ಬೆಂಗಳೂರು: ಕೆ ಆರ್ ಮಾರ್ಕೆಟ್ ಪ್ಲೈಓವರ್ ರಸ್ತೆಯಲ್ಲಿ ವ್ಯಾಪಾರಿಯೊಬ್ಬರು ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದ 1.70 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.
ಕೆ ಆರ್ ಮಾರ್ಕೆಟ್ ಬಾಲಗಂಗಾಧರನಾಥ ಫ್ಲೈಓವರ್ ರಸ್ತೆಯ ಮೇಲೆ ವ್ಯಾಪಾರಿಯೊಬ್ಬರು ಬೈಕ್ ನ ಬ್ಯಾಗ್ ನಲ್ಲಿ ಚಿನ್ನವನ್ನು ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಬೈಕ್ ಗೆ ಅಡ್ಡಬಂದ ಇಬ್ಬರು ದುಷ್ಕರ್ಮಿಗಳು, ಬೈಕ್ ನಿಧಾನ ಮಾಡುತ್ತಿದ್ದಂತೆ ಚಿನ್ನದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ.
3 ಕೆಜಿ 780 ಗ್ರಾಂ ತೂಕದ ಸುಮಾರು 1.70 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರು ದೋಚಿದ್ದಾರೆ. ಕೆಲವೇ ಸೆಕೆಂಡ್ಗಳಲ್ಲಿ ಈ ದರೋಡೆ ನಡೆದಿರುವುದು ಬೆಂಗಳೂರಿಗರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಚಿನ್ನದ ವ್ಯಾಪಾರಿ ತಮ್ಮ ಸ್ಕೂಟರ್ನಲ್ಲಿ ಚಿನ್ನ ಇಟ್ಟುಕೊಂಡು ಫ್ಲೈಓವರ್ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಮತ್ತೊಂದು ಬೈಕ್ನಲ್ಲಿ ಬಂದಿದ್ದ ಇಬ್ಬರು ಅರೋಪಿಗಳು, ಫ್ಲೈಓವರ್ ಮೇಲೆ ಚಲಿಸುತಿದ್ದ ಬೈಕ್ಗೆ ಅಡ್ಡ ಬಂದು ಬೈಕ್ ಸ್ಲೋ ಮಾಡಿಸಿದ್ದಾರೆ. ನಂತರ ನೇರವಾಗಿ ಸ್ಕೂಟರ್ನಲ್ಲಿ ಚಿನ್ನ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಚಿನ್ನವನ್ನು ಕಳ್ಳರು ಬೈಕ್ ನಲ್ಲಿ ಕದ್ದು ಪರಾರಿಯಾಗುತ್ತಿದ್ದಂತೆ, ಆಘಾತಕ್ಕೆ ಒಳಗಾದ ದರೋಡೆಗೊಳಗಾದ ವ್ಯಾಪಾರಿ ಕಾಟನ್ಪೇಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ಇಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


