ಹಂತಕನಿಗೆ ಶೀಘ್ರದಲ್ಲೇ ಕಠಿಣ ಶಿಕ್ಷೆಗೆ ಕ್ರಮ: ಲಕ್ಷ್ಮೀ ಹೆಬ್ಬಾಳ್ಕರ್

2 years ago

#Action #punish #murderer #soon #LakshmiHebbalkar #Udupi

ಉಡುಪಿ: ಹಂತಕ ಮೃಗೀಯ ರೀತಿಯಲ್ಲಿ ವರ್ತಿಸಿದ್ದು, ಆತನಿಗೆ ಶೀಘ್ರದಲ್ಲೇ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ, ಮಹಿಳಾ-ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.

ನಾಲ್ವರ ಹತ್ಯೆ ಪ್ರಕರಣದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಅನಂತರ ಪ್ರತಿಕ್ರಿಯೆ ನೀಡಿದ ಅವರು, ಆರೋಪಿ ಕೊಲೆ ಮಾಡಿ ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿನ ನೀರಾವರಿ ಇಲಾಖೆಯ ಮಾಜಿ ಅಧಿಕಾರಿ ಮನೆಯಲ್ಲಿ ಅಡಗಿಕೊಂಡಿದ್ದ. ಕೃತ್ಯದ ಬಗ್ಗೆ ಆಶ್ರಯ ನೀಡಿದ ಮನೆಯವರಿಗೆ ತಿಳಿದಿರಲಿಲ್ಲ. ಆತನ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ ಎಂದರು.

ಪ್ರಕರಣವನ್ನು ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಸರ್ಕಾರಿ ಅಭಿಯೋಜಕರ ನೇಮಕ ಕುರಿತಂತೆ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ. ಸರ್ಕಾರ ಕಾನೂನಾತ್ಮಕ ನೆಲೆಯಲ್ಲಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.

ಉಡುಪಿ ಜಿಲ್ಲೆಯ ಜನ ಶಾಂತಿಪ್ರಿಯರು, ಜನವಸತಿ ಪ್ರದೇಶದಲ್ಲಿ ಘಟನೆ ನಡೆದಿರುವುದು ಆಘಾತ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇಂತಹದ್ದಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಅಳವಡಿಕೆ ಸೇರಿದಂತೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಸೂಚಿಸುತ್ತೇನೆ ಎಂದರು.

ಘಟನೆ ನಡೆದ ತಕ್ಷಣ ನಾನು ಸ್ಥಳಕ್ಕೆ ಬರಲಿಲ್ಲ ಎಂಬುದಕ್ಕೆ ಹೆಚ್ಚಿನ ಮಹತ್ವ ನೀಡಬಾರದು. ನಾನು ಅಂದು ಬೆಳಗಾವಿಯಲ್ಲಿ ಇದ್ದೆ. ಬೆಳಗಾವಿಯಿಂದ ಉಡುಪಿಗೆ ರೈಲು ಅಥವಾ ವಿಮಾನದ ಸೌಲಭ್ಯ ಇಲ್ಲ. ನಾನು ಎಲ್ಲೇ ಇದ್ದರೂ ಜಿಲ್ಲಾಡಳಿತ ಹಾಗೂ ಕುಟುಂಬದ ಸದಸ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಜವಾಬ್ದಾರಿ ನಿಭಾಯಿಸಿದ್ದೇನೆ. ನಿನ್ನೆ ಸಚಿವ ಸಂಪುಟ ಸಭೆ ಮುಗಿಸಿದ ಬಳಿಕ ಇಂದು ಇಲ್ಲಿಗೆ ಆಗಮಿಸಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು.

ಸರ್ಕಾರ ಕುಟುಂಬದವರ ಜೊತೆಯಲ್ಲಿದೆ. ಪೊಲೀಸರು 60 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕುಟುಂಬದ ಸದಸ್ಯರಿಗೆ ಆದಷ್ಟು ಬೇಗ ನ್ಯಾಯ ದೊರಕಿಸಲು ಸಾಧ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.

ಅನಂತರ ಉಡುಪಿಯ ಗಂಗೊಳ್ಳಿಯ ಬಂದರಿನಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಆಕಸ್ಮಿಕ ನಡೆದಲ್ಲೇ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಚರ್ಚಿಸಿದರು.

ದುರ್ಘಟನೆಯಲ್ಲಿ 9 ಬೋಟ್ಗಳು, ಎರಡು ದೋಣಿಗಳು ಸಂಪೂರ್ಣ ಸುಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಈ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು. ಅಗ್ನಿ ದುರಂತದಿಂದ ಸುಮಾರು 13 ರಿಂದ 15 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಇನ್ನು 15 ದಿನಗಳಲ್ಲಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು.

Leave a Reply