ಮಹಿಳೆಯರಿಗೆ ಚುನಾವಣೆಗಳಲ್ಲಿ ಮೀಸಲಾತಿಯನ್ನು ನೀಡುವ ಪ್ರಕ್ರಿಯೆ ಮೊದಲು ಪ್ರಾರಂಭವಾದುದ್ದು 1989ರಲ್ಲಿ, ಶ್ರೀ ರಾಜೀವ್ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33% ರಷ್ಟು ಜ್ಞಾನಗಳನ್ನು ಮೀಸಲಿಡುವ ಕಾರಣಕ್ಕಾಗಿ ಸಂವಿಧಾನದ ತಿದ್ದುಪಡಿಗೆ ಮಸೂದೆಯನ್ನು ಮಂಡಿಸಿದರು. ಲೋಕಸಭೆಯಲ್ಲಿ ಅನುಮೋದನೆಗೊಂಡ ಈ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆಯಾಗಲಿಲ್ಲ.
ನಂತರ 1992-93ರ ಅವಧಿಯಲ್ಲಿ ಪಿ.ವಿ.ನರಸಿಂಹರಾವ್ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನದ 72-73ನೇ ತಿದ್ದುಪಡಿಗಳ ಮೂಲಕ ರಾಜೀವ್ ಗಾಂಧಿಯವರ ಕನಸನ್ನು ನನಸಾಗಿಸಿದರು.
ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯದಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರು 83ರ ಬೆಂಗಳೂರು ನಗರಪಾಲಿಕೆ ಚುನಾವಣೆಯಲ್ಲಿ ಶೇ 25% ರಷ್ಟು ಸ್ಥಾನಗಳಿಗೆ ಮಹಿಳೆಯರಿಗೆ ಮೀಸಲಿಟ್ಟಿದ್ದರು, ತದನಂತರ ಜಿಲ್ಲಾಪರಿಷತ್ ಮತ್ತು ಮಂಡಲಪಂಚಾಯಿತಿಗಳಲ್ಲೂ 1987ರಲ್ಲಿ ಮೀಸತಿಯನ್ನು ನೀಡಿರುತ್ತಾರೆ, 1996ರಲ್ಲಿ ಶ್ರೀ ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸೆಪ್ಟೆಂಬರ್ 12ರಂದು ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡುವ ಮಸೂದೆಯನ್ನು ಮಂಡಿಸಿದರು. ಲೋಕಸಭೆಯಲ್ಲಿ ಸಹಮತ ದೊರೆಯದ ಕಾರಣದಿಂದ ಶ್ರೀಮತಿ ಗೀತಾಮುಖರ್ಜಿರವರ ನೇತೃತ್ವದಲ್ಲಿ ಜಂಟಿ ಸದನ ಸಮಿತಿಯನ್ನು ರಚಿಸಿ ಮತ್ತಷ್ಟು ವಿಸ್ತಾರಕ್ಕೆ ಅನುವು ಮಾಡಿಕೊಟ್ಟರು.
2008 ಮೇ 6ರಂದು ಶ್ರೀಮತಿ ಗೀತಾಮುಖರ್ಜಿರವರ ನೇತೃತ್ವದ ಜಂಟಿ ಸದನ ಸಮಿತಿ ಶಿಫಾರಸ್ಸು ಮಾಡಿದ್ದ 7 ಅಂಶಗಳ ಪೈಕಿ 5ಕ್ಕೆ ಒಪ್ಪಿಗೆ ನೀಡಿ ದಿನಾಂಕ 17/12/2009ರಲ್ಲಿ ಸಂಪುಟದಲ್ಲಿ ಮಸೂದೆ ಮಂಡನೆಗೆ ಸಂಪುಟದ ಅನಮತಿಯನ್ನು ಪಡೆದುಕೊಂಡರು. ಮಾರ್ಚ್ 9. 2010ರಲ್ಲಿ ಮಹಿಳಾ ಮೀಸಲಾತಿಯ ಮಸೂದೆ ಯು.ಪಿ.ಎ. ಸರ್ಕಾರದ ಡಾ. ಮನಮೋಹನ್ ಸಿಂಗ್ ನೇತೃತ್ವದ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಅನುಮೋದನೆಯನ್ನು ಪಡೆಯಿತು. ಲೋಕಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆಯಲಿಲ್ಲ.
2014ರಲ್ಲಿ ಲೋಕಸಭೆ ವಿಸರ್ಜನೆಯಾದ ನಂತರ 2023ರ ತನಕ ಸತತವಾದಂತಹ ಹೋರಾಟ ಮತ್ತು ಒತ್ತಾಯದ ಹಿನ್ನಲೆಯಲ್ಲಿ 2023ರ ಸೆಪ್ಟೆಂಬರ್, 19ರಂದು ನೂತನ ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿರುತ್ತದೆ. 2010ರ ಮಾರ್ಚ್, 9ರಂದು ಮಸೂದೆ ರಾಜ್ಯಸಭೆಯಲ್ಲಿ ಒಪ್ಪಿಗೆಯನ್ನು ಪಡೆದಿರುವ ಕಾರಣದಿಂದ ಇನ್ನೂ ಅಸ್ತಿತ್ವವನ್ನು ಕಾಯ್ದುಕೊಂಡಿತ್ತು. ಈ ಕಾರಣದಿಂದಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಸಹಕಾರಿಯಾಯಿತು.
ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಅವಕಾಶವನ್ನು ಕಲ್ಪಿಸಿಕೊಟ್ಟು ಸಮಸಮಾಜದ ಕಲ್ಪನೆಯ ಹಿನ್ನೆಲೆಯಲ್ಲಿ ಅವರನ್ನು ವಚನಕಾರರನ್ನಾಗಿಸಿ ಗೌರವದ ಬದುಕಿಗೆ ನಾಂದಿ ಹಾಡಿದರು. ಬಾಬಾಸಾಬ್ ಅಂಬೇಡ್ಕರ್ರವರು ಸಂವಿಧಾನದಲ್ಲಿಯೇ ಮಹಿಳೆಯರಿಗೂ ಸಹ ಮತದಾನದ ಹಕ್ಕನ್ನು ನೀಡುವುದರ ಮೂಲಕ 1952ರ ಪ್ರಥಮ ಚುನಾವಣೆಯಲ್ಲಿಯೇ ರಾಜಕೀಯ ನಿರ್ಧಾರಗಳ ಅಧಿಕಾರವನ್ನು ನೀಡಿದರು.
ಒಟ್ಟಾರೆಯಾಗಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿನ ಮಹಿಳಾ, ಮಿಸಲಾತಿ ಮಸೂದೆಯ ಮಂಡನೆಯ ಹಿಂದೆ 1989, 1996, 2010 ಇವುಗಳ ಸಂದರ್ಭದಲ್ಲಿದ್ದ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧಿಯವರು, ಹೆಚ್.ಡಿ.ದೇವೇಗೌಡರು, ಮನಮೋಹನ್ ಸಿಂಗ್ ರವರು ಸಹ ಕಾರಣಕರ್ತರಾಗಿರುತ್ತಾರೆ. ಜೊತೆಗೆ ಜಂಟಿ ಸದನ ಸಮಿತಿಯ ನೇತೃತ್ವವನ್ನು ವಹಿಸಿದ್ದ ಗೀತಾಮುಖರ್ಜಿರವರ ಪಾತ್ರವನ್ನು ಮರೆಯುವಂತಿಲ್ಲ.
ಯು.ಪಿ.ಎ. 2009ರ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮೀಸಲಾತಿಯ ವಿಚಾರವನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಿದ್ದರು. ಚುನಾವಣೆಯ ಸಂದರ್ಭದಲ್ಲಿ ಶ್ರೀಮತಿ ಸೋನಿಯಾಗಾಂಧಿಯವರು ಹಲವಾರು ಸಭೆಗಳಲ್ಲಿ ಮಹಿಳಾ ಮೀಸಲಾತಿಯ ಅನುಷ್ಠಾನದ ಭರವಸೆಯನ್ನು ನೀಡಿದ್ದರು. ಯಾವುದೇ ಒಂದು ಕ್ರಾಂತಿಕಾರಿಯಾದಂತಹ ನಿರ್ಧಾರಗಳ ಹಿಂದೆ ಹತ್ತಾರು ಜನರ ಶ್ರಮ, ಹಲವಾರು ಹಂತದ ಪಯಣ ಇರುತ್ತದೆ ಎಂಬುದನ್ನು ಯಾರೂ ಮರೆಯುವಂತಿಲ್ಲ.
– ಕೆ.ಎಸ್.ನಾಗರಾಜ್, ಬೆಂಗಳೂರು




