ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಸೆರೆ ಹಿಡಿಯಲಾದ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಇದೀಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರು ಅನಗತ್ಯವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜಿನಲ್ಲಿ ಓದಿದ ಎಲ್ಲರಿಗೂ ಆ ಸಂದರ್ಭಗಳಲ್ಲಿ ಕೆಲವು ಘಟನಾವಳಿಗಳ ಅನುಭವ ಇರುತ್ತದೆ. ಅಂತಹ ಪ್ರಕರಣಗಳ ಕುರಿತಂತೆ ಕ್ರಮ ಕೈಗೊಳ್ಳಲು ಕಾಲೇಜಿನ ಪ್ರಾಂಶುಪಾಲರಿಗೆ ಮೊದಲು ಅವಕಾಶ ನೀಡಬೇಕು. ಹೊರಗಿನಿಂದ ಅನ್ಯರು ಮಧ್ಯಪ್ರವೇಶ ಮಾಡಿ ಒತ್ತಡ ಹಾಕಬಾರದು ಎಂದರು.
ಉಡುಪಿ ಕಾಲೇಜಿನ ಪ್ರಕರಣದಲ್ಲಿ ಪ್ರಾಂಶುಪಾಲರು ಈಗಾಗಲೇ ಮೂರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದಾರೆ. ಅದನ್ನು ಮೀರಿ ಕೆಲವು ಬೆಳವಣಿಗೆಯಾಗಿದ್ದರೆ ನಿಯಂತ್ರಣಕ್ಕೆ ತರಲು ವಿಶ್ವ ವಿದ್ಯಾಲಯ ಅನುದಾನ ಸಮಿತಿ ಕೆಲವು ಮಾರ್ಗಸೂಚಿಗಳಲ್ಲಿ ರ್ಯಾಗಿಂಗ್ ನಿಯಂತ್ರಿಸಲು ಸ್ಪಷ್ಟ ನಿರ್ದೇಶನ ನೀಡಿದೆ. ಅದನ್ನು ಆಧರಿಸಿ ಘಟನೆಯನ್ನು ನಿರ್ವಹಿಸಲು ಉನ್ನತ ಶಿಕ್ಷಣ ಇಲಾಖೆಗೆ ಅವಕಾಶ ನೀಡಬೇಕು ಎಂದು ಸಲಹೆ ಮಾಡಿದರು.
ಒಂದು ವೇಳೆ ಘಟನೆ ಕಾಲೇಜಿನ ಮಟ್ಟವನ್ನು ಮೀರಿದ್ದರೆ ಉನ್ನತ ಶಿಕ್ಷಣ ಇಲಾಖೆಗೆ ದೂರು ನೀಡಬಹುದು. ಏಕಾಏಕಿ ಪೊಲೀಸರು ಇಂತಹ ಸೂಕ್ಷ್ಮ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಬೇಕಿಲ್ಲ. ಮೊದಲು ಕಾಲೇಜಿನ ವ್ಯಾಪ್ತಿಯಲ್ಲೇ ವಿಷಯ ಇತ್ಯರ್ಥಗೊಳ್ಳಲು ಅವಕಾಶ ನೀಡಬೇಕಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದರು.
ಸಣ್ಣ ಘಟನೆಯನ್ನು ಬಿಜೆಪಿಯವರು ವೈಭವೀಕರಿಸಿ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ನಾನು ಇದನ್ನು ನಿರ್ಲಕ್ಷಿಸಬಹುದಾದ ಘಟನೆ ಎಂದು ಹೇಳಿಲ್ಲ. ಕಾಲೇಜಿನ ಮಟ್ಟದಲ್ಲೇ ಇತ್ಯರ್ಥಗೊಳ್ಳಬೇಕು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಉಡುಪಿ ಕಾಲೇಜಿಗೆ ಬಂದು ಪರಿಶೀಲನೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ನಾವು ಯಾರನ್ನೂ ಬರಬೇಡಿ, ಪರಿಶೀಲಿಸಬೇಡಿ ಎಂದು ಹೇಳುವುದಿಲ್ಲ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ರಾಷ್ಟ್ರೀಯ ಮಹಿಳಾ ಆಯೋಗ ಏನೆಂದು ವ್ಯಾಖ್ಯಾನಿಸಿದೆ ಎಂದು ಎಲ್ಲರಿಗೂ ಗೊತ್ತಿದೆ. ಈವರೆಗೂ ಮಹಿಳಾ ಆಯೋಗ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂಬುದೂ ಕೂಡ ಗಮನಾರ್ಹ. ಆದರೆ ಉಡುಪಿ ಘಟನೆಗೆ ಪರಿಶೀಲನೆ ಮಾಡಲು ಬಂದಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಯಾರಾದರೂ ದೂರು ನೀಡದೇ ಇದ್ದರೆ ಅನಗತ್ಯವಾಗಿ ಮಧ್ಯಪ್ರವೇಶ ಮಾಡಲು ಪೊಲೀಸರು ಮುಂದಾಗುವುದಿಲ್ಲ. ಈ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ನಕಲಿ ಎಂದು ಹೇಳಲಾಗುತ್ತಿದೆ. ಎಲ್ಲವನ್ನೂ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎಂದರು.




