ಗಾಂಧಿ ಮತ್ತು ಸನಾತನ ಧರ್ಮ

3 years ago

#Gandhi #SanatanaDharma #Dharma #purushottamabilimale

ಬಿಜೆಪಿಯ ಹಲವರು ಈಗ ʼಮಹಾತ್ಮಾ ಗಾಂಧೀಜಿಯ ಸನಾತನ ಧರ್ಮʼ ಎಂಬ ಹೊಸ ರಾಗ ಸುರು ಮಾಡಿದ್ದಾರೆ. ಸನಾತನ ಧರ್ಮವನ್ನು ಗಾಂಧಿಯ ಹೆಸರು ಹೇಳಿ ರಾಜಕೀಯಗೊಳಿಸುವ ಹುನ್ನಾರವಿದು.

ಗಾಂಧಿಯವರು  ʼಸನಾತನ ಧರ್ಮವೇʼ ಹಿಂದೂ ಧರ್ಮಕ್ಕೆ ಯೋಗ್ಯವಾದ ಹೆಸರು ಎಂಬುದನ್ನು ಒಪ್ಪಿಕೊಂಡಿದ್ದರು. ಸನಾತನ ಧರ್ಮವನ್ನು ʼ ಹಿಂದೂ ಧರ್ಮʼ ಎಂದೂ ಅವರು ಕರೆದದ್ದುಂಟು. ಆದರೆ ಹಿಂದೂ ಧರ್ಮವನ್ನು ಅವರು ʼ ವೈದಿಕ ಧರ್ಮʼ ಎಂದೋ ಬ್ರಾಹ್ಮಣ ಧರ್ಮʼ ಎಂದೋ ಎಂದೂ ಕರೆಯಲಿಲ್ಲ. ಹಿಂದು ಧರ್ಮವು ಸತ್ಯ ಅಹಿಂಸೆ ( ನಮ್ಮಲ್ಲಿ ಅಹಿಂಸೆ ಅಂತ ಏನೂ ಇರಲಿಲ್ಲ, ಅದಕ್ಕೆ ನಾನು ಅದನ್ನು ಹೊಸದಾಗಿ ಸೇರಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಒಮ್ಮೆ ನಗುತ್ತಾ ಹೇಳಿದ್ದುಂಟು) ಮೊದಲಾದ ಮೌಲ್ಯಗಳ ಮೇಲೆ ನಿಂತ  ನೈತಿಕ ಧರ್ಮವೇ ಹೊರತು ಬರೇ ಕರ್ಮಕಾಂಡ ಕ್ರಿಯೆಗಳ ಮೇಲಾಗಲೀ ಆತ್ಮ ಚಿಂತನೆಯ ಕ್ರಿಯಾರಾಹಿತ್ಯದ ಮೇಲಾಗಲೀ  ನಿಂತಿಲ್ಲ ಎಂಬುದನ್ನು ಅವರು ಮತ್ತೆ ಮತ್ತೆ ಹೇಳಿದ್ದಾರೆ.

ʼಸನಾತನ ಧರ್ಮʼ ಎಂದು ಕರೆಯುವಾಗಲೂ ಅದು ಬರೇ ಸಂಸ್ಕೃತ ಗ್ರಂಥಗಳ ಮೇಲೆ ಆಧಾರಿತವಾಗಿರದೆ ಆನಂತರದ ಕಾಲಘಟ್ಟದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಬಂದ ಗ್ರಂಥಗಳ ಮತ್ತು  ಹಾಡುಗಳ ಆಧಾರದ ಮೇಲೆಯೂ ಅದು ಬೆಳೆಯಿತು ಎಂದು ಅವರು ನಂಬಿದ್ದರು. ಗಾಂಧೀಜಿಗೆ  ತಮಿಳು ಭಾಷೆಯ ಮೇಲಿದ್ದ ಪ್ರೀತಿ ಮತ್ತು ಗೌರವ ಬಹಳ ವಿಶೇಷವಾಗಿತ್ತು ಮತ್ತು ಅದು ದಕ್ಷಿಣ ಆಫ್ರಿಕಾದಿಂದಲೇ ಬೆಳೆದು ಬಂದಿತ್ತು. ಇದು ೧೯ ಮತ್ತು ೨೦ನೇ ಶತಮಾನದುದ್ದಕ್ಕೂ ಕಾಣಿಸಿಕೊಂಡು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಗತ್ಯವಿದ್ದ ಸೈದ್ಧಾಂತಿಕ ನೆಲೆಯನ್ನು ರೂಪಿಸಿದ ಉದೀಯಮಾನ ವಿದ್ಯಾವಂತ ವರ್ಗದ  ಚಿಂತನಾ ಕ್ರಮಗಳಿಗೆ ಅನುಗುಣವಾಗಿತ್ತು.

ರಾಜಾರಾಮ್‌ ಮೋಹನ್‌ ರಾಯ್‌, ವಿವೇಕಾನಂದ, ದಯಾನಂದ ಸರಸ್ವತಿ, ಈಶ್ವರಚಂದ್ರ ವಿದ್ಯಾಸಾಗರ್‌ ಮೊದಲಾದವರು ಈ ಗುಂಪಿನಲ್ಲಿ ಸೇರುವ ಇತರರರು. ಇವರೆಲ್ಲ ಕ್ರಾಂತಿಕಾರಿಗಳೇನೂ ಆಗಿರಲಿಲ್ಲ, ಬದಲು ಪರಿಷ್ಕರಣವಾದಿಗಳಾಗಿದ್ದರು. ಹಿಂದೂ ಧರ್ಮವನ್ನು ಆಧುನಿಕ ಕಾಲಕ್ಕೆ ಒಗ್ಗುವಂತೆ ಸುಧಾರಣೆ ಮಾಡಿ ಒಪ್ಪಿಕೊಳ್ಳಬೇಕೆಂದು ಅವರೆಲ್ಲರೂ ಭಾವಿಸಿದ್ದರು. ಇದನ್ನು ಆ ಕಾಲದ ಲೇಖಕರೂ ಸೇರಿದಂತೆ ಬಹುತೇಕ ಭಾರತೀಯರು ಒಪ್ಪಿಕೊಂಡಿದ್ದರು.

ಗಾಂಧೀಜಿಗೆ ತನ್ನನ್ನು ಹಿಂದೂ ಎಂದು ಕರೆಯಿಸಿಕೊಳ್ಳಲು ಸಂಕೋಚ ಇರಲಿಲ್ಲ. ಆದರೆ ಸನಾತನ ಧರ್ಮದ ಅನೇಕ ಮಾನದಂಡಗಳನ್ನು ಅವರು ಒಪ್ಪಿರಲಿಲ್ಲ. ಜಾತಿ ವೈಷಮ್ಯ ಮತ್ತು ಅಸ್ಪೃಶ್ಯತೆಯನ್ನು ಅವರು ಕಟುವಾಗಿಯೇ ಠೀಕಿಸಿದ್ದರು. ಗೋವಿನ ಬಗ್ಗೆ ಗಾಂಧೀಜಿಗೆ ಅಪಾರ ಪ್ರೀತಿಯಿತ್ತು. ಆದರೆ ಗೋಪೂಜೆಯೇ ಹಿಂದೂ ಧರ್ಮವೆಂದು ಅವರೆಂದೂ ಹೇಳಲಿಲ್ಲ. ಧರ್ಮಗ್ರಂಥಗಳ ಸ್ಥಗಿತ ಹೇಳಿಕೆಗಳನ್ನು ವೈಚಾರಿಕ ನೆಲೆಗಳಿಂದ ವಿಶ್ಲೇಷಿಸಬೇಕೆಂದು ಅವರು ಹೇಳುತ್ತಿದ್ದರು, ಆದರೆ ಧರ್ಮಗ್ರಂಥಗಳೇ ಅಪ್ರಸ್ತುತ ಎಂದು ಅವರು ಹೇಳಲಿಲ್ಲ. ತರ್ಕ ಮತ್ತು ವಿಶ್ವಾಸಗಳ ಮೇಲೆ ನಾಡನ್ನು ಗ್ರಹಿಸಿದವರು ಗಾಂಧಿ. ಅವರದೇ ಮಾತುಗಳು – ʼ ಇಂದಿನ ವೈಚಾರಿಕ ಯುಗದಲ್ಲಿ ಪ್ರತಿಯೊಂದು ಧರ್ಮ ಸೂತ್ರವೂ ತರ್ಕದ ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ನ್ಯಾಯದ ಮಾನದಂಡಕ್ಕೆ ಒಳಪಡಬೇಕು. ಇಲ್ಲದಿದ್ದರೆ ಅದಕ್ಕೆ ವಿಶ್ವಮಾನ್ಯತೆ ದೊರೆಯಲಾರದು. ಯಾವುದೇ ತಪ್ಪುಗಳು ಧರ್ಮಗ್ರಂಥಗಳ ಆಧಾರದ ಮೇಲೆ ಸಮರ್ಥನೆಗೆ ಯೋಗ್ಯ ಆಗಬಾರದುʼ ( ಯಂಗ್‌ ಇಂಡಿಯಾ, ಫೆಬ್ರವರಿ ೨೬, ೧೯೨೯).

ಒಂದು ವಿಷಯದ ಬಗ್ಗೆ ಒಬ್ಬ ಹೇಳಿದ ಸತ್ಯವು ಎಲ್ಲ ಕಾಲಕ್ಕೂ ಎಲ್ಲ ವಿಷಯಗಳಿಗೂ ಅನ್ವಯವಾಗಲಾರದು ಎಂಬ ಗಾಂಧೀಜಿಯ ನಂಬಿಕೆ ಅವರನ್ನು ಸಾಂಪ್ರದಾಯಕ ಸನಾತನಿಗಳಿಂದ ಬೇರೆಯಾಗಿಸುತ್ತದೆ.

ಪ್ರೊ. ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸರು

Leave a Reply