ಮುಂಬೈನ ಗೋವಂಡಿ ಸ್ಲಮ್ ನಲ್ಲಿ ಅರಳಿದ ರಾಪ್ ಸಿಂಗರ್ ಸಾನಿಯಾ ಮಿಸ್ರೀ

3 years ago

#Rap #singer #SaniaMisree #flourished #Mumbai #Govandi #slum

ಮುಂಬೈನ ಶಿವಾಜಿನಗರದ ಗೋವಂಡಿ ಸ್ಲಮ್  ಭೂಮಿಯ ಮೇಲಿನ ನರಕದಂತಿದೆ. 32.5 ಚ.ಕಿ.ಮೀ ವ್ಯಾಪ್ತಿಯಲ್ಲಿ 6 ಲಕ್ಷ ಜನರು ಒತ್ತೊತ್ತಾಗಿ ಉಸಿರುಗಟ್ಟಿ ಬದುಕುತ್ತಾರೆ. ಮುಂಬೈನ ಕೊಳಗೇರಿ ಜನಸಂಖ್ಯೆಯ ಶೇ 11.5 ರಷ್ಟು ಈ ಕೊಳಗೇರಿಯಲ್ಲಿಯೇ  ಜೀವಿಸುತ್ತಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಬಂಗಾಳ, ಗುಜರಾತ್, ಬಿಹಾರದಿಂದ ವಲಸೆ ಬಂದ ಜನರು ಇಲ್ಲಿ ಬದುಕುತ್ತಾರೆ. 50% ಜನಸಂಖ್ಯೆ 20 ಕ್ಕಿಂತ ಕಡಿಮೆ ವಯೋಮಾನದ ಯುವಕ-ಯುವತಿಯರಿದ್ದಾರೆ.

ಇಲ್ಲಿನ ಮಕ್ಕಳು 57% ರಷ್ಟು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಮುಂಬೈ ನಗರದಲ್ಲಿ ಹುಡುಗಿಯ ಶಿಕ್ಷಣದ ಪ್ರಮಾಣ 90.5% ಇದ್ದರೆ, ಈ ಸ್ಲಮ್‌ನಲ್ಲಿ  ಹುಡುಗಿಯರ ಶಿಕ್ಷಣ 31% ನಷ್ಟಿದೆ. 6.5 ರಷ್ಟು ಕುಟುಂಬಗಳು ಪ್ರತಿ ಮೂರು‌ ದಿನಕ್ಕೊಮ್ಮೆ ಊಟ ಇಲ್ಲದೆ ಉಪವಾಸ ಬೀಳುತ್ತಾರೆ. ಇಂತಹ ಸ್ಲಮ್ ಒಳಗಿಂದ 16 ವರ್ಷದ ಸಾನಿಯಾ ಮಿಸ್ತ್ರೀ ಎನ್ನುವ ಹುಡುಗಿ ರಾಪರ್ ಸಿಂಗರ್ ಆಗಿ ಮೇಲೆದ್ದು ಬಂದಿದ್ದಾಳೆ.

ಈ ಸ್ಲಂನಲ್ಲಿ ಹುಡುಗಿಯರ ಶಿಕ್ಷಣಕ್ಕೆ ಪ್ರೋತ್ಸಾಹ ಇಲ್ಲ. ಹುಡುಗಿಯರೆಂದರೆ 16-17 ತುಂಬುತ್ತಲೂ ಯಾರಿಗಾದರೂ ಮದುವೆ ಮಾಡಿಕೊಟ್ಟರೆ ಮುಗೀತು. ಇವರನ್ಯಾಕೆ ಓದಿಸಬೇಕು ಎನ್ನುವುದು ಸ್ಲಂ ಜನರ ಮನೋಭಾವ. ಇಂತಹ ವಾತಾವರಣದಲ್ಲಿ ಸಾನಿಯಾ ಹಲ್ಲುಕಚ್ಚಿ ಓದುತ್ತಾಳೆ. ಸ್ಲಂಮಿನಲ್ಲಿ ಹುಡುಗಿಯರ ಬಗೆಗಿನ ಈ ತಿರಸ್ಕಾರವನ್ನು ಕಟುವಾಗಿ ವಿರೋಧಿಸುತ್ತಾಳೆ. 9 ನೇ ವಯಸ್ಸಿನಲ್ಲಿ ಕವಿತೆ (ಶಾಹಿರಿ) ಬರೆಯಲು ಶುರು ಮಾಡುತ್ತಾಳೆ. ಹೀಗೆ ತಾನೇ ಬರೆದ ಪದ್ಯಗಳನ್ನು ತನ್ನ 14 ನೇ ವಯಸ್ಸಿನಲ್ಲಿ ರಾಪ್ ಸಾಂಗ್ ರೂಪದಲ್ಲಿ ಹಾಡಲು ಶುರುಮಾಡುತ್ತಾಳೆ.

ರಾಪ್ ಎನ್ನುವುದು ಹಾಕುವ ವಿಚಿತ್ರ ಡ್ರೆಸ್ ಮತ್ತು ತರಾವರಿ ಚೈನ್ ಗಳಿಂದ ಫೇಮಸ್ ಆಗುವುದಲ್ಲ. ನಾನು ಏನು ಹೇಳುತ್ತೇನೆ? ಯಾಕೆ ಇದನ್ನು ಹೇಳುತ್ತೇನೆ ಎನ್ನುವುದು ಮುಖ್ಯವಾಗಬೇಕು. ನಾನು ಗೋವಂಡಿ ಕೊಳಗೇರಿ ಜನರ ಕಷ್ಟಗಳೇನು ಎನ್ನುವುದನ್ನು ರಾಪ್‌ ನಲ್ಲಿ ಹೇಳಬೇಕು. ಈ ಸಮಸ್ಯೆಗಳ ಬಗ್ಗೆ ಲೋಕದ ಗಮನ ಸೆಳೆಯಬೇಕು. ನಾನು ಕಡುದುಃಖದ-ನೋವಿನ-ಸಂಕಟದ ಹಾಡುಗಳನ್ನು ಹಾಡುತ್ತೇನೆ. ನಾನು ಹಣ ಗಳಿಸಲು ಹಾಡುವುದಿಲ್ಲ. ನನ್ನ ಪ್ರದೇಶದಲ್ಲಿ ಹುಡುಗಿಯರಿಗೆ ನಾನು ಮಾದರಿಯಾಗಬೇಕು. ನಾನು ಯಾರು? ಎಲ್ಲಿಂದ ಬಂದೆ? ನನ್ನ ಚರ್ಮದ ಬಣ್ಣ ಯಾವುದು? ನಾನು ಹೆಣ್ಣು ಎನ್ನುವುದು ಮುಖ್ಯವಾಗಬಾರದು. ನಾನು ಏನನ್ನು ಹಾಡುತ್ತೇನೆ, ಯಾಕೆ ಹಾಡುತ್ತೇನೆ ಎನ್ನುವುದಷ್ಟೇ ಮುಖ್ಯವಾಗಬೇಕು ಎಂದು  ಹೇಳುತ್ತಾಳೆ. ನಿಮ್ಮ ಮಕ್ಕಳಿಗೆ ಸಾನಿಯಾಳ ಕತೆ ಹೇಳಿ.

– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು

ಸಾನಿಯಾ ಯೂಟೂಬ್ ಚಾನಲ್ Subscribe ಮಾಡಿ


https://youtube.com/@saniyamq?si=74IT-DPuZq2gYskU

Leave a Reply