ಮಂಡ್ಯ ಜಿಲ್ಲೆಯ ವೈಚಾರಿಕತೆಯ ಜೀವನದಿ ಡಾ.ಬೆಸಗರಹಳ್ಳಿ ರಾಮಣ್ಣ ನೆನಪುಗಳು

3 years ago

ನಮ್ಮೆಲ್ಲರ ಪಾಲಿನ ಹಿರಿಯಣ್ಣ, ಗುರು, ಮಾರ್ಗದರ್ಶಕರಾಗಿದ್ದ ಡಾ.ರಾಮಣ್ಣ ನಿಧನರಾಗಿ ಇಲ್ಲಿಗೆ ಇಪ್ಪತ್ತೈದು ವರ್ಷಗಳಾದವು. ಅವರು ಬದುಕಿದ್ದರೆ ಈಗ ಎಂಬತ್ತೈದು ವರ್ಷದ ಹಿರಿಯ ಜೀವವಾಗಿ ನಮ್ಮೊಡನೆ ಇರುತ್ತಿದ್ದರು.ಭೌತಿಕವಾಗಿ ಅಣ್ಣ ನಮ್ಮೊಡನೆ ಇಲ್ಲವಾದರೂ ಸಹ ಸದಾ ನಮ್ಮಗಳ ನಡೆ ಮತ್ತು ನುಡಿಯೊಳಗೆ ಜೀವಂತವಾಗಿದ್ದು ನಮ್ಮನ್ನು ಕಾಡುತ್ತಲೇ ಇರುತ್ತಾರೆ.

ದಿನಾಂಕ 25-6-2023 ರ ಭಾನುವಾರ ಮಂಡ್ಯ ನಗರದಲ್ಲಿ ಡಾ.ರಾಮಣ್ಣ ಹೆಸರಿನ ಕಥಾ ಪ್ರಶಸ್ತಿ ಪ್ರಧಾನ.ಸಮಾರಂಭ ನಡೆಯಲಿದೆ. ಮೊನ್ನೆ ಸಹೋದರಿ ಹೆಚ್.ಆರ್.ಸುಜಾತ ಮತ್ತು ವಿಶುಕುಮಾರ್ ಮೈಸೂರಿಗೆ ಬಂದಿದ್ದಾಗ ಆಹ್ವಾನ ಪತ್ರಿಕೆ ನೀಡಿ ಹೋದರು. ಆಹ್ವಾನ ಪತ್ರಿಕೆಯಲ್ಲಿ ಅಣ್ಣನವರ ವಿವಿಧ ಭಾವಚಿತ್ರಗಳನ್ನು ನೋಡುತ್ತಿದ್ದಂತೆ ಅವರೊಡನೆ ಒಡನಾಡಿದ ಕ್ಷಣಗಳೆಲ್ಲವೂ ನೆನಪಾಗಿ ಇಡೀ ರಾತ್ರಿ ನಿದ್ದೆ ಹತ್ತಲಿಲ್ಲ.

ಆತಿಥ್ಯಕ್ಕೆ, ಮನುಷ್ಯ ಸಂಬಂಧಗಳಿಗೆ ಮತ್ತು ನೈತಿಕತೆಯನ್ನು ಮೀರಿದರೆ ಜಾಡಿಸಿ ಎದೆಗೆ ಒದ್ದಂತೆ ಮಾತನಾಡುವುದು ಇವೆಲ್ಲವೂ ಮಂಡ್ಯದ ಜನರ ರಕ್ತದಲ್ಲಿ ಬಂದಿರುವ ಸಹಜ ಗುಣ. ಈ ಕಾರಣದಿಂದಾಗಿ ಅತ್ಯಂತ ಹೆಚ್ಚು ಒಕ್ಕಲಿಗರು ಇರುವ ಜಿಲ್ಲೆಯ ಜನರನ್ನು ಇತರೆ ಜನರು ಮಂಡ್ಯದ ಗೌಡರು ಮುಂಗೋಪಿಗಳು ಎನ್ನುತ್ತಾರೆ. ಇದು ಅರ್ಧ ಸತ್ಯ ಮಾತ್ರ.

ಕಳೆದ ಮೂರು ದಶಕದ ವರೆಗೆ ಅಂದರೆ 1990 ರವರೆಗೆ ಕಡಿಮೆ ವಿದ್ಯಾವಂತರಿದ್ದ ನಮ್ಮ ಜಿಲ್ಲೆಯಲ್ಲಿ ವೈಚಾರಿಕತೆಯಲ್ಲಿ, ಕ್ರಾಂತಿಕಾರಕ ನಿಲುವು ತೆಗೆದುಕೊಳ್ಳುವುದರಲ್ಲಿ ನಮ್ಮ ಜನ ಯಾರಿಗೂ ಕಡಿಮೆ ಇರಲಿಲ್ಲ. ಇದಕ್ಕೆ ಮೂಲ ಕಾರಣ ಡಾ.ಬೆಸಗರಳ್ಳಿ ರಾಮಣ್ಣ, ಪ್ರೊ.ಹೆಚ್.ಎಲ್. ಕೇಶವಮೂರ್ತಿ, ಡಾ.ರಾಮಲಿಂಗಯ್ಯ ಉಪ್ಪಿನಕೆರೆ, ರಮೇಶ್ ಹುಲ್ಲುಕರೆ, ಸದಾಶಿವ ಎಣ್ಣೆ ಹೊಳೆ, ನೆಲಮನೆ ದೇವೇಗೌಡ, ಪ್ರೊ.ಡಿ.ಲಿಂಗಯ್ಯ, ಕ್ಯಾತನಹಳ್ಳಿ ರಾಮಣ್ಣ ಹೀಗೆ ಹಲವಾರು ಮಂಡ್ಯ ನೆಲದ ಹಿರಿಯರನ್ನು ಹೆಸರಿಸಬಹುದು.

ಪ್ರಥಮಬಾರಿಗೆ ಅಕ್ಷರ ಲೋಕಕ್ಕೆ ತೆರೆದುಕೊಂಡ ಈ ಮಹಾನಿಯರೆಲ್ಲಾ ಸಾಹಿತ್ಯಕ್ಷೇತ್ರಕ್ಕೆ ಪ್ರವೇಶಿಸಿ ನಾವು ಬದುಕಬೇಕಾದ ಮಾರ್ಗವನ್ನು ರೂಪಿಸುವುದರ ಜೊತೆಗೆ ಬುದ್ಧ, ಬಸವಣ್ಣ, ಗಾಂಧಿ, ಲೋಹಿಯಾ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ , ಪೆರಿಯಾರ್ ಅವರ ಚಿಂತನೆಗಳನ್ನು ನನ್ನ ತಲೆಮಾರಿಗೆ ಧಾರೆ ಎರೆದರು.ಇವರೆಲ್ಲರಿಗೂ 1938 ರ ಏಪ್ರಿಲ್ ತಿಂಗಳಲ್ಲಿ ನಡೆದ ಮದ್ದೂರಿನ ಬಳಿಯ ಶಿವಪುರ ಧ್ವಜ ಸತ್ಯಾಗ್ರಹ ಘಟನೆ ದಾರಿ ದೀಪವಾಗಿತ್ತು.

ಮೈಸೂರು ಸಂಸ್ಥಾನದಲ್ಲಿ ಕಾಂಗ್ರೇಸ್ ಧ್ವಜವನ್ನು ಹಾರಿಸಲು ನಿಷೇದ ಹೇರಿದಾಗ ಇದನ್ನು ಪ್ರತಿಭಟಿಸಿದ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆಸಿ ಬಾವುಟ ಹಾರಿಸುವುದರಲ್ಲಿ ಯಶಸ್ವಿಯಾದರು. ಜೊತೆಗೆ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಹತ್ತು ಸಾವಿರ ಮಂದಿ ಹೋರಾಟಗಾರರಿಗೆ ಮೂರು ದಿನಗಳ ಕಾಲ ಆತಿಥ್ಯ ನೀಡಿದರು.ಎಲ್ಲಕ್ಕಿಂತ ಮುಖ್ಯವಾಗಿ ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು, ದಲಿತರು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವುದರ ಜೊತೆಗೆ ಮಂಡ್ಯದ ನೆಲದಲ್ಲಿ ಅಸ್ಪಶ್ಯತೆಯ ನಿವಾರಣೆಗೆ ಪ್ರಥಮವಾಗಿ ನಾಂದಿ ಹಾಡಿದರು. ನಂತರದ ದಿನಗಳಲ್ಲಿ ಮಳವಳ್ಳಿಯ ಸುಬ್ಬೇಗೌಡರು ಅಲ್ಲಿನ ಕುನ್ನೀರು ಕಟ್ಟೆಗೆ ಹರಿಜನರನ್ನು ಕರೆದೊಯ್ದು ನೀರು ಕುಡಿಸಿದರೆ, ಮಂಡ್ಯ ಸಮೀಪದ ಹೊನಗಾನಹಳ್ಳಿ ಪುಟ್ಟಣ್ಣ ಎಂಬುವರು ತಮ್ಮೂರಿನ ಕೆರೆಯ ನೀರನ್ನು ಹರಿಜನರು ಮುಟ್ಟುವಂತೆ ಮಾಡಿದರು.

ಇವುಗಳ ದಟ್ಟ ಪ್ರಭಾವ ಡಾ.ರಾಮಣ್ಣ ಮತ್ತು ಪ್ರೊ.ಕೇಶವಮೂರ್ತಿಗೆ ಇದ್ದ ಕಾರಣ ಇವರು ಎಪ್ಪತ್ತರ ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅನೇಕ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣರಾದರು. ರಾಮಣ್ಣನವರು ಮನಸ್ಸು ಮಾಡಿದ್ದರೆ, ಆ ದಿನಗಳಲ್ಲಿ ಅಮೇರಿಕಾ ಅಥವಾ ಇಂಗ್ಲೇಂಡ್ ಗೆ ತೆರಳಿ ಪ್ರಸಿದ್ಧ ವೈದ್ಯರಾಗಿ ಜೀವನ ಸಾಗಿಸಬಹುದಿತ್ತು. ಎಪ್ಪತ್ತರ ದಶಕದಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಹುತೇಕ ವೈದ್ಯಕೀಯ ಪದವೀಧರರು ವಿದೇಶಗಳಿಗೆ ತೆರಳಿದರೆ. ರಾಮಣ್ಣನವರು ನಗರಗಳಿಗೂ ಹೋಗಲು ಸಹ ನಿರಾಕರಿಸಿ, ಗ್ರಾಮ ಭಾರತವನ್ನು ತಮ್ಮ ಸೇವಾ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡರು.

ಮನುಷ್ಯನ ದೈಹಿಕ ರೋಗಗಳ ಜೊತೆಗೆ ಸಮಾಜಕ್ಕೆ ಅಂಟಿಕೊಂಡಿದ್ದ ಮೌಡ್ಯಗಳ ರೋಗಗಳಿಗೂ ಸಹ ಅವರು ಮದ್ದನ್ನು ಅರೆದರು. ಅವರ ಮಾತು, ಚಿಂತನೆ ಮತ್ತು ಕೃತಿಗಳಲ್ಲಿ ಸಮಾಜವನ್ನು ಸುಧಾರಿಸುವುದು ಮುಖ್ಯ ಗುರಿಯಾಗಿತ್ತು. 1974 ರಲ್ಲಿ ಆ ಕಾಲದಲ್ಲಿ ಪ್ರಬಲ ರೋಗವಾಗಿದ್ದ ಸಿಡುಬು ನಿರ್ಮೂಲನ ಕ್ರಿಯೆಗಾಗಿ ಬಿಹಾರ ರಾಜ್ಯಕ್ಕೆ ಹೋಗಿಬಂದರು. ಜೊತೆಗೆ ಮಯೂರ ಮಾಸಪತ್ರಿಕೆಗಾಗಿ ಬೇಲಾ ಹೆಸರಿನಲ್ಲಿ ಸುಧೀರ್ಘವಾದ ನೀಳ್ಗತೆಯನ್ನು ಬರೆದರು. ಅವರ ಅತ್ಯಂತ ಜನಪ್ರಿಯ ಕಥೆಗಳಲ್ಲಿ ಅದೂ ಸಹ ಒಂದಾಗಿದೆ.

ರಾಮಣ್ಣನವರ ನೈತಿಕ ಸಿಟ್ಟು ಎಷ್ಟೇ ಪ್ರಬಲವಾಗಿದ್ದರೂ ಸಹ ಅವರದು ಮಾತೃ ಹೃದಯವಾಗಿತ್ತು. ತಮ್ಮೊಂದಿಗೆ ಒಡನಾಡುತ್ತಿದ್ದ ಕಿರಿಯರನ್ನು ಅವರು ಎಂದಿಗೂ ಹೆಸರು ಹಿಡಿದು ಕರೆಯಲಿಲ್ಲ. ಮಗಾ ಅಥವಾ ಕಂದಾ ಎಂದೇ ಸಂಬೋಧಿಸುತ್ತಿದ್ದರು. ಪೆರಿಯಾರ್ ಪ್ರಭಾವಕ್ಕೆ ಒಳಗಾಗಿದ್ದ ಅಣ್ಣನವರು ತಮ್ಮ ಹಿರಿಯ ಪುತ್ರನಿಗೆ ಅಣ್ಣಾದೊರೆ ಎಂದು ಹೆಸರಿಟ್ಟಿದ್ದರು. ನನಗೆ ನೆನಪಿರುವ ಹಾಗೆ ಅವರ ಪತ್ನಿ ರಾಜಮ್ಮಕ್ಕನವರ ಸಹೋದರ ಜಯರಾಮಣ್ಣನವರ ಪುತ್ರನಿಗೆ ಕರುಣಾನಿಧಿ ಎಂದು ನಾಮಕರಣ ಮಾಢಿದ್ದರು. ಹಿರಿಯ ಪುತ್ರ ಅಣ್ಣಾದೊರೆ ಹರೆಯದ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಅಪಘಾತದಲ್ಲಿ ತೀರಿಕೊಂಡ ನಂತರ ಮಗನ ಸಾವು ರಾಮಣ್ಣನವರ ಮೇಲೆ ತೀವ್ರ ಪ್ರಭಾವ ಬೀರಿತು. ಸೇವೆ ಸಲ್ಲಿಸಿದ ಪ್ರತಿಯೊಂದು ಊರಿನಲ್ಲಿಯೂ ಸಹ ಅವರು ಗಿಡ ನೆಟ್ಟು ಬೆಳೆಸುತ್ತಿದ್ದರು. ಕೊತ್ತತ್ತಿ ಗ್ರಾಮದ ಆಸ್ಪತ್ರೆ ಆವರಣದಲ್ಲಿ ಅಣ್ಣನವರು ನೆಟ್ಟಿರುವ ಗಿಡಗಳು ಇಂದು ಮರವಾಗಿ ಬೆಳೆದು ನಿಂತಿವೆ.

1998 ರಲ್ಲಿ ಸಂಭವಿಸಿದ ಅಣ್ಣನವರ ಅನಿರೀಕ್ಷಿತ ಸಾವು ಮಂಡ್ಯ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ದೊಡ್ಡ ದುರಂತಗಳಲ್ಲಿ ಒಂದು. ರಾಮಣ್ಣನವರ ಸಾವಿಗೆ ಆರು ತಿಂಗಳ ಮುಂಚೆ ಪ್ರೊ.ಕೇಶವಮೂರ್ತಿಯವರ ಏಕೈಕ ಪುತ್ರ ಮುವತ್ತೈದನೇ ವಯಸ್ಸಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದನು. ರಾಮಣ್ಣನವರ ನಿಧನದ ಸುದ್ದಿಯನ್ನು ಕೊಪ್ಪ ಗ್ರಾಮದಲ್ಲಿದ್ದ ನನ್ನ ಮನೆಗೆ ದೂರವಾಣಿ ಕರೆ ಮಾಡಿ ಬೆಳಗಿನ ಜಾವ ಪ್ರೊಫೆಸರ್ ತಿಳಿಸಿದರು. ಕೂಡಲೇ ಗೆಳಯನ ಬೈಕ್ ಏರಿ ಅಣ್ಣನವರ ಮನೆ ಬಂದಾಗ ನನ್ನ ಹೆಗಲ ಮೇಲೆ ಮುಖವಿಟ್ಟು ಪ್ರೊಫೆಸರ್ ‘’ ಜಗದೀಶ್ ಮಂಡ್ಯದಲ್ಲಿ ನಾನು ತಬ್ಬಲಿಯಾಗಿಬಿಟ್ಟೆ’’ ಎಂದು ಗಟ್ಟಿಯಾಗಿ ಅಳತೊಡಗಿದರು. ತಮ್ಮ ಪುತ್ರನ ಸಾವಿನ ಸಂದರ್ಭದಲ್ಲಿ ಹಿಡಿದಿಟ್ಟಿದ್ದ ಅವರ ದುಃಖವೆಲ್ಲಾ ಅಣ್ಣನವರ ಸಾವಿನಲ್ಲಿ ಕಟ್ಟೆಯೊಡದಿತ್ತು.

ಬೆಳಿಗ್ಗೆ ಎಂಟೂವರೆಗೆ ಮೈಸೂರಿನಿಂದ ಬಂದ ದೇವನೂರು ಮಹಾದೇವು ಅಣ್ಣವರ ಪಾರ್ಥಿವ ಶರೀರವನ್ನುನೋಡಿದ ನಂತರ ಮೌನಕ್ಕೆಶರಣಾಗಿ ಬಿಟ್ಟರು. ಸುಮಾರು ಮೂರು ಗಂಟೆಯ ಕಾಲ ಯಾರ ಮಾತನ್ನೂ ಕೇಳದೆ ಮನೆಯ ಮುಂದೆ ಭೂಮಿಗೆ ನೆಟ್ಟ ಕಂಬದಂತೆ ಹನ್ನೊಂದೂವರೆ ಗಂಟೆಯವರೆಗೆ ಸ್ಥಿರವಾಗಿ ನಿಂತಿದ್ದರು. ಕೊನೆಗೆ ಅವರನ್ನು ತಬ್ಬಿ ಹಿಡಿದುಕೊಂಡು ಬಂದು ಕೂರಿಸಿ, ಕುಡಿಯಲು ನೀರು ನೀಡಿ, ಚಹಾ ನೀಡಿದ ನಂತರ ‘’ ಸಿಗರೇಟ್ ಸೇದಬೇಕು ಬಾ ಜಗದೀಶ್ ಎಂದು ದೂರಕ್ಕೆ ಕರೆದೊಯ್ದರು. ಅಲ್ಲಿ ಸಿಗರೇಟ್ ಸೇದುತ್ತಾ, ‘’ ಆಲನಹಳ್ಳಿ ಕೃಷ್ಣ ಹೋದಾಗ ನನ್ನು ಎದೆ ಹೊಡೆದು ಹೋಗಿತ್ತು. ಈಗ ರಾಮಣ್ಣನವರ ಈ ಸಾವನ್ನು ನಾನು ಹೇಗೆ ತಡೆದುಕೊಳ್ಳಲಿ ಜಗದೀಶ್’ ಎಂದು ಕಣ್ಣಿರು ಹಾಕಿದಾಗ ಮಹಾದೇವು ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ನನ್ನ ಕೆನ್ನೆಗಳ ಮೇಲೆ ಹರಿಯುತ್ತಿದ್ದ ಕಣ್ಣಿರು ಅವರಿಗೆ ಉತ್ತರವಾಗಿತ್ತು.

ಡಾ.ರಾಮಣ್ಣನವರ ಹುಟ್ಟೂರು ಬೆಸಗರಹಳ್ಳಿ ಆದರೂ ಸಹ, ಅವರ ತಾಯಿ ಯ ಊರು ದೇಶಹಳ್ಳಿ ಗ್ರಾಮವಾಗಿತ್ತು. ಅವರು ಮದ್ದೂರಿನಲ್ಲಿ ಪಿಯುಸಿ. ಹಾಗೂ ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಶಿಕ್ಷಣವನ್ನು ದೇಶಹಳ್ಳಿಯ ಅಜ್ಜಿ ಮನೆಯಲ್ಲಿದ್ದುಕೊಂಡು ಪೂರೈಸಿದ್ದರು. ನನಗೆ ನೆನಪಿರುವ ಹಾಗೆ ಅವರು ಸೋದರ ಮಾವನ ಪುತ್ರಿ ರಾಜಮ್ಮಕ್ಕನವರನ್ನು ವಿವಾಹವಾಗಿದ್ದರು. ಈ ಕಾರಣದಿಂದಾಗಿ ಅಣ್ಣನವರ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಅಜ್ಜಿಯ ಊರಾದ ದೇಶಹಳ್ಳಿಯಲ್ಲಿ ನೆರವೇರಿಸಲಾಯಿತು.

ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ರಾಮಣ್ಣನವರ ಪಾರ್ಥಿವ ಶರೀರವನ್ನು ಮಂಡ್ಯದಿಂದ ಮದ್ದೂರು ಮಾರ್ಗವಾಗಿ ದೇಶಹಳ್ಳಿಗೆ ತೆರೆದ ವಾಹನದಲ್ಲಿ ಕೊಂಡಯ್ಯಲಾಯಿತು. ಮಂಡ್ಯ, ಮದ್ದೂರು ನಗರ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನ ಅಣ್ಣನವರಿಗೆ ಅಂತಿಮ ಗೌರವ ಸಲ್ಲಿಸಿದರು. ಮಾರ್ಗ ಮಧ್ಯದಲ್ಲಿ ಒಬ್ಬ ವ್ಯಕ್ತಿ ಅಣ್ಣನವರ ಮುಖದ ಮೇಲೆ ಬಿಸಿಲು ಬೀಳುತ್ತಿದೆ ಎಂದು ಕೊಡೆ ನೀಡಿದ ಹೃದಯ ಸ್ಪರ್ಶಿ ಘಟನೆಯೂ ನಡೆಯಿತು. ಆ ಪುಣ್ಯಾತ್ಮನ ಮಾತಿನಂತೆ ಸಂಜೆ ನಾಲ್ಕು ಗಂಟೆಯವರೆಗೆ ದೇಶಹಳ್ಳಿ ತಲುಪುವವರೆಗೂ ಅಣ್ಣನವರ ಮುಖದ ಮೇಲೆ ಬಿಸಿಲು ಬೀಳದಂತೆ ಕೊಡೆ ಹಿಡಿಯಲಾಗಿತ್ತು’

ಅಣ್ಣವರ ಶರೀರ ದೇಶಹಳ್ಳೀಗೆ ತಲುಪುವ ವೇಳೆಗೆ ಬೆಂಗಳೂರಿದ ಬಂದಿದ್ದ ನೂರಾರು ಅವರ ಆಪ್ತ ಮಿತ್ರರು ಜಿ,ನಾರಾಯಣರ ಮನೆಯ ಜಗುಲಿಯ ಮೇಲೆ ಕುಳಿತು ಕಾಯುತ್ತಿದ್ದರು. ದೂರದ ಬಳ್ಳಾರಿಯಿಂದ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣನವರು ಕಥೆಗಾರ ರಾಜಶೇಖರ ನೀರಮಾನ್ವಿ ಜೊತೆ ಬಂದಿದ್ದರು. ಅಣ್ಣನವರ ಆಸೆಯಂತೆ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಯಿತು. ತನ್ನ ಸಮಾಧಿಯ ಮೇಲೆ ಮಾವಿನ ಗಿಡ ನೆಡಬೇಕು. ಆ ಮರದ ಹಣ್ಣುಗಳು ಪಕ್ಷಿಗಳ ಪಾಲಾಗಬೇಕು ಎಂದು ಅಣ್ಣ ಕನಸಿದ್ದರು.

ಅಂತ್ಯ ಸಂಸ್ಕಾರ ಮುಗಿಸಿ ಕೊಪ್ಪಕ್ಕೆ ಗೆಳೆಯನ ಬೈಕ್ ನಲ್ಲಿ ಹೊರಟು ನಿಂತಾಗ ಇಬ್ಬರು ಯುವ ಜೋಡಿಗಳು ನನ್ನ ಬಳಿ ಬಂದು ‘’ ಸಾರ್ ನಾವಿಬ್ಬರೂ ಬಾಗಲಕೊಟೆಯಿಂದ ಬಂದಿದ್ದೀವಿ. ದಂಪತಿಗಳಾಗಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೀವಿ. ರಾಮಣ್ಣನವರ ಕಥೆಗಳನ್ನು ಓದಿ ಪ್ರಭಾವಿತರಾದವರು ನಾವು. ಸರ್ಕಾರಿ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದೆವು ಅವರ ನಿಧನದ ಸುದ್ದಿ ಕೇಳಿ ಅವರ ಮುಖ ನೋಡುವ ಆಸೆಯಿಂದ ಇಲ್ಲಿಗೆ ಬಂದೆವು. ಈಗ ಬೆಂಗಳೂರಿಗೆ ಹೇಗೆ ಹೋಗುವುದು?’’ ಎಂದು ಕೇಳಿದಾಗ ನನಗೆ ಕ್ಷಣ ಕಾಲ ಮಾತು ಹೊರಡದಾಯಿತು. ನಂತರ ನನ್ನ ಗೆಳೆಯನ ಬೈಕ್ ನಲ್ಲಿ ಅವರನ್ನು ಮದ್ದೂರು ರೈಲ್ವೆ ನಿಲ್ದಾಣಕ್ಕೆ ಕಳುಹಿಸಿ, ಸಂಜೆ ಏಳು ಗಂಟೆಗೆ ಬೆಂಗಳೂರಿಗೆ ರೈಲು ಇರುವ ಮಾಹಿತಿ ನೀಡಿದೆ.

ನನ್ನ ಗೆಳೆಯ ಜಯರಾಮು ಅವರನ್ನು ನಿಲ್ದಾಣಕ್ಕೆ ಬಿಟ್ಟುಬರುವವರೆಗೂ ದೇಶಹಳ್ಳಿ ಗೆಟ್ ಬಳಿ ಕುಳಿತು ನಮ್ಮನ್ನು ವೈಚಾರಿಕವಾಗಿ ಬೆಳೆಸಿದ ಅಣ್ಣನವರು ಸಾಹಿತ್ಯದ ಮೂಲಕ ನಾಡಿನುದ್ದಕ್ಕೂ ನನ್ನ ನಂತರದ ತಲೆಮಾರನ್ನು ಬೆಳೆಸಿದ್ದಾರೆ ಎಂದು ಆ ಕ್ಷಣಕ್ಕೆ ನನಗೆ ಮನದಟ್ಟಾಯಿತು. ರಾಮಣ್ಣನವರು ಓರ್ವ ಸರ್ಕಾರಿ ಅಧಿಕಾರಿಯಾಗಿ, ಸಾಹಿತಿಯಾಗಿದ್ದರೂ ಸಹ ಪ್ರಶಸ್ತಿ ಅಥವಾ ಅಧಿಕಾರದ ಸ್ಥಾನಮಾನಗಳಿಗೆ ಆಸೆ ಪಡೆದೆ ಸಮಾಜದ ಎಲ್ಲಾ ಅಸಮಾನತೆಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದರು. ಈ ಕಾರಣದಿಂದಾಗಿ ಮಂಡ್ಯ ಜಿಲ್ಲೆಯ ನೆಲದಲ್ಲಿ ಇಂದಿಗೂ ಸಹ ಡಾ,ರಾಮಣ್ಣ ಮತ್ತು ಪ್ರೊ.ಹೆಚ್.ಎಲ್.ಕೇಶವಮೂರ್ತಿ ಇಬ್ಬರೂ ವೈಚಾರಿಕತೆಯ ಗುಪ್ತ ನದಿಗಳಂತೆ ಈಗಲೂ ಹರಿಯುತ್ತಿದ್ದಾರೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply