ಸರಕಾರ ಬದಲಾಗಿದೆ. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸರಕಾರಿ ಕೃಪಾಪೋಷಿತವಾದ ಅಕಾಡೆಮಿ ಪ್ರಾಧಿಕಾರ ಹಾಗೂ ರಂಗಾಯಣಗಳಿಗೆ ವಾರಸುದಾರರು ಯಾರು ಎನ್ನುವ ಪ್ರಶ್ನೆ ತಾರಕಕ್ಕೇರಿದೆ. ಕೆಲವರು ಈಗಾಗಲೇ ಟವಲ್ ಹಾಕಿ ಕೂತಿದ್ದಾರೆ. ಇನ್ನೂ ಹಲವು ಆಕಾಂಕ್ಷಿಗಳು ಯಾರ ಶಿಪಾರಸ್ಸು ಪಡೆಯಬೇಕು, ಹೇಗೆ ಆಯ್ಕೆಗೊಳ್ಳಬೇಕು ಎನ್ನುವ ಕುರಿತ ಪರ್ಯಾಯ ಮಾರ್ಗಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಸಾಮರ್ಥ್ಯವಿರುವ ಕೆಲವರು ಶಿಪಾರಸ್ಸು ಲಾಭಿಗಳ ಗೊಡವೆಗಳಿಲ್ಲದೇ ನಿರ್ಲಿಪ್ತರಾಗಿದ್ದಾರೆ.
ಇದರ ನಡುವೆ ರಂಗಾಯಣಗಳ ನಿರ್ದೇಶಕರು ಯಾರಾಗಬೇಕು ಎನ್ನುವುದರ ಕುರಿತು ಚರ್ಚೆ ಶುರುವಾಗಿದೆ. ಪ್ರಜಾವಾಣಿಯಲ್ಲೂ ವರದಿ ಪ್ರಕಟವಾಗಿದೆ. ಈ ಸಲ ಯುವಕರಿಗೆ ಅವಕಾಶ ಮಾಡಿ ಕೊಡಬೇಕು ಎಂಬ ಮಾತು ಕೂಡಾ ಯುವ ರಂಗಕರ್ಮಿ ವಲಯದಿಂದ ಜೋರಾಗಿದೆ. ಅವಕಾಶ ಸಿಕ್ಕರೆ ಇರಲಿ ಎಂದು ಹಿರಿಯ ರಂಗಕರ್ಮಿಗಳೂ ಕಾಯುತ್ತಿದ್ದಾರೆ. ಆದರೆ ರಂಗಾಯಣದ ಬೈಲಾ ಪ್ರಕಾರ ನಿರ್ದೇಶಕರ ಆಯ್ಕೆ ಮಾಡುವುದು ಸರಕಾರವೂ ಅಲ್ಲಾ ಸಂಸ್ಕೃತಿ ಇಲಾಖೆಯೂ ಅಲ್ಲ. ಅದೆಲ್ಲವನ್ನೂ ನಿರ್ಧರಿಸಬೇಕಾದದ್ದು ರಂಗಸಮಾಜ.
ಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಸಮಾಜಕ್ಕೆ ಅರ್ಹ ಸದಸ್ಯರನ್ನು ಆಯ್ಕೆ ಮಾಡಬೇಕು. ಈ ರಂಗಸಮಾಜದ ಅಧ್ಯಕ್ಷರಾಗಿ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದು ಅವರು ರಂಗಸಮಾಜದ ಸಭೆ ಕರೆಯಬೇಕು. ಆ ಸಭೆಯಲ್ಲಿ ಆರೂ ರಂಗಾಯಣಗಳಿಗೆ ನಿರ್ದೇಶಕರಾಗಬಹುದಾದ ಅರ್ಹರ ಕುರಿತು ಚರ್ಚೆಯಾಗಬೇಕು. ತದನಂತರ ಸರ್ವಾನುಮತ ಇಲ್ಲವೇ ಬಹುಮತದ ನಿರ್ಧಾರದಂತೆ ಪ್ರತಿಯೊಂದು ರಂಗಾಯಣಕ್ಕೂ ಮೂರು ಜನ ಅರ್ಹರ ಹೆಸರನ್ನು ರಂಗಸಮಾಜ ಆಯ್ಕೆ ಮಾಡಿ ಇಲಾಖೆಯ ನಿರ್ದೇಶಕರ ಮೂಲಕ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಗಳಿಗೆ ಕಳಿಸಿಕೊಡಬೇಕು. ಅ ಮೂರು ಹೆಸರುಗಳಲ್ಲಿಯೇ ಯಾವುದಾದರೂ ಒಂದು ಹೆಸರನ್ನು ಸಚಿವರ ಮಾರ್ಗದರ್ಶನದಂತೆ ಸಚಿವಾಲಯದ ಕಾರ್ಯದರ್ಶಿಗಳು ರಂಗಾಯಣಗಳ ನಿರ್ದೇಶಕರ ಹೆಸರನ್ನು ಘೋಷಿಸಬೇಕು. ಆದರೆ ಈ ಬೈಲಾ ಪ್ರಕಾರ ಎನ್ನುವುದು ರಾಜಕೀಯದಾಟದವರ ಮುಂದೆ ಪುಸ್ತಕದ ಬದನೆಕಾಯಿಯಾಗಿದೆ. ರಾಜಕೀಯ ಪಕ್ಷದ ಸಿದ್ದಾಂತಗಳ ಬೆಂಬಲಿಗರನ್ನೋ ಇಲ್ಲವೇ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರುವವರನ್ನೋ ನಿರ್ದೇಶಕರನ್ನಾಗಿ ಸರಕಾರವೇ ಆಯ್ಕೆ ಮಾಡಿ ಘೋಷಿಸುವ ವಿಕ್ಷಿಪ್ತ ಸಂಪ್ರದಾಯ ಶುರುವಾಗಿದ್ದರಿಂದಲೇ ಅಡ್ಡಂಡ ಕಾರ್ಯಪ್ಪನಂತಹ ಅಡ್ನಾಡಿಗಳು ಮೈಸೂರು ರಂಗಾಯಣಕ್ಕೆ ಒಕ್ಕರಿಸಿ ಅನಾಹುತಗಳನ್ನು ಮಾಡಲು ಸಾಧ್ಯವಾಯಿತು. ರಂಗಸಮಾಜ ಎನ್ನುವುದೇ ಇದ್ದರೂ ಇಲ್ಲದಂತಾಗಿತ್ತು.
ಕಾಂಗ್ರೆಸ್ ಸರಕಾರವೂ ಸಂಘಿಸರಕಾರದ ವಿಕ್ಷಿಪ್ತ ಮಾದರಿಯನ್ನು ಅನುಕರಿಸದೇ ಬೈಲಾ ಪ್ರಕಾರ ರಂಗಾಯಣದ ನಿರ್ದೇಶಕರನ್ನು ಪಾರದರ್ಶಕವಾಗಿ ಆಯ್ಕೆ ಮಾಡಬೇಕಾಗಿದೆ. ಮೊದಲು ಸಾಂಸ್ಕೃತಿಕ ವಲಯದಲ್ಲಿ ಅನುಭವ ಇರುವವರನ್ನು ರಂಗಸಮಾಜಕ್ಕೆ ಸದಸ್ಯರನ್ನಾಗಿ ಆಯ್ಕೆ ಮಾಡಿ ನಂತರ ಅವರ ಅಭಿಪ್ರಾಯ ಪಡೆದು ರಂಗಾಯಣಕ್ಕೆ ಯೋಗ್ಯವೆನಿಸುವ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ. ಸಂವಿಧಾನಕ್ಕೆ ನಿಷ್ಟೆ ಹಾಗೂ ಬದ್ದತೆಯನ್ನು ಹೊಂದಿದ್ದೇವೆ ಎನ್ನುವ ಕಾಂಗ್ರೆಸ್ ಪಕ್ಷದಿಂದ ಬೈಲಾ ನಿಷ್ಟೆಯನ್ನು ಸಾಂಸ್ಕೃತಿಕ ಲೋಕ ಅಪೇಕ್ಷಿಸುತ್ತದೆ.
ಹಾಗೆಯೇ ರಂಗಾಯಣಕ್ಕೆ ಯುವಕರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕೆನ್ನುವ ಸುದ್ದಿಯನ್ನು ವ್ಯಾಪಕವಾಗಿ ಹಬ್ಬಿಸಲಾಗಿದೆ. ರಂಗಾಯಣದಂತಹ ಸಂಸ್ಥೆಗಳಿಗೆ ನಿರ್ದೇಶಕರಾಗಲು ಕೇವಲ ವಯಸ್ಸೊಂದೇ ಮಾನದಂಡವಾಗಬಾರದು. ರಂಗಕರ್ಮಿಗಳ ರಂಗಾನುಭವ, ಸಾಂಸ್ಕೃತಿಕ ಲೋಕಕ್ಕೆ ಅವರು ಕೊಟ್ಟ ಕೊಡುಗೆ, ನಿರಂತರ ಕ್ರಿಯಾಶೀಲತೆ, ಆಡಳಿತಾತ್ಮಕ ಚತುರತೆ ಹಾಗೂ ಸಂಘಟನಾ ಶಕ್ತಿಗಳು ರಂಗಾಯಣದ ನೇತಾರರಾಗುವವರಿಗೆ ಇರಬೇಕಾಗುತ್ತದೆ. ಕೆಲವಾರು ನಾಟಕ ನಿರ್ದೇಶಿಸಿದ್ದಾರೆಂದು ಮುಂಗೋಪಿಯಾದ ಯುವ ರಂಗಕರ್ಮಿಗೆ ರಂಗಾಯಣದ ಜವಾಬ್ದಾರಿ ಕೊಟ್ಟರೆ ಅಸಹನೆ ಅಸಹಕಾರವೇ ಹೆಚ್ಚಾಗಿ ರಂಗಕ್ರಿಯೆಗಳು ಕುಂಠಿತವಾಗುತ್ತವೆ. ಹೆಸರಾಂತ ಕಲಾವಿದ ಎಂದು ಯುವನಟರಿಗೆ ಅಧಿಕಾರ ಕೊಟ್ಟರೆ ಸಂಘಟನಾ ಶಕ್ತಿಯ ಕೊರತೆಯಿಂದಾಗಿ ರಂಗಾಯಣ ಸೊರಗುತ್ತದೆ. ಇಲ್ಲಿ ಹಿರಿಯರೋ ಕಿರಿಯರೋ ಎನ್ನುವುದು ಮುಖ್ಯವಾಗದೇ ಎಲ್ಲರನ್ನೂ ಸೌಹಾರ್ದಯುತವಾಗಿ ಮುನ್ನೆಡಸುವ, ಸಹನೆಯಿಂದಾ ವರ್ತಿಸುವ ಹಾಗೂ ಸಹ ಕಲಾವಿದರೊಂದಿಗೆ ಸಹಮತ ರೂಪಿಸುವ ಮತ್ತು ಸರಕಾರದ ಜೊತೆ ಸಕಾರಾತ್ಮಕ ಸಂವಹನ ಮಾಡುವಂತಹ ನಾಯಕತ್ವ ಗುಣವುಳ್ಳ ವ್ಯಕ್ತಿ ರಂಗಾಯಣಕ್ಕೆ ಸೂಕ್ತವಾಗಿರುತ್ತಾನೆ. ಅಂತಹ ರಂಗಕರ್ಮಿಯನ್ನು ಹುಡುಕುವ, ಗುರುತಿಸುವ ಹಾಗೂ ನಿರ್ದೇಶಕರಾಗಲು ಹೇಗೆ ಸೂಕ್ತವೆಂದು ಸಮರ್ಥಿಸಿಕೊಳ್ಳುವ ಕೆಲಸ ರಂಗಸಮಾಜದ್ದಾಗಿದೆ. ಸಂಸ್ಕೃತಿ ಇಲಾಖೆಯ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ರಂಗಭೂಮಿಯ ಆಳ ಅಗಲ ಎತ್ತರ ತಿಳಿಯದು. ಅದಕ್ಕಾಗಿಯೇ ರಂಗಸಮಾಜವನ್ನು ಹುಟ್ಟು ಹಾಕಿರುವುದು. ಕೆಲವಾರು ವರ್ಷಗಳಿಂದ ರಂಗಾಯಣಗಳು ನಿಂತ ನೀರಾಗಿವೆ. ಬಿಜೆಪಿ ಸರಕಾರದ ಅವಧಿಯಲ್ಲಂತೂ ಕೇಸರೀಕರಣಗೊಂಡಿವೆ. ದಾವಣಗೆರೆಯ ವೃತ್ತಿರಂಗಾಯಣವಂತೂ ಇನ್ನೂ ಎದ್ದೇ ಇಲ್ಲ. ಹೀಗಾಗಿ ಹಿಂದೆ ಆದ ಅವಗಡಗಳನ್ನು ಗಮನದಲ್ಲಿರಿಸಿಕೊಂಡು ಹಿರಿಯ ಕಿರಿಯರೆಂಬ ಬೇಧ ತೋರದೇ ಸಂಘಟನಾ ಸಾಮರ್ಥ್ಯವಿರುವ ಕ್ರಿಯಾಶೀಲ ರಂಗಕರ್ಮಿಯನ್ನು ರಂಗಸಮಾಜದ ಮೂಲಕ ಆರೂ ರಂಗಾಯಣಗಳಿಗೆ ಆಯ್ಕೆ ಮಾಡಿ ಕನ್ನಡ ನಾಡಿನ ಸಾಂಸ್ಕೃತಿಕ ಲೋಕವನ್ನು ಸಕಾರಾತ್ಮಕವಾಗಿ ಉಳಿಸುವ ಬೆಳೆಸುವ ಹಾಗೂ ವಿಸ್ತರಿಸುವ ಕೆಲಸ ಆಗಬೇಕಿದೆ. ಇದಕ್ಕೆ ಸರಕಾರದ ಸಹಕಾರವೂ ಅಗತ್ಯವಾಗಿದೆ.
- ಶಶಿಕಾಂತ ಯಡಹಳ್ಳಿ, ರಂಗಕರ್ಮಿ




