ಮಡಿಕೇರಿ: ಕರ್ನಾಟಕ ರೈತ ಸಂಘ (KRS-AIKKS) ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ (AIRWO), ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಧರಣಿ ನಡೆಸಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ 24.11.2023ರಂದು ಜಿಲ್ಲೆಯ ಎಲ್ಲಾ ಅಧಿಕಾರಿಗಳ ಹಾಗೂ ಸಂಘಟನೆಯ ಮುಖಂಡರ ಜಂಟಿ ಸಭೆ ಕರೆಯಲು ತೀರ್ಮಾನಿಸಿದರು. ಈ ಕಾರಣದಿಂದ ಅನಿರ್ದಿಷ್ಟ ಧರಣಿ ಹೋರಾಟವನ್ನು ಕೈ ಬಿಡಲಾಯಿತು.
ಇದೇ ವೇಳೆ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್ ನಿರ್ವಾಣಪ್ಪ ಮಾತನಾಡಿ, ಸರ್ಕಾರದ ಅಧಿಕೃತ ಸರ್ವೆ ವರದಿಯ ಪ್ರಕಾರ ಕೊಡುಗು ಜಿಲ್ಲೆಯಲ್ಲಿ 2800 ಆದಿವಾಸಿಗಳು ಲೈನ್ ಮನೆಯಲಿದ್ದಾರೆ ಮತ್ತು 10000 ಆದಿವಾಸಿಗಳಿಗೆ ನಿವೇಶನ ಇಲ್ಲವಂತೆ. ಅಂದರೆ ಈ ಸಂಖ್ಯೆ ಇನ್ನೂ ಎರಡು ಪಟ್ಟು ಹೆಚ್ಚಿದೆ ಎಂದರು.
ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ ಮಾತನಾಡಿ, ಭೂ ಮಂಜೂರಾತಿ, ಎಪಿಎಂಸಿ ತಿದ್ದುಪಡಿ, ಭೂ ಗುತ್ತಿಗೆ ಕಾಯ್ದೆ ಕುರಿತು ದಿನಾಂಕ 16.11.2023ರಂದು ಸಭೆ ಕೆರೆದು ಮುಂದೂಡಿದ ಮುಖ್ಯಮಂತ್ರಿ ಸಿದ್ದರಾಮಯ್ಯವರನವರ ನಿಲುವಿನ ಬಗ್ಗೆ ರಾಜ್ಯದ ಅನೇಕ ಸಂಘಟಕರು ಬೇಜಾರುಪಟ್ಟುಕೊಂಡಿದ್ದಾರೆ ಎಂದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ 3 ತಿಂಗಳಲ್ಲಿ ಅಕ್ರಮ ಸಕ್ರಮ ಕಾಯ್ದೆ ಅಡಿಯಲ್ಲಿ 5,15,257 ಅರ್ಜಿ ಹಾಕಿದ ಎಲ್ಲರಿಗೆ ಭೂ ಮಂಜಾರಾತಿ ಕೊಡಲಾಗುತ್ತೆ ಎಂದು ಹೇಳುತ್ತಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಸಾಗುವಳಿದಾರರ ಹೊಟ್ಟೆಯ ಮೇಲೆ ಹೊಡೆಯುವ ಮಾತನಾಡಿದ್ದಾರೆ. ಭೂ ಹಂಚಿಕೆ ವಿಷಯದಲ್ಲಿ ಸಚಿವರು ಪರಸ್ಪರ ವಿರುದ್ಧ ಹೇಳಿಕೆ ಕೊಡುವುದರಿಂದ ಜನ ಆಕ್ರೋಶಗೊಂಡಿದ್ದಾರೆ ಎಂದರು.
ಲ್ಯಾಂಡ್ ಗ್ರ್ಯಾಂಟ್ ಕಮಿಟಿಗಳನ್ನು ರಚನೆ ಮಾಡದೆ ಭೂ ಮಂಜಾರಾತಿ ಕೊಡುವುದು ಹೇಗೆ ಸಾಧ್ಯ? ಕೃಷ್ಣ ಬೈರೆಗೌಡರು ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚಿಸಿ ಸಾಗುವಳಿದಾರರ ಪರ ನಿಲ್ಲಬೇಕು. ರಾಜ್ಯಾದ್ಯಂತ ಬರದ ಸಂಕಷ್ಟಕ್ಕೆ ತುತ್ತಾಗಿರುವ ರೈತರು, ಬಡವರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಯಾವುದೇ ಬರ ಪರಿಹಾರ ಕೊಡುತ್ತಿಲ್ಲ. ಬಾಯಿ ಮಾತಿನ ಉಪಚಾರದಿಂದ ಜನರ ಹೊಟ್ಟೆ ತುಂಬುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಪರಸ್ಪರ ಆರೋಪದಲ್ಲಿ ತೊಡಗಿ ಕಾಲ ಹರಣ ಮಾಡುತ್ತಿವೆ ಎಂದು ಆರೋಪಿಸಿದರು.
ಸಿಪಿಐ ಎಂಎಲ್ ಆರ್ ಐ ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ, ರೈತ ಸಂಘದ ಸಿದ್ದಯ್ಯ, ಪ್ರಕಾಶ, ಮೋಹನ, ಜಗದೀಶ, ಮಹಿಳಾ ಸಂಘದ ಅನಿತಾ, ಸೌಂದರ್ಯ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.




