ನನ್ನೂರಿನ ಯುವಕ ಮಂಡಲಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

2 years ago

#SunilKumarBajal #Pakkaladka #DistrictRajyotsavaAward #YuvakaMandal #Village

ರಾತ್ರಿಶಾಲೆಯ ಮೂಲಕ ಅಕ್ಷರಾಭ್ಯಾಸದ ಜ್ಞಾನವನ್ನು ಊರಿಗೆ ಪಸರಿಸಿದ ಬೆರಳೆಣಿಕೆಯ ಚುರುಕಿನ ಯುವಕರು ಬಜಾಲಿನ ಪಡ್ಡಾಯಿಗುಡ್ಡೆಯಲ್ಲಿ 1953ರಲ್ಲಿ ಪ್ರಾರಂಭಿಸಿದ ಯುವಕ ಸಂಘವು ತನ್ನ ಸಮಾಜಮುಖಿ ಚಟುವಟಿಕೆಗಳಿಂದ ಕ್ರಮೇಣ ಊರಿನ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಿತು. ಯುವಕರ ಕ್ರಿಯಾಶೀಲತೆಯನ್ನು ಮನಗಂಡ ಹಿಂದಿ ಭಾಷಿಕ ಸರಕಾರಿ ಅಧಿಕಾರಿಯೊಬ್ಬರು ಪಕ್ಕಾ….ಲಡ್ಕಾ….. ಎಂದು ಉದ್ಗರಿಸಿದರು. ಅದೇ ಮುಂದೆ ಊರಿನ ಹೆಸರಾಗಿ (ಪಕ್ಕಲಡ್ಕ) ಮಾರ್ಪಾಟಾಯಿತು. ಅದೇ ಸಂದರ್ಭದಲ್ಲಿ ಯುವಕ ಸಂಘವು ಪಕ್ಕಲಡ್ಕ ಯುವಕ ಮಂಡಲವಾಗಿ ಪರಿವರ್ತನೆಯಾಯಿತು.

ಊರಿಗೆ ಬಸ್ ಬರುವಲ್ಲಿ, ರಸ್ತೆ ನಿರ್ಮಾಣಗೊಳ್ಳುವಲ್ಲಿ, ರಸ್ತೆಗೆ ಡಾಮರೀಕರಣಗೊಳ್ಳುವಲ್ಲಿ, ಊರಿಗೆ ವಿದ್ಯುಚ್ಛಕ್ತಿ ಬರುವಲ್ಲಿ, ಸ್ಮಶಾನ ನಿರ್ಮಾಣವಾಗುವಲ್ಲಿ, ಭೂರಹಿತರಿಗೆ ಭೂಮಿ ಸಿಗುವಲ್ಲಿ ಪಕ್ಕಲಡ್ಕ ಯುವಕ ಮಂಡಲದ ಪಾತ್ರವೇ ಪ್ರಮುಖವಾದುದ್ದಾಗಿದೆ. ಶಿಕ್ಷಣ, ಆರೋಗ್ಯ, ಕಾನೂನು ಮುಂತಾದ ವಿಷಯಗಳಲ್ಲಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಊರ ಪರವೂರ ಜನತೆಯ ಹೃದಯ ಗೆಲ್ಲಲು ಸಾಧ್ಯವಾಯಿತು. ಊರಿನ ಸೌಹಾರ್ದತಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತ್ಯಾಗ ಬಲಿದಾನದ ಚರಿತ್ರೆ ಯುವಕ ಮಂಡಲಕ್ಕಿದೆ.

ಕಳೆದ 70 ವರ್ಷಗಳಲ್ಲಿ ಅವಿಶ್ರಾಂತ ಸೇವೆ ಸಲ್ಲಿಸಿದ ಪಕ್ಕಲಡ್ಕ ಯುವಕ ಮಂಡಲಕ್ಕೆ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮೂಡಿರುವುದರ ಹಿಂದೆ ಅದೆಷ್ಟೋ ಹಿರಿಯರ ತ್ಯಾಗಪೂರಿತ ಕಠಿಣ ಪರಿಶ್ರಮವಿದೆ. ನಿಜಕ್ಕೂ ಪ್ರಶಸ್ತಿ ಸಲ್ಲಬೇಕಾಗಿರುವುದು ಪಕ್ಕಲಡ್ಕ ಯುವಕ ಮಂಡಲದ ಸ್ಥಾಪಕರಿಗೆ ಹಾಗೂ ಮುನ್ನಡೆಸಿದ ಹಿರಿಯ ಜೀವಗಳಿಗೆ……

2023ರ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಪಕ್ಕಲಡ್ಕ ಯುವಕ ಮಂಡಲಕ್ಕೆ ಹ್ರದಯಪೂರ್ವಕ ಅಭಿನಂದನೆಗಳು.

  • ಸುನಿಲ್ ಕುಮಾರ್ ಬಜಾಲ್, ಸಾಮಾಜಿಕ ಹೋರಾಟಗಾರರು

Leave a Reply