ಬೆಂಗಳೂರು: ಸರ್ಕಾರದ ಕಾಮಗಾರಿಗಳ ಟೆಂಡರ್ ಗೆ ಕಮೀಷನ್, ಕೋವಿಡ್ ಕಾಲಘಟ್ಟದ ಖರೀದಿ ಹಗರಣ ಸೇರಿದಂತೆ ವಿವಿಧ ತನಿಖೆಗಳನ್ನು ಕಾನೂನಿನ ಚೌಕಟ್ಟಿನಲ್ಲೇ ನಡೆಸಲಾಗುತ್ತಿದ್ದು, ಇದರ ಹಿಂದೆ ಯಾವುದೇ ರಾಜಕೀಯ ದ್ವೇಷ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯವರು ತಮ್ಮ ಸರ್ಕಾರ ಇದ್ದಾಗ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ನಮ್ಮ ಕಣ್ಣ ಮುಂದೆ ಇದೆ. ಅವರು ಹಾಕಿಕೊಟ್ಟ ಹಾದಿಯೂ ನಮಗೆ ಗೊತ್ತಿದೆ. ಆದರೆ ನಾವು ಆ ರೀತಿ ಮಾಡುತ್ತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಶಾಸನಬದ್ಧವಾಗಿ ಸಮಿತಿಗಳನ್ನು ರಚಿಸಿದ್ದೇವೆ. ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.
ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಯಾದಾಗ ಯಡಿಯೂರಪ್ಪ ಹಾಗೂ ಇತರೆ ನಾಯಕರು ಈಶ್ವರಪ್ಪ ಆರೋಪಮುಕ್ತರಾಗಿ ಬರುತ್ತಾರೆ ಎಂದು ತನಿಖೆಗೆ ಮೊದಲೇ ಘೋಷಿಸಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಾವು ಆ ರೀತಿ ಮಾಡುತ್ತಿಲ್ಲ ಎಂದರು.
ಈ ಹಿಂದೆ ನಮ್ಮ ಮೇಲೆಲ್ಲಾ ಸುಳ್ಳು ಆರೋಪಗಳನ್ನು ಮಾಡಿ ಕ್ರಮ ಕೈಗೊಂಡಿಲ್ಲವೇ, ಜೈಲಿಗೆ ಕಳುಹಿಸಿಲ್ಲವೇ, ನಾವು ಈಗಲೂ ಅದನ್ನು ಅನುಭವಿಸುತ್ತಿಲ್ಲವೇ ಎಂದ ಅವರು, 79 ಎ ಮತ್ತು ಬಿ ಅಡಿ ಎಷ್ಟು ಪ್ರಕರಣಗಳಿದ್ದವು, ಎಷ್ಟು ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಬೇಕಿತ್ತು ಎಂಬೆಲ್ಲಾ ಪಟ್ಟಿಗಳು ತಮ್ಮ ಬಳಿ ಇವೆ. ಅದನ್ನು ನಾವು ಬಿಚ್ಚಿಡುತ್ತೇವೆ. ಬಿಜೆಪಿಯವರು ಶುದ್ಧರಾಗಿದ್ದರೆ, ತನಿಖೆಗೆ ಹೆದುರುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಚಾಮರಾಜನಗರದಲ್ಲಿ ಆಮ್ಲಜನಕದ ದುರಂತದಿಂದ 36 ಮಂದಿ ಮೃತಪಟ್ಟಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಒಬ್ಬ ಅಧಿಕಾರಿಯನ್ನೂ ಅಮಾನತುಗೊಳಿಸಲಿಲ್ಲ. ಅಷ್ಟು ಸಾವಿಗೆ ಉತ್ತರದಾಯಿತ್ವ ಬೇಡವೇ? ಪ್ರಧಾನಮಂತ್ರಿಯವರ ನೀತಿಯಿಂದ ದುಬಾರಿ ಮೊತ್ತದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲಾಗಿದೆ. ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರುಗಳೇ ತನಿಖೆಗೆ ಒತ್ತಾಯಿಸಿದರು. 10 ಸಾವಿರ ಬೆಡ್ಗಳ ಕೋವಿಡ್ ಕ್ವಾರಂಟೈನ್ ಕೇಂದ್ರ ಏನಾಯಿತು ಎಂದು ಪ್ರಶ್ನಿಸಿದರು.
ನೈಸ್ ವಿಷಯವಾಗಿ ತಪ್ಪು ಮಾಡಿದವರನ್ನು ಗಲ್ಲಿಗೆ ಹಾಕಿ. ನನ್ನ ವಿರುದ್ಧ ಟೀಕೆ ಆರೋಪ ಬೇಕಾದ್ದನ್ನೆಲ್ಲಾ ಮಾಡಿಕೊಳ್ಳಲಿ. ಈ ಹಿಂದೆ ಜೆಡಿಎಸ್ ನಾಯಕರದೇ ಸರ್ಕಾರ ಇತ್ತು. ಆಗ ಏಕೆ ಇವರು ತನಿಖೆ ಮಾಡಲಿಲ್ಲ, ಕ್ರಮ ಕೈಗೊಳ್ಳಲಿಲ್ಲ. ನನ್ನ ವಿರುದ್ಧ ಅಪಪ್ರಚಾರಗಳನ್ನೇ ಹೆಚ್ಚು ಮಾಡುತ್ತಿದ್ದಾರೆ. ನೈಸ್ ರಸ್ತೆಯಲ್ಲಿ ಯಾರದೆಲ್ಲಾ ಜಮೀನಿದೆ ಎಂಬುದು ನನಗೆ ಗೊತ್ತಿದೆ. ನನ್ನ ಆಸ್ತಿಗಳಿರುವ ಬಗ್ಗೆಯೂ ಬಹಿರಂಗಪಡಿಸಲಿ. ಈಗಾಗಲೇ ಕಾರ್ಯ ನಿರ್ದೇಶನಾಲಯ, ಸಿಬಿಐ, ಬೇನಾಮಿ ಆಸ್ತಿ ತನಿಖಾ ಸಮಿತಿಗಳು ನನ್ನೆಲ್ಲಾ ಆಸ್ತಿಗಳನ್ನೂ ಜಾಲಾಡಿವೆ ಎಂದು ಹೇಳಿದರು.




