ಮೈಸೂರು: ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುವಾಗ ಮೀಸಲಾತಿ ಅನುಸರಿಸಬೇಕು. ಅಗತ್ಯಕ್ಕಿಂತ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಬಾರದು ಎಂದು ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದರು.
ಕೆಎಂಎಫ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಕ್ಕೂಟಗಳಲ್ಲಿ ಅನಗತ್ಯವಾಗಿ ಬಹಳಷ್ಟು ಮಂದಿಯನ್ನು ನೇಮಕ ಮಾಡಿಕೊಂಡಿದ್ದೀರಿ. ಇದರಿಂದ ನಿಮಗೆ ನಷ್ಟವಾಗುತ್ತಿದೆ. ಒಕ್ಕೂಟದ ನಿರ್ದೇಶಕರೋ, ಶಾಸಕರೋ ಹೇಳಿದರೆಂದು ನೇಮಕ ಮಾಡಿಕೊಳ್ಳುತ್ತೀರಿ. ತೊಂದರೆ ಅನುಭವಿಸುತ್ತಿದ್ದೀರಿ. ಮಂಜೂರಾತಿಯನ್ನೇ ಜಾಸ್ತಿ ಮಾಡಿಕೊಳ್ಳುತ್ತೀರಿ. ಹೀಗೇಕೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಅಗತ್ಯವಾದಷ್ಟು ಮಂದಿಯನ್ನು ಮಾತ್ರವೇ ಉಳಿಸಿಕೊಂಡು ಉಳಿದವರನ್ನು ತೆಗೆದು ಹಾಕುವಂತೆ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಒಕ್ಕೂಟಗಳು ಸರ್ಕಾರದ ಗಮನಕ್ಕೆ ತಾರದೇ ಹಾಲಿನ ದರವನ್ನು ಹೆಚ್ಚಿಸುವುದು ಅಥವಾ ಇಳಿಸುವುದನ್ನು ಮಾಡಲೇಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ವೆಂಕಟೇಶ್ ತಾಕೀತು ಮಾಡಿದರು.
‘ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಕೊಡುತ್ತಿಲ್ಲ. ಒಂದೇ ಜಾತಿಯವರನ್ನು ನೇಮಕ ಮಾಡಿಕೊಂಡಿರುತ್ತೀರಿ. ಯಾವುದೇ ನೇಮಕಾತಿಗೆ ಮುನ್ನ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕು. ಮೀಸಲಾತಿ ಪಾಲನೆ ಮಾಡಬೇಕು. ಏಜೆನ್ಸಿಯವರು ಸಾವಿರ ರೂಪಾಯಿಯಲ್ಲಿ 200 ರೂಪಾಯಿ ಕಡಿತ ಮಾಡಿಕೊಳ್ಳುತ್ತಾರೆ. ಇದೆಲ್ಲವನ್ನೂ ತಡೆಯಬೇಕು ಎಂದು ಸೂಚಿಸಿದರು.
ಇದನ್ನು ಆಲಿಸಿದ ಮುಖ್ಯಮಂತ್ರಿಗಳು ಸರ್ಕಾರದಿಂದ ಕೊಡುವ ಹಣವನ್ನು ರೈತರಿಗೆ ಕಡ್ಡಾಯವಾಗಿ ತಲುಪಿಸಬೇಕು. ಐದು ಪೈಸೆಯನ್ನೂ ಒಕ್ಕೂಟಕ್ಕೆ ಇಟ್ಟುಕೊಳ್ಳಬಾರದು. ರೈತರಿಂದ ಖರೀದಿಸುವ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಿಸಲಾಗಿದೆ. ಅದಷ್ಟೂ ರೈತರಿಗೇ ಸಿಗಬೇಕು. ಒಕ್ಕೂಟಗಳನ್ನು ಮಾಡಿರುವುದು ಲಾಭ ಮಾಡುವುದಕ್ಕಲ್ಲ. ಹಾಗೆಂದು ನಷ್ಟವನ್ನೂ ಮಾಡಿಕೊಳ್ಳದಂತೆ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.




