ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದು ನೂರು ದಿನ ಸಮೀಪಿಸುತ್ತಿದ್ದರೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡದಿರುವ ಬಿಜೆಪಿ ನಾಯಕತ್ವದ ಕ್ರಮ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಪ್ರತಿಪಕ್ಷ ನಾಯಕನ ಹುದ್ದೆಗೆ ಹಲವು ಹೆಸರು ಕೇಳಿ ಬರುತ್ತಿವೆ. ಆದರೆ ಇವರಾರಿಗೂ ಹುದ್ದೆ ಸಿಗುವುದಿಲ್ಲ. ಅಚ್ಚರಿಯ ಆಯ್ಕೆ ಹೊರಬೀಳುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧಪಕ್ಷದ ನಾಯಕರ ಆಯ್ಕೆ ಮಾಡದೆ ಬಿಜೆಪಿ ಕನ್ನಡಿಗರಿಗೆ ಮಾಡುತ್ತಿರುವ ಅಪಮಾನವನ್ನು ನಿಲ್ಲಿಸಬೇಕು. ಬಿಜೆಪಿಯವರಿಗೆ ವಿರೋಧಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳಲಾಗಿಲ್ಲ. ಯಾರ ನಾಯಕತ್ವದಲ್ಲಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಕ್ರಿಕೆಟ್‍ನ 11 ಮಂದಿ ಆಟಗಾರರನ್ನು ಬಿಟ್ಟು 12 ನೇ ವ್ಯಕ್ತಿಯನ್ನು ಕ್ಯಾಪ್ಟನ್ ಮಾಡಲು ಹೊರಟಂತಿದೆ. ಕ್ರಿಕೆಟ್‍ನಲ್ಲಿ 11 ಮಂದಿ ಪ್ಲೈನ್‍ಲೆವೆನ್‍ನಲ್ಲಿರುತ್ತಾರೆ. ಅವರನ್ನು ಬಿಟ್ಟು 12 ನೇ ವ್ಯಕ್ತಿಯನ್ನು ಕ್ಯಾಪ್ಟನ್ ಮಾಡಲು ಹೊರಟಿರುವ ಬಿಜೆಪಿಯವರು ಮೊದಲು ತಮ್ಮ ಮನೆಯಲ್ಲಿನ ಹುಳುಕುಗಳನ್ನು ನೋಡಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.
ಬಿಜೆಪಿಯವರು ಅಧಿವೇಶನ ನಡೆಯಲು ಬಿಡಲಿಲ್ಲ. ಜನರ ಸಮಸ್ಯೆಗಳನ್ನು ಚರ್ಚಿಸಲಿಲ್ಲ. ಅತಿವೃಷ್ಠಿ ಮತ್ತು ಅನಾವೃಷ್ಠಿ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಸರ್ಕಾರ ಉತ್ತರ ನೀಡಲು ಸಿದ್ಧವಿತ್ತು ಎಂದರು.
ಬಿಜೆಪಿಯವರಿಗೆ ಜನರ ಸಮಸ್ಯೆಗಳು ಬೇಕಿಲ್ಲ. ಕೇವಲ ಹಿಂದೂ-ಮುಸ್ಲಿಂ ಎಂಬ ಗಲಭೆಯನ್ನು ಸೃಷ್ಟಿಸಿ ಭಾವನಾತ್ಮಕ ರಾಜಕಾರಣ ಮಾಡುತ್ತಿದ್ದಾರೆ. ಕಳೆದ 4 ವರ್ಷಗಳಲ್ಲೂ ಅವರು ಯಾವ ಸಾಧನೆಯನ್ನೂ ಮಾಡದೆ ಕೋಮು ರಾಜಕಾರಣವನ್ನೇ ಮಾಡಿದರು. ಇದರಿಂದಾಗಿ ಬಂಡವಾಳ ಹೂಡಿಕೆಯಲ್ಲಿ ಹಿನ್ನಡೆಯಾಗಿದೆ. ನಿರುದ್ಯೋಗ ಹೆಚ್ಚಾಗಿದೆ. ಇವೆಲ್ಲವೂ ಜನರ ಕಣ್ಣೆದುರಲ್ಲೇ ಇದೆ ಎಂದು ಹೇಳಿದರು.
ಕಲಾಪದಲ್ಲಿ ಸರ್ಕಾರ ತನ್ನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ಬಿಜೆಪಿಯವರು ವಿಪಕ್ಷ ನಾಯಕನ ಆಯ್ಕೆಯ ಆಡಿಷನ್ ನಡೆಸುತ್ತಿದ್ದರು. ಬಿಜೆಪಿಯ ಒಬ್ಬ ಶಾಸಕ ಮಾತನಾಡಿದರೆ, ಮತ್ತೊಬ್ಬ ಶಾಸಕರು ಎದ್ದು ನಿಂತು ಏರಿದ ದನಿಯಲ್ಲಿ ಕೂಗಾಡಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಯತ್ನಿಸುತ್ತಿದ್ದರು ಎಂದು ಟೀಕಿಸಿದರು.



