ಧಾರವಾಡ: ಧಾರವಾಡ ಕರ್ನಾಟಕ ಲೋಕಾಯುಕ್ತ ಪೊಲೀಸ್ ಕಛೇರಿಯ ಪೊಲೀಸ್ ಅಧಿಕಾರಿಗಳ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ನವೆಂಬರ್ 20 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುಂದಗೋಳ ಮತ್ತು ಅಳ್ನಾವರದಲ್ಲಿ ಜರುಗಿಸಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಧಾರವಾಡ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಕ್ಟೊಬರ್ 20ರಂದು ಕುಂದಗೋಳ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯಾಲಯ ಸಭಾಭವನದಲ್ಲಿ ಹಾಗೂ ಅಳ್ನಾವರ ತಾಲೂಕಿನ ಪಟ್ಟಣ ಪಂಚಾಯತ್ ಕಾರ್ಯಾಲಯ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರವರು ಜಿಲ್ಲೆಯ ಸಾರ್ವಜನಿಕರಿಂದ ದೂರು ಸ್ವೀಕಾರ ಮಾಡುವವರಿದ್ದು, ಯಾವುದೇ ಸರಕಾರಿ ಅಧಿಕಾರಿ, ನೌಕರರು ಸರ್ಕಾರಿ ಸೇವೆ ಒದಗಿಸುವವಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ, ಅನಾವಶ್ಯಕ ವಿಳಂಬ ಮಾಡುತ್ತಿದ್ದಲ್ಲಿ, ಯಾವುದಾದರು ಸರ್ಕಾರಿ ಭೂಮಿಗಳ ಒತ್ತುವರಿಯಾಗಿದ್ದಲ್ಲಿ, ಕಾಮಗಾರಿಗಳಲ್ಲಿ ಅಕ್ರಮ ಅಥವಾ ಕಳಪೆ ಕಾರ್ಯ ನಡೆದಿದ್ದಲ್ಲಿ, ಆ ಬಗ್ಗೆ ದೂರು ನೀಡಬಹುದಾಗಿದೆ ಎಂದಿದ್ದಾರೆ.
ಈ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



