ್ಷವಾಗಿ ಮೋದಿಯವರನ್ನು ಟೀಕಿಸಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಯಶವಂತ್ ಸಿನ್ಹಾ ಅವರು ವಿತ್ತ ಸಚಿವರಾಗಿದ್ದರು.
ಕಳೆದ 70 ವರ್ಷಗಳಲ್ಲಿ ಏನೂ ನಡೆದಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಸಂಘ ಪರಿವಾರದವರನ್ನು ಉದ್ದೇಶಿಸಿ, “ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವನ್ನು ನಾವು ಮರೆಯಬಾರದು. ಅವರು ಏನನ್ನೂ ಮಾಡಿಲ್ಲ ಎನ್ನುವುದಾದಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿದ್ದು ಏಕೆ?” ಎಂದು ಪ್ರಶ್ನಿಸಿದ್ದರು. ಈ ಮೂಲಕ 70 ವರ್ಷಗಳಲ್ಲಿ ಅಭಿವೃದ್ಧಿಯಾಗಿಯೇ ಇಲ್ಲ ಎಂಬ ಮೋದಿಯವರ ಮಾತು ಸುಳ್ಳೆಂದು ತೋರಿಸಿದ್ದರು.
‘14ನೇ ಶತಮಾನದಲ್ಲಿ ಕೆಲವೇ ಕಾಲ ಆಳ್ವಿಕೆ ನಡೆಸಿದ್ದ ತುಘಲಕ್ ವಿವಾದಾತ್ಮಕ ನಿರ್ಧಾರಗಳಿಂದ ಕುಖ್ಯಾತನಾಗಿದ್ದಾನೆ. ದೆಹಲಿಯಿಂದ ದೌಲತಾಬಾದ್ಗೆ ರಾಜಧಾನಿಯನ್ನು ಬದಲಾಯಿಸುವ ವಿವಾದಾತ್ಮಕ ನಿರ್ಧಾರವನ್ನು ಅವನು ತೆಗೆದುಕೊಂಡಿದ್ದ. ಆದರೆ, ತನ್ನ ನಿರ್ಧಾರವನ್ನು ಬದಲಾಯಿಸಿದ್ದ ಆತ, ಮತ್ತೆ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಿದ್ದ. ಈ ವೇಳೆ ಸಾವಿರಾರು ಜನ ನೆಲೆ ಕಳೆದುಕೊಂಡು ಅತಂತ್ರರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ತನ್ನ ತಪ್ಪನ್ನು ತಿದ್ದಿಕೊಳ್ಳುವ ಸಲುವಾಗಿ ತೆಗೆದುಕೊಂಡ ನಿರ್ಧಾರದಿಂದಾಗಿ ಜನ ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದರು. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆಯುವ ಪರಿಸ್ಥಿತಿಯಿಂದ ಜನ ಹಿಡಿಶಾಪ ಹಾಕಿದ್ದರು. ನೋಟು ನಿಷೇಧ ನಿರ್ಧಾರ ಕೈಗೊಂಡ ನಂತರ ಕೂಡ ದೇಶದಲ್ಲಿ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು’ ಎಂದು ಯಶವಂತ್ ಸಿನ್ಹಾ ತೀವ್ರವಾಗಿ ಕುಟುಕಿದ್ದರು.
ತುಘಲಕ್ ಇನ್ನೊಂದು ತಪ್ಪು ನಿರ್ಧಾರವನ್ನು ಕೈಗೊಂಡಿದ್ದ. ಲೋಹದ ನಾಣ್ಯದ ಬದಲಿಗೆ ಚರ್ಮದ ನಾಣ್ಯವನ್ನು ಚಲಾವಣೆಗೆ ತಂದಿದ್ದ. ವಿಶೇಷವೆಂದರೆ, ಈ ನಾಣ್ಯಗಳನ್ನು ಜನರೇ ಟಂಕಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದ. ಇದು ಅಂದಿನ ಆರ್ಥಿಕ ದಿವಾಳಿತನಕ್ಕೆ ಕಾರಣವಾಗಿತ್ತು. ಕಡೆಗೆ ಖೋಟಾ ನಾಣ್ಯಗಳ ಸಂಖ್ಯೆ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಭಾರತದಲ್ಲೂ ಅಂತಹ ದಿವಾಳಿತನವನ್ನು ಸೃಷ್ಟಿಸಿದ ಕೀರ್ತಿ ಮೋದಿಯವರಿಗೆ ಸಲ್ಲುವುದರಿಂದ ಮೊಹಮದ್ ಬಿನ್ ತುಘಲಕ್ ಅವರ ಬಿರುದಾವಳಿಗಳಿಗೆ ಅವರು ಅರ್ಹರೆನಿಸುತ್ತಾರೆ.
- ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ



