ನಮ್ಮ ಪಕ್ಕದ ರಾಜ್ಯವಾದ ಕೇರಳದಲ್ಲಿ ರಸ್ತೆಯ ಮೇಲೆ ಭಿಕ್ಷುಕರ ಕಾಟವಿರುವುದಿಲ್ಲ. ಸಿಗ್ನಲ್ ಇರುವ ವೃತ್ತಗಳಲ್ಲಿ ಇವರ ಕಾಟವಿರುವುದಿಲ್ಲ. ಇನ್ನು ಅಲ್ಲಿನ ದೇವಾಲಯಗಳ ಮುಂಭಾಗದಲ್ಲಿ ಭಿಕ್ಷುಕರ ಭಿಕ್ಷಾಟನೆಗೆ ಅವಕಾಶವಿಲ್ಲ. ಇದ್ದರೂ ಅಪರೂಪಕ್ಕೊಬ್ಬರನ್ನು ಕಾಣಬಹುದು.
ಕರ್ನಾಟಕ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜು ಅರಸುರವರು ಭಿಕ್ಷುಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಇವರಿಗೆ ಒಂದು ಶಾಶ್ವತವಾದ ನೆಲೆಯನ್ನು ಒದಗಿಸುವ ಸಲುವಾಗಿ ಭಿಕ್ಷುಕರ ಪರಿಹಾರ ಕೇಂದ್ರವನ್ನು ಸ್ಥಾಪನೆ ಮಾಡಿದರು. ಇದು ಇಂದಿಗೂ ಮಾಗಡಿ ರಸ್ತೆಯಲ್ಲಿ ಭಿಕ್ಷುಕರ ನಿರಾಶ್ರಿತ ಕೇಂದ್ರವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇಲ್ಲಿ ಸಾವಿರಾರು ಮಂದಿ ಆಶ್ರಯವಿಲ್ಲದವರು ಸೌಲಭ್ಯವನ್ನು ಪಡೆದುಕೊಂಡು ಬದುಕುತ್ತಿದ್ದಾರೆ.
ಇದರ ನಡುವೆ ಇನ್ನು ನಮ್ಮ ದೇವಾಲಯಗಳ ಮುಂಭಾಗದಲ್ಲಿ, ವೃತ್ತಗಳಲ್ಲಿ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಭಿಕ್ಷಾಟನೆ ನಡೆಯುತ್ತಲೇ ಇದೆ. ಪುಟ್ಟಪುಟ್ಟ ಮಕ್ಕಳನ್ನು ತೋರಿಸಿ ಅನುಕಂಪವನ್ನು ಹುಟ್ಟಿಸಿ ಭಿಕ್ಷೆಯನ್ನು ಬೇಡುತ್ತಾರೆ. ದೇಹದಲ್ಲಿನ ಊನಗಳನ್ನು ಇವರ ಭಿಕ್ಷಾಟನೆಗೆ ಮಾರ್ಗವನ್ನಾಗಿಸಿಕೊಂಡಿದ್ದಾರೆ. ಮತ್ತಷ್ಟು ಮಂದಿ ಕೈಕಾಲು ಗಟ್ಟಿ ಇದ್ದರೂ ಅನುಕಂಪ ಬರುವಂತೆ ನಡೆದುಕೊಳ್ಳುತ್ತಾ ಭಿಕ್ಷಾಟನೆ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಮತ್ತು ಬೆಂಗಳೂರಿನಲ್ಲಿ ಇದು ದೊಡ್ಡ ಸಮಸ್ಯೆಯಾಗಿದೆ. ಹಸಿದವರಿಗೆ ಅನ್ನು ನೀಡುವುದು, ದುರ್ಬಲರಿಗೆ ಸಹಾಯ ಮಾಡುವುದು, ಅಸಹಾಯಕರಿಗೆ ನೆರವು ನೀಡುವುದು ನಮ್ಮ ಮಾನವೀಯತೆಯ ಒಂದು ಭಾಗವೇ ಸರಿ. ಆದರೆ, ಇದು ಒಂದು ರೀತಿಯಲ್ಲಿ ವ್ಯವಹಾರವಾಗಬಾರದು. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಗಮನವನ್ನು ಹರಿಸಬೇಕಾಗಿದೆ.
ಅನ್ಯ ರಾಜ್ಯದ ಅನೇಕರು ಭಿಕ್ಷುಕರ ನೆಪದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಹಿನ್ನೆಲೆ ಅರಿವಿರುವುದಿಲ್ಲ. ಮುಂದೊಂದು ದಿನ ಇವುಗಳು ಅಪಾಯವನ್ನು ತಂದೊಡ್ಡಬಹುದು. ರಸ್ತೆಗಳು ಮತ್ತು ಪಾರ್ಕ್ಗಳಲ್ಲಿ ಅನ್ಯ ರಾಜ್ಯದ ಜನ ಟೆಂಟ್ಗಳನ್ನು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಇವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಮುಂದಾಲೋಚನೆಯ ದೃಷ್ಟಿಯಿಂದ ಅವಶ್ಯವಾಗಿದೆ.
- ಕೆ.ಎಸ್. ನಾಗರಾಜ್, ಬೆಂಗಳೂರು




