ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರ್ಣಗೊಳಿಸಿದೆ. ಈ ಸರ್ಕಾರದ ಸಾಧನೆ ಎಂದರೆ ವಿಧಾನಸೌಧದ ಮೂಲೆ– ಮೂಲೆಯಲ್ಲೂ ಭ್ರಷ್ಟಾಚಾರದ ತಾಂಡವ, ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡು ಕಮಿಷನ್ ದಂಧೆ ಮತ್ತು ಸರ್ವಾಧಿಕಾರಿ ಆಡಳಿತ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು. ಗ್ಯಾರಂಟಿ ನೆಪದಲ್ಲಿ ಒಂದು ವರ್ಷದ ಅಭಿವೃದ್ಧಿಯ ಎಲ್ಲ ಕಾಮಗಾರಿಗಳನ್ನೂ ನಿಲ್ಲಿಸಿದ್ದಾರೆ. ವರ್ಗಾವಣೆಯನ್ನು ಕಮಿಷನ್ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
‘ರೈತರು ಬರಗಾಲದ ಬವಣೆಯಲ್ಲಿ ಸಿಲುಕಿದ್ದರೂ ಕೂಡ ಸರ್ಕಾರ ಆ ಕಡೆ ತಿರುಗಿ ನೋಡಿಲ್ಲ. ರೈತರ ಆತ್ಮಹತ್ಯೆ ಮತ್ತೆ ಆರಂಭವಾಗಿದೆ. ಕೃಷಿ ಉತ್ಪಾದನೆಗೆ ಪಟ್ಟು ಬೀಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಪೂರ್ಣ ಪ್ರಮಾಣದ ಗ್ಯಾರಂಟಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯ್ದಿದ್ದಾರೆ’ ಎಂದು ಹೇಳಿದರು.
ಒಂದು ಕಡೆ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಿಬ್ಬಂದಿಗೆ ಸಮರ್ಪಕವಾದ ಸಂಬಳವನ್ನೂ ನೀಡಿಲ್ಲ. 10 ಕೆ.ಜಿ ಅಕ್ಕಿ ಗ್ಯಾರಂಟಿಯನ್ನು ಈಡೇರಿಸಲಾಗಿಲ್ಲ. ಕೇಂದ್ರದ ಐದು ಕೆ.ಜಿ ಅಕ್ಕಿಯೇ ಜನರ ಸಹಾಯಕ್ಕೆ ಬಂದಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿಯರ ಹುಡುಕಾಟ ಪೂರ್ಣಗೊಂಡಿಲ್ಲ ಎಂದರು.
ಒಂದು ಕಡೆ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಿಬ್ಬಂದಿಗೆ ಸಮರ್ಪಕವಾದ ಸಂಬಳವನ್ನೂ ನೀಡಿಲ್ಲ. 10 ಕೆ.ಜಿ ಅಕ್ಕಿ ಗ್ಯಾರಂಟಿಯನ್ನು ಈಡೇರಿಸಲಾಗಿಲ್ಲ. ಕೇಂದ್ರದ ಐದು ಕೆ.ಜಿ ಅಕ್ಕಿಯೇ ಜನರ ಸಹಾಯಕ್ಕೆ ಬಂದಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿಯರ ಹುಡುಕಾಟ ಪೂರ್ಣಗೊಂಡಿಲ್ಲ ಎಂದು ಟೀಕಿಸಿದರು.
ಈ ಮಧ್ಯೆ ಗ್ಯಾರಂಟಿಗಾಗಿ ಎಸ್ಸಿ, ಎಸ್ಟಿ ಅಭಿವೃದ್ಧಿಗಾಗಿ ಮೀಸಲಾದ ₹11,000 ಕೋಟಿ ಬಳಕೆ ಮಾಡಿಕೊಂಡು ಎಸ್ಸಿ–ಎಸ್ಟಿಯವರಿಗೆ ಸರ್ಕಾರ ಮೋಸ ಮಾಡಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರು ಮತ್ತು ಸಾರ್ವಜನಿಕರ ಹಿತ ಕಾಯಲು ವಿಫಲವಾಗಿದೆ. ನಮ್ಮ ಅಣೆಕಟ್ಟೆಗಳ ಕೀಲಿಕೈಯನ್ನು ತಮಿಳುನಾಡಿಗೆ ಒಪ್ಪಿಸಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಪೈಪೋಟಿಗೆ ಇಳಿದಿದ್ದಾರೆ. ಇದರಿಂದ ಆಡಳಿತದ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ. ಕಾನೂನು ಸುವ್ಯವಸ್ಥೆಯೂ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ–ಸುಲಿಗೆ ಸಾಮಾನ್ಯವಾಗಿದೆ ಎಂದು ಹರಿಹಾಯ್ದಿದ್ದಾರೆ.




