ಅತ್ತದ ಮಳೆ ಹೊತ್ತಿಗಾದರೂ ಮೋಡಗಳು ಮನಸ್ಸು ಮಾಡಿ ಮಳೆ ಸುರಿಸಿದರೆ

3 years ago

#clouds #mind #rain #rains #ujjajjirajanna,

ಅತ್ತದ ಮಳೆ ಒಂದು ಬರದಿದ್ದರೆ ಮುಂದೆ ಹೊಲಕ್ಕೆ ಗೂಟವೊಯ್ದು ದನ ಕಟ್ಟಾಕುವುದೇಯಾ ಬಾಕಿ. ಮುಂಗಾರು ಹೆಸರು ಕಾಳು ಬೆಳೆಯ ಪರಿಸ್ಥಿತಿಯೂ ದನ ಕಟ್ಟಿ ಮೇಯಿಸುವಂತೆಯೇ ಆಗಿತ್ತು ಈ ವರ್ಷ. ಗೂಟವೂ ನೆಲಕ್ಕಿಳಿಯಲಾರದಷ್ಟು ಒಣಿ ಕಾಣಿಸಿಕೊಳ್ಳತೊಡಗಿದೆ ನೆಲದ ತ್ಯಾವಾರಿ ಬೀಳು ಬಿಟ್ಟ ಬೇಸಾಯದ ಭೂಮಿ. ಕರೆದರೆ ಬರಲೇನು ಮಳೆ ಮನುಸ್ರಾ? ಮನುಸ್ರೇ ಕರೆದ ಕೂಡಲೇ ಬರೋದು ಕಷ್ಟವಾಗಿರೋ ಇಂತಹ ಕಾಲಸ್ಥಿತಿಯಯೊಳಗೆ. ಕಪ್ಪೆ ಮದುವೆ, ಕತ್ತೆ ಮದುವೆ, ಮಳಿರಾಯನ ಹಬ್ಬ ಆಗುತ್ತಿವೆ ಜನ ಮಳೆಗಾಗಿ ಅಂಗಲಾಪಿಸಿ.

ಬಿದ್ದ ಮಳೆಗೆ ಭಂಗ ಬಿದ್ದು ಬೀಜ ಬಿತ್ತಿದ್ದರು ಬೇಸಾಯ್ದೋರು ಕೂಲಿ ಬೇಸಾಯ ಹಿಡಿದು. ಈಗ ದಿನದ ಲೆಕ್ಕಕ್ಕೆ ಬದಲಾಗಿ, ಗಂಟೆ ಲೆಕ್ಕದ ಬೇಸಾಯ. ಗಂಟೆಗಿಷ್ಟು ಬೇಸಾಯದ ಕೂಲಿ ನಿಗದಿಯಾಗಿದೆ. ಮನೆ ಮುಂದೆ ಆರಂಭದ ರಾಸು ಇಲ್ಲದಿದ್ದರೂ ಟ್ರಾಕ್ಟರ್ ಬೇಸಾಯ ಮಾಡಿ ದುಬಾರಿ ಬೆಲೆತೆತ್ತು ಉಳುಮೆಯ ಕೆಲಸಕ್ಕೆಂದು ಕೈಸುಟ್ಟುಕೊಂಡಿದ್ದರು ಈ ಬಾರೀ ಕಾಲವೆಲ್ಲಾವಾ ಬಿತ್ತನೆದಾರರು.

ಮಳೆ ಹೋಗಿ ಮುಗಿಲು ಸೇರಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ ಮುಖ್ಯ ಆಹಾರ ಬೆಳೆ ರಾಗಿ ಪೈರು. ಇಂದು ನಾಳೆ ಒಳಗಾದರೂ ಮಳೆ ಬಂದಿದ್ದರೆ ರಾಗಿ ಓಸೋ ಈಸೋ ಆಗೋವು. ಪಲ್ಲಗಟ್ಟಲೆ ಆಗದಿದ್ದರೂ ಆರು ತಿಂಗಳ ಅಂಬಲಿಗೆ ನೇರೂಪಾಗುತಿತ್ತೇನೋ? ಕೂಲಿ ಪಾಡಿನ ಭಂಗದ ಬದುಕಿನೋರಿಗೆ. ವಡಿಗೆ ಬರುವ ಮೊದಲೇ ರಾಗಿ ಫಸಲು ಒಣಗುವಂತಾಗಿದೆ ಮಳೆ ಹೋಗಿ. ವಡಿ ತಲಿ ಮೇಲೆ ಮಳೆ ಬರದಿದ್ದರೆ ರಾಗೇನು ಹುಳ್ಳೀ ಗಿಡವೂ ಮೇಲೆಸಳಿಕ್ಕಿ ಉಳಿಯಲಾರದು. ಹುಳ್ಳೆಂತೂ ಕಮರಿಯೇ ಹೋಗುವುದು. ವಡಿಗೆ ಬರುವಾಗ ಮಳೆ ಕೈಕೊಡಲಾಗಿ ಪೈರಿನ ತೊಂಡೆ ಬಾಡಿ ಮಂಕಾಗಿರುವುದು ಒಣಿ ಮುಂದುವರಿದು. ಮಳೆ ಬರುವವರೆವಿಗಾದರೂ ಉಳಿಯಬಹುದೇನೋ ಎಂಬಂತೆ ರಾಗಿ ಪೈರಿನ ದಿಂಡು ಹಸಿಯಾಗಿಯುವುದು ಅಷ್ಟೇ ಒಣಗದೆ. ಪೈರಿನ ಮೈ ಒಳಾಯದೊಳಗೆ, ಸದ್ಯಕ್ಕೆ ಹಸಿರು ನೀರಾಡುತ್ತಲೇ ಇದೆ.

ಕಣಗಾಲವೂ ಈ ವರ್ಷ ನಡೆಯಬಹುದಿತ್ತೇನೋ? ತಡವಾಗಿಯಾದರೂ ಮಳೆಯಾಗಿದ್ದಿದ್ದರೆ. ಗೌರಮ್ಮ ಗದಿಗೆ ಮೇಲೆ ಬಂದರೂ ಒಣಿ ಮಳೆಯೋಗಿ; ನೆಲದ ಹಸಿಯಾರಿ.

ಇರುವೆ ಗೂಡುಗಳು ಕದರಿ ಮುಚ್ಚಿ ಹೋಗಿವೆ ಅವುಗಳ ಗೂಡೊಳಗೆ ಧೂಳು ನುಗ್ಗಿ. ತಿರುಗಾಡುವ ಹಾದಿ ಮಗ್ಗಲುಗಳೊಳಗೆ ಇರುವೆಗಳ ಮನೆ ಮಠಗಳೂ ಇದ್ದವು. ಅವುಗಳ ದಂಡು ಎಲ್ಲಿ ಹೊರಟು ಹೋಗಿದೆಯೋ ಹಸಿ ನೆಲದ ಪಸಿಮೆ ಹುಡುಕಿ. ಹೊಸ ಹೊಸ ಇಂಬಾದ ಗೂಡೊಯ್ಯಲು. ನೆಲ ಹುಳಾಡಿ ಧೂಳಾಗಿದೆ ಹುಳುಗಳು ತಿರುಗಾಡಿದ ಹಾದಿಗಳು ಮುಚ್ಚಿ ಹೋಗಲಾಗಿ. ಉಳುಮೆ ಮಾಡಿದ ಮಾರ್ಗಗಳಲ್ಲಿ ಬರೀ ಅವುಗಳು ಹರಿದಾಡಿದ ಗೆರೆಗಳು ಮಾತ್ರ ಉಳಿದಿವೆ. ಅವು ನೆಡೆದ ಹಾದಿಗಳ ಕುರುಹುಗಳಾಗಿ. ಅವು ನಿಂತು ಸಾಗಿದ ಖಾಲಿ ತಾಣಗಳು ಅಲ್ಲಲ್ಲೆ ಕಾಣುವವು ನೆತ್ತೊಡೆದು ಹೋದ ಮಣ್ಣು ಗುಡ್ಡೆಗಳಂತೆ.

ದಾರಿಗೆ ಅಡ್ಡಲಾಗಿ ಹರಿದು ಇನ್ನೊಂದು ಬದಿಯ ಅರುಗು ಸೇರಲು ಅವಸರ ಅವಸರವಾಗಿ ಹರಿಯುತಿದ್ದ ಒನಕೆ ಮಂಡಿಗಳು ಅವುಗಳ ಪ್ರಯಾಣ ನಿಲ್ಲಿಸಿವೆ. ಒಣ ನೆಲದ ಮೇಲೆ ಹರಿದು ಬಂದವುಗಳು ಅಪಘಾತವಾಗಿ ಅಲ್ಲಲ್ಲೆ ಬಿದ್ದಿವೆ. ಉಂಡೆ ಸುತ್ತಿಕೊಂಡು ಸತ್ತ ಅವುಗಳ ಕಳೇಬರಗಳು ಒಣಗಯತ್ತಿವೆ ಉಂಗುರಾಕಾರವಾಗಿ ಬಿದ್ದು. ಅವು ಸತ್ತು ಬಿದ್ದ ತಾವುಗಳಲ್ಲಿ ಅವುಗಳ ಪುಟ್ಟ ದೇಹದ ಒಣಗಿ ಉದುರುತ್ತಿರುವ ಬಳೆಗಳು.

ಮಳೆ ನಿಂತು ಕಪ್ಪೆಗಳ ಕಲರವ ಅಡಗಿ ಹೋಗಿದೆ ಹೊಸ ನೀರಾಡದೆ. ಸುಡುವ ನೆಲದ ಮೇಲೆ ಕುಪ್ಪಳಿಸಿದರೆ ಪಾದಗಳು ಸುಟ್ಟವೆಂದು. ಅವು ಎಲ್ಲೆಲ್ಲೋ ರಾವಿಕೊಂಡಿವೆ. ಮಳೆಗಾಗಿ ಕಾಯುತ್ತಾ ನಿಬ್ಬಸಿಯಾದ ಜಾಗಗಳೊಳಗೆ. ಕರೆ ಕಟ್ಟೆಗಳಲ್ಲಿ ನೀರಿನ ಬತ್ತೇವು ಇನ್ನಿಲ್ಲದೆ, ಇರುವ ನೀರು ಮಲೆತುಕೊಂಡು ಹೊಂಡಾಗಿ ಅಟ್ಲುನೀರು ವಾಸನೆ ಬರತೊಡಗಿ, ಮೇವು ನೀರಿಗೆ ಅಡವಿಗೆ ಬಂದ ಮೂಗುಜನ್ಮ ನೀರಿಗೂ ಮುಸುಣಿ ವೂರದಂತಾಗಿರುವುದು ಏರಿಗಾತುಕೊಂಡು ಇಂಗತೊಡಗಿರುವ ಕೆರೆಯಮುಸುರೆಗೆ.

ಉತ್ತರೆ ಮಳೆ ಹುಟ್ಟಿ ಐದಾರು ದಿನಗಳಾದವು. ಕತ್ತರಿಸಿ ಬಿಸಿಲು ಕಾಯುವುದಿಲ್ಲ. ಹನಿಯೊಡೆಯುತ್ತಿಲ್ಲ. ಬರೀ ಮೋಡಕವಿದ ವಾತಾವರಣ. ಸುಕ್ಕೆಗಳೂ ಕಾಯುತ್ತಿಲ್ಲ ಬಾರದ ಮಳೆಯ ಮುನ್ಸೂಚನೆಗಳು ಎರಗಿ. ಅಡ್ಡಾದಿಡ್ಡಿಯಾಗಿ ಆಕಾಶದಲ್ಲಿ ಎದ್ದೇಳುವ ಗೊಡ್ಡು ಮೋಡಗಳನ್ನೇ ತಿರುತಿರುಗಿ ನೋಡುವಂತಾಗಿದೆ ಕಣ್ಣು ಸಣ್ಣವಾಗುತ್ತಿವೆ ದೂರದ ಮೋಡಗಳ ಡಿಟ್ಟಿಸತೊಡಗಿ.

ಶನಿವಾರದಯ್ಯ, ಸೋಮಾರದಯ್ಯ, ಮಂಗಳವಾರ, ಶಕ್ರವಾರದಾಮ್ಮಗಳ ಹೊಳೆ ಸೇವೆಗೆ ಗ್ರಾಮ, ಹಟ್ಟಿ ದೈವಗಳು ಮೈತೊಳೆಯಲು ಗದ್ದುಗೆಯಿಂದಿಳಿದು ನಡೆದಿವೆ. ನೀರಿನ ಉದಿ ಹುಡುಕಿ. ಹಳ್ಳಗಳಲ್ಲಿ ನೀರಿನ ಬಸಿ ಇಲ್ಲದೆ ಅವುಗಳ ಮುಖ ತೊಳೆಯಲೂ ಕಷ್ಟವಾಗಿ, ಚಿಲುಮೆ ಗುಂಡಿ ತೋಡಲು ಅರೆ ಬಡಿದುಕೊಂಡು ಊರು ಹಟ್ಟಿಗಳು ಕೆರೆ ಅಂಗಳಗಳ ಗುಂಟ ನಡೆದು ಸುಸ್ತಾಗುತ್ತಿವೆ. ದೈವಗಳ ತಲೆ ಮೇಲೆ ಹೊತ್ತು. ಕುಣುಕಲು ಗುಂಡಿಗಳಲ್ಲೂ ನೀರು ನೆಲಾರದಲ್ಲಿ ತೊಟ್ಟಿಕ್ಕದಂತಾಗಿದೆ.

ಕೈಲಿ ಖಾಲಿ ಚೊಂಬು ಕರೇವಿನ ರಾಸುಗಳ ಕೆಚ್ಚಲಿಗೆ ಹಾಲಿಳಿಯದೆ. ಹೊಲದೊಳಗೆ ಪೈರು ವಡಿಬತ್ಲು; ಕರೇವಿನ ರಾಸುಗಳ ಕೆಚ್ಚಲೊಳಗೆ ಹಾಲುಬತ್ಲು. ಆಡುಕುರಿಗಳ ಕೆಚ್ಚಲುಗಳು ಹಾಲ್ಬತ್ತಲಾಗಲಾಗಿ ಹಾಲುಗಳ್ಳಿನ ಅವುಗಳ ಮರಿಗಳಿಗೆ ಕಳ್ಳತುಂಬದಂತಾಗಿ ಹೊಟ್ಟೆ ತುಂಬದೆ ಸೊರಗಿದಂತವುಗಳಾಗಿ ಕಾಣುತ್ತಿವೆ. ಮಳೆ ಕಾಲಕ್ಕೆ ಸರಿಯಾಗಿ ನಡೆದಿದ್ದರೆ ಹಾಲು ಹಲಬು, ಜಾಣೆ ಸೊಪ್ಪು, ಹುಲಿಕಡ್ಡಿ, ಎಳೆಬಳ್ಳಿ ಬೇಲಿಸೊಪ್ಪು ಮೇವಾಗಿ ದೊರೆಯುತಿತ್ತು ಎಳೆಮರಿಗಳ ಹಾಳೊಟ್ಟೆಗೆ.

ಆಡುಕುರಿ ಉದಿಯ ಮುಂದೆ ಮಂದೆ ಮರಿಗಳ ಚಿಣ್ಣಾಟವೇ ನಿಂತುಹೋಗಿದೆ. ಮಬ್ಬು ಸೆಕೆಗೆ ಕುಬ್ಬದೊಳಗೇ ಹಾಲುಕುಡಿಯುವ ಮರಿಗಳು ಹೊರಾಲು ಹೊರನೀರಿಗೆ ಒಗ್ಗಲಾಗದೆ ತೊಳ್ಳೂದತೊಡಗಿ ಮಂಕಾಗಿ ಕಾಲು ಚಾಚಿ ಮಲಗಿದ ಅವುಗಳಿಗೆ ಮೇಲೇಳುವುದೇ ಕಷ್ಟವಾಗಿದೆ. ಹದಹಾರಿ ಪಸಿಮೆ ಕಮ್ಮಿಯಾದ ನೆಲದ ಮೇಲೆ ಹುಲ್ಲು ಬಾಡಿ ಒಣಗಲಾಗಿ ಕುರಿ ಆಡು ಎತ್ತು ಎಮ್ಮೆ ಬಾಯಾಡಲು ಇದ್ದ ಬಾಡಲಿಗೂ ಗೆದ್ದಲಿಡಿದಿರುವುದು, ಹುಲ್ಲು ಬುಡದ ಬೊಡ್ಡೆಯ ಗೊದ್ದಗಳ ಗೂಡುಗಳೂ ಮುಚ್ಚಿ ಹೋಗಿ. ಬೇರೊಳಗೆ ಜೀವಾ ಹಿಡಿದುಕೊಂಡ ಗಂಧಗರಿಕೆಯ ಕಡ್ಡಿಯ ಗೆಣ್ಣು ಮೇಲೆ ಅದರ ಅಂಕಲುಹುಲ್ಲೆಸಳು ಉದುರಿ ಅಕಾಲಿಕವಾದ ಗೊಟ್ಟಿನ ದರ್ಶನವಾಗತೊಡಗಿರುವುದು.

ಮೊಂಡು ಪೈರು ರಾಗಿ ಇಬ್ಬನಿ ಕುಡಿದು ಉಳಿದಿರುವುದು ಮಳೆಗಾಗಿ ಕಾಯುತ್ತಾ ಬಾರೆಯ ಹೊಲಮಾರೆಯ ಮೇಲೆ ನಿಲುವುಗಾಲಿನಲ್ಲೇ ನಿಂತು. ರಬಸವಾಗಿ ಬೆಳೆದು ಕಣಗಾಲದಲ್ಲಿ ಜೀವದ ಹುಲ್ಲಾಗಿ ಒಟ್ಟಿಸಿಕೊಳ್ಳುವ ಆದರಾಸೆ ಕಮ್ಮಿಯಾದಂತಿಲ್ಲ. ಅದು ದಿಂಡೊಳಗೆ ನಿಬ್ಬಸಿಯ ಉಳಿಸಿಕೊಂಡೇ ಕಾಲಾವರಣ ಮಾಡುತ್ತಿದೆ, ಬೈಗೂ ಬೆಳಗೂ ಎದುರುಗೊಂಡು. ವಡಿಯಾಗಿ ಹೂ ನುಂಗಿ ಕಾಳುಕಟ್ಟಿ ಬಡರಾಗಿ, ಹಿಟ್ಟಾಗಿ ಅಂಬಲ್ಲಿಯಾಗುವ ಅದರ ಬಡಾಸೆ ಮಾತ್ರ ಬತ್ತಿಲ್ಲ.

ಆರಿದ್ರಾ ಮಳೆಯ ಅಖೈರಿನಲ್ಲಿ ಬಿತ್ತನೆಯಾಗತೊಡಗಿದ ರಾಗಿ ಅದರ ಬೆಳವಣಿಗೆಯ ಹಂತದಲ್ಲೇ ಮಳೆ ಸರಿಯಾಗಿ ಬರದಿದ್ದರೂ ಉಳಿದಿದೆ ಒಣಗದೆ. ಆಗಾಗ ಸ್ವಾನಾಡಿ ಹಸಿ ಹಿಡಿದಿಟ್ಟುಕೊಂಡು. ದಿಂಡು ಬಾಡಿ ರಾಗಿ ಗರಿಯ ಮೂಗೊಣಗುತ್ತಿದೆ; ಅದರ ನಡು ಮಧ್ಯೆಯ ಅಡ್ಡೇಣುಗುಂಟ ತುದಿಯೇ ಮೊದಲಾಗಿ ಒಣಗುತ್ತ. ಬೇರು ನೆನೆಯುವ ಹಾಗೆ ಸ್ವಾನಾಡಿದ್ದರೂ ಅದರ ಎದೆಯ ದಗೆಯಾರಿ ಹೊಸ ಸುಳಿಯೊಯ್ದುಕೊಳ್ಳುತಿತ್ತೇನೋ? ವಡಿಯಾಗಲು ಬಯಸಿದ ಅದರ ಆಸೆ ಪೂರೈಸಿ. ನೀರು ಅಡಗುವ ಅಂಗೆ ಮಳೆ ಬಿದ್ದಿದ್ದರೆ ಮಾತ್ರ ರಾಗಿ ಗ್ಯಾಂಟಿ ಬದುಕುವುದು.

ಹೋದ ವರ್ಷ ಹೊಸ ನೀರಿಗೆ ಬಂದಿತ್ತು ಗೌರಿ ಹಬ್ಬದ ಸಡಗರ. ನೆಡೆದ ಕಡೆಯೆಲ್ಲಾ ಕಾಲೊದ್ದೆಯಾಗುವಷ್ಟು ನೆಲ ಹಸಿಯಾಗಿತ್ತು. ಮೊಳಕಾಲುದ್ದ ನೀರು ಹರಿಯುವ ಹಳ್ಳಗಳು. ಕಣ್ಣಳತೆಯವರೆವಿಗೂ ಕಾಣುವಷ್ಟು ನೀರು ತುಂಬಿಕೊಂಡಿದ್ದ ಕೆರಕಟ್ಟೆಗಳು. ಹರಿಯುವ ನೀರಿನ ಹೆಜ್ಜೆ ಸಪ್ಪಳ ಕೇಳರಿಯುವ ಸಂಬ್ರಮ ಕೋಡಿಹಳ್ಳಗಳಲ್ಲಿ. ಈ ವರ್ಷ ಬದಲಾದ ಪರಿಸ್ಥಿತಿಯೊಳಗೆ ಮೊಗೆ ಹೊತ್ತು ಉಬ್ಬೆ ಮೆಟ್ಟಿ ಗದಿಗೆ ಏರಿರುವ ಗೌರಿಗೂ ಓಣಿ.

ಮೊಗೆ ಮಳೆ ಹಾಗೆಯೇ ಮಾಗಾಡುತ್ತಲೇ ಕಾಲಕಳೆದು ಹೋಯಿತು. ಉಬ್ಬೆ ಮಳೆ ಉಬ್ಬುಬ್ಬಿ ಬರುವದಿರಲಿ ಅಂಗೊಂದು ಇಂಗೊಂದು ಹದವಾದರೂ ಬಿಗಿಯಾಗಿ ಬೀಳದೆ ಸುಮ್ಮನೆ ಇಬ್ಬನಿಗೆ ನೆಲ ತ್ಯಾವಿಸಿಕೊಂಡಂತೆ ಆಗೊಮ್ಮೆ ಈಗೊಮ್ಮೆ ಸ್ವಾನಾಡಿತು. ಬೆಳೆಗೆ ಮಳೆ ಸಾಲದೆಬಂತು. ಹದದ ಹಾದಿಯೊಳಗೆ ರಾಗಿ ಬೇರು ಅದೇಗೆ ಹೋರಾಡಿದೆಯೋ? ಪೈರು ಮಾತ್ರ ಬಾಡಿದಂತೆ ಕಂಡರೂ ಉಳಿದಿದೆ, ಅದರ ಖಳವು ತೇಲಿದ ಹಾಗೆ. ಇಂದು ನಾಳೆಯೊಳಗೆ ಮಳೆಯಾದರೂ ಶೇಖಡಾವಾರು ಬೆಳೆ ಕೈಯ್ಯೊಳಗಾಗಬಲ್ಲದು. ಹುಲ್ಲೂ, ಅಷ್ಟೋ ಇಷ್ಟೋ ಆಗಬಲ್ಲದು. ಅತ್ತದ ಮಳೆ ಹೊತ್ತಿಗಾದರೂ ಮೋಡಗಳು ಮನಸ್ಸು ಮಾಡಿ ಮಳೆ ಸುರಿಸಿದರೆ.

– ಉಜ್ಜಜ್ಜಿ ರಾಜಣ್ಣ, ಕವಿಗಳು

Leave a Reply