ನಿನ್ನೆ ಪ್ರಕಟವಾದ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಬಾರಿ ಕರ್ನಾಟಕದಿಂದ ಮುವತ್ತು ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ಸಂತೋಷದ ಸಂಗತಿ. ಜೊತೆಗೆ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಮನಾಗಿ ಗ್ರಾಮಾತರ ಪ್ರದೇಶದ ಕೃಷಿಕ ಹಾಗೂ ಅಂಗನವಾಡಿ ಶಿಕ್ಷಕಿ ಮತ್ತು ಸಣ್ಣ ಚಹಾ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಜನ ಸಾಮಾನ್ಯರ ಮಕ್ಕಳು ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆ ಪಡುವಂತಹದ್ದು.
ಲೋಕಸೇವಾ ಆಯೋಗವು ಪ್ರತಿವರ್ಷ ನಡೆಸುವ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇಕಡ ಎಂಬತ್ತರಷ್ಟು ಮಂದಿ ಇಂಜಿನಿಯರ್ ಹಾಗೂ ವೈದ್ಯಕೀಯ ಪದವೀಧರರು ಆಯ್ಕೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಏಕೆಂದರೆ, ಇಂತಹ ಪ್ರತಿಭಾವಂತರು ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಬಹುದಾಗಿತ್ತು ಎಂದು ನನಗೆ ಪ್ರತಿಬಾರಿಯೂ ಫಲಿತಾಂಶ ನೋಡೊದಾಗ ಅನಿಸುತ್ತದೆ.
ಕಲಾ ಪದವೀಧರರಾಗಿದ್ದು ಭಾರತೀಯ ಇತಿಹಾಸ, ಸಾಹಿತ್ಯ, ಸಾರ್ವಜನಿಕ ಆಡಳಿತ, ರಾಜಕೀಯ ವಿಜ್ಞಾನ ( ಪೊಲಿಟಕಲ್ ಸೈನ್ಸ್) ಸಮಾಜ ಶಾಸ್ತ್ರ ( ಸೋಷಿಯಾಲಜಿ) ಅರ್ಥಶಾಸ್ತ್ರ ಇವುಗಳನ್ನ ಓದಿಕೊಂಡಿರುವ ಅಭ್ಯರ್ಥಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಮುಖ್ಯವಾಗಿ ಇಂತಹ ಪದವೀಧರರು ಸದಾ ಸಮಾಜದ ಜೊತೆ ಒಡನಾಡಬೇಕಾದ ಐ.ಎ.ಎಸ್. ಮತ್ತು ಐ.ಪಿ.ಸ್. ಹುದ್ದೆಗಳಿಗೆ ಬರಬೇಕಿದೆ. ವಿಜ್ಞಾನದ ವಿದ್ಯಾರ್ಥಿಗಳಾಗಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಾನು ಮೇಲೆ ತಿಳಿಸಿದ ವಿಷಯಗಳನ್ನು ಅಧ್ಯಯನ ಮಾಡಿರುವ ಇಂಜಿನಿಯರ್ ಅಥವಾ ವೈದ್ಯರ ಉದಾತ್ತ ಮನೋಭಾವದ ಸೇವೆಯನ್ನು ನಾನು ಅಲ್ಲಗೆಳೆಯುವುದಿಲ್ಲ. ಅವರಲ್ಲಿಯೂ ಸಮಾಜ ಸೇವೆಯ ಮುಖವುಳ್ಳ ಅನೇಕ ಅಭ್ಯರ್ಥಿಗಳಿದ್ದಾರೆ.
ಕಳೆದ ಎರಡು ದಶಕಗಳಿಂದ ನಾನು ಗಮನಿಸಿದ ಹಾಗೂ ಕರ್ನಾಟಕಕ್ಕೆ ಬಂದಿರುವ ಹೊರ ರಾಜ್ಯದ ಅಧಿಕಾರಿಗಳಲ್ಲಿ ಇಂತಹವರ ಸಂಖ್ಯೆ ತೀರಾ ಕಡಿಮೆ. ಇವರಿಗೆ ಹೋಲಿಸಿದರೆ, ನಮ್ಮ ಕರ್ನಾಟಕದ ಕೆ.ಎ.ಎಸ್. ಅಧಿಕಾರಿಗಳು ಸಾವಿರಪಟ್ಟು ಮೇಲು ಎಂದು ಅನಿಸಿದೆ. ಇವುಗಳ ನಡುವೆಯೂ ಕರ್ನಾಟಕಕ್ಕೆ ಆಸ್ತಿಯಾಗಬಲ್ಲ ಕೆಲವು ಐ.ಎ.ಎಸ್. ಮತ್ತು ಐ.ಪಿ.ಎಸ್. ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ. ಇವರೆಲ್ಲರೂ ನೂತನ ಅಭ್ಯರ್ಥಿಗಳಇಗೆ ಮಾದರಿಯಾಗಬಲ್ಲರು.
ಈಗ ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವ ತಮಿಳುನಾಡಿನ ಶಶಿಕಾಂತ್ ಸೆಂಥಿಲ್ ( ಇವರ ಕುರಿತು ಮುಂದೆ ಸುಧೀರ್ಘವಾಗಿ ಬರೆಯುತ್ತೇನೆ. ) ಮಣಿವಣ್ಣನ್, ಚೋಳನ್ ಹಾಗೂ ಅವರ ಪತ್ನಿ ದೀಪಾ ಚೋಳನ್, ಬಿಹಾರ ಮೂಲದ ಮೋನಿಶ್ ಮುದ್ಗಿಲ್ ( ಇವರು ಹಲವು ವಿವಾದಗಳಿಂದ ಹೆಸರಾದ ಐ.ಪಿ.ಎಸ್. ಅಧಿಕಾರಿ ಹಾಗೂ ಕನ್ನಡದ ಹೆಣ್ಣುಮಗಳು ಡಿ. ರೂಪಾ ಅವರ ಪತಿ) ನಮ್ಮ ಕರ್ನಾಟಕದ ಮಧುಗಿರಿಯ ಡಾ.ಅಜೆಯ್ ನಾಗಭೂಷಣ್, ಅವರ ಪತ್ನಿ ಪಂಜಾಬ್ ಮೂಲದ ಶೀಖಾ ಹೀಗೆ ಹಲವರನ್ನು ಹೆಸರಿಸಬಹುದು. ನಾನು ತೀರಾ ಹತ್ತಿರದಿಂದ ನೋಡಿದ ಹಾಗೂ ಇವರ ಕೆಲಸ ಕಾರ್ಯಗಳನ್ನು ಗಮನಿಸಿದ ಕಾರಣಕ್ಕಾಗಿ ಇವರನ್ನು ಮಾತ್ರ ಇಲ್ಲಿ ಹೆಸರಿಸಿದ್ದೀನಿ.
ಇಪ್ಪತ್ತು ವರ್ಷಗ ಳ ಹಿಂದೆ ( 2002-2003) ಅವಳಿ ನಗರಗಳೆಂದು ಹೆಸರಾದ ಹುಬ್ಬಳ್ಳಿ-ಧಾರವಾಡಗಳು ಅವುಗಳ ಜನ್ಮದ ಇತಿಹಾಸದಲ್ಲಿ ಟಾರ್ ರಸ್ತೆ ಕಂಡಿರಲಿಲ್ಲ. ದಿನ ನಿತ್ಯ ಅದಿರಿನ ಲಾರಿಗಳು ಹೊಸಪೇಟೆ ಮತ್ತು ಬಳ್ಳಾರಿಯಿಂದ ಕಾರವಾರ ಬಂದರಿಗೆ ಹುಬ್ಬಳ್ಳಿ ಮಾರ್ಗವಾಗಿ ಚಲಿಸುವಾಗ ಅಲ್ಲಿನ ಜನತೆ ರಸ್ತೆಗಳ ಕೆಂಪು ದೂಳಿನಿಂದ ಸ್ನಾನ ಮಾಢುವುದು ಕಡ್ಡಾಯವಾಗಿತ್ತು. ಅವಳಿನಗರದ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಬಂದ ಮಣೀವಣ್ಣನ್ ಅವರು ಹುಬ್ಬಳ್ಳಿ ನಗರದ ನೆಹರೂ ಕ್ರೀಡಾಂಗಣವನ್ನು ( ಅದು ಕಾರ್ಪೋರೇಷನ್ ಆಸ್ತಿ) ವಿಶ್ವ ಬ್ಯಾಂಕ್ ಗೆ ಒತ್ತೆ ಇಟ್ಟು ಮುವತ್ತು ಕೋಟಿ ರೂಪಾಯಿ ಹಣ ತಂದು ಟಾರ್ ರಸ್ತೆಗಳನ್ನು ನಿರ್ಮಿಸಿ ಹುಬ್ಬಳ್ಳಿ- ಧಾರವಾಡದ ಜನತೆಯನ್ನ ದೂಳಿನಿಂದ ಕಾಪಾಡಿದರು. ರಾಜಕಾರಣಿಗಳು ಮಾಡಬೇಕಾದ ಕೆಲಸವನ್ನು ಓರ್ವ ಜನಪರ ಅಧಿಕಾರಿಯಾಗಿ ಮಣಿವಣ್ಣನ್ ಮಾಡಿ ತೋರಿಸಿದ್ದರು.
ಮೋನಿಶ್ ಮುದ್ಗಿಲ್ ಬೀದರ್ ಜಿಲ್ಲಾಧಿಕಾರಿಯಾಗಿ, ಅವರ ಪತ್ನಿ ಡಿ.ರೂಪಾ ಅವರು ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ 2004-2005 ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉದಯ ಟಿ.ವಿ. ಉತ್ತರ ಕರ್ನಾಟಕದ ಪ್ರಾದೇಶಿಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನ್ನ ವ್ಯಾಪ್ತಿಗೆ ಈ ಎರಡು ಜಿಲ್ಲೆಗಳು ಬರುತ್ತಿದ್ದ ಕಾರಣ ಈ ಇಬ್ಬರೂ ನನಗೆ ಪರಿಚಿತರಾಗಿದ್ದರು. ಹೈದರಾಬಾದ್ ಕರ್ನಾಟಕದ ಹಿಂದುಳಿದ ಜಿಲ್ಲೆಯಾಗಿದ್ದರೂ ಸಹ ಐತಿಹಾಸಿಕ ಮಹತ್ವ ಮತ್ತು ಸ್ಮಾರಕಗಳನ್ನು ಹೊಂದಿರುವ ಬೀದರ್ ನಗರ ಅತ್ಯಂತ ಕೆಟ್ಟ ವ್ಯವಸ್ಥೆಗಳ ಅಗರವಾಗಿತ್ತು. ಅಲ್ಲಿನ ರಸ್ತೆಗಳನ್ನು ವಿಸ್ತರಿಸಿ, ಮಾರುಕಟ್ಟೆ, ಬಸ್ ನಿಲ್ದಾಣ, ಸರ್ಕಾರಿ ಶಾಲಾ ಕಾಲೇಜುಗಳು, ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ ಹೀಗೆ ಹಲವು ಸೌಕರ್ಯಗಳ ಮೂಲಕ ಮುದ್ಗಿಲ್ ಅವರು ಬೀದರ್ ನಗರಕ್ಕೆ ಹೊಸ ರೂಪವನ್ನು ನೀಡಿದರು.
ಬೀದರ್ ನ ಕೋಟೆಗೆ ಹೊಂದಿಕೊಂಡಂತೆ ಜಿಲ್ಲಾಧಿಕಾರಿಗಳ ನಿವಾಸವಿತ್ತು. ಯಾವುದೇ ಜನಸಾಮಾನ್ಯರು ಅವರನ್ನು ಭೇಟಿಯಾಗಬಹುದಿತ್ತು. ಒಂದು ದಿನ ಬೆಳಿಗ್ಗೆ ಬೀದರ್ ನಲ್ಲಿದ್ದ ನಾನು ನಿವಾಸಕ್ಕೆ ತೆರಳಿ ಅವರ ಜೊತೆ ಉಪಹಾರ ಸೇವಿಸುತ್ತಾ ಕೂತಿದ್ದೆ. ಅದೇ ವೇಳೆಗೆ ಒಬ್ಬ ರೈತನು ಆಗಮಿಸಿದ. ಅವನಿಗೆ ಚಹಾ ನೀಡಿ ಸಮಸ್ಯೆ ಏನು ಎಂದು ಕೇಳಿದರು. ರೈತ ಮರಾಠಿ ಹಾಗೂ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಮಾತನಾಡಲು ಶುರು ಮಾಡಿದನು. ಕೂಡಲೇ ಅವನ ಮಾತಿಗೆ ತಡೆ ಹಾಕಿದ ಮುದ್ಗಿಲ್ ಅವರು ನಿನಗೆ ಕನ್ನಡ ಬರುವುದಿಲ್ಲವೆ? ಎಂದು ಪ್ರಶ್ನಿಸಿದರು. ನಂತರ ರೈತನು ನನ್ನ ಮಾತೃ ಭಾಷೆ ಕನ್ನಡ ಸ್ವಾಮಿ ಎಂದು ಕೈಮುಗಿಯುತ್ತಾ ಉತ್ತರಿಸಿದನು.
ಇದಕ್ಕೆ ಮುದ್ಗಿಲ್ ಕೇಳಿದ ಪ್ರಶ್ನೆ ಹೀಗಿತ್ತು. ‘’ ಅಲ್ಲಪ್ಪಾ ಯಜಮಾನ, ನೀನು ಕನ್ನಡ ಮಾತನಾಡದಿದ್ದರೆ, ದೂರದ ಬಿಹಾರದಿಂದ ಬಂದಿರುವ ನಾನು ನಿನ್ನಂತೆ ಕನ್ನಡ ಭಾಷೆ ಕಲಿಯುವುದು ಯಾವಾಗ? ಯಾವಾಗ ನನಗೆ ಕಲಿಸುತ್ತಿ? ಎಂದು ನಗುತ್ತಾ ಪ್ರಶ್ನೆ ಕೇಳಿದ ಅವರು ಕಛೇರಿಯಲ್ಲಿ ಪತ್ರವ್ಯವಹಾರ ಕನ್ನಡದಲ್ಲಿ ಇರುತ್ತೆ. ನಿನ್ನ ಭೂಮಿಯ ದಾಖಲೆಗಳು ಸಹ ಕನ್ನಡದಲ್ಲಿವೆ ಗೊತ್ತು ತಾನೆ? ಎಂದು ಪ್ರಶ್ನಿಸಿದರು.
ಇಂತಹ ಅನೇಕ ಅಧಿಕಾರಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ. ಹೊಸದಾಗಿ ಸೇವೆ ಬರುವವರು ಮತ್ತು ಹೋಗುವವರು ಇಂತಹ ಮಹನೀಯರಿಂದ ಕಲಿಯುವುದು ಬಹಳಷ್ಟು ಇದೆ. ಪ್ರತಿಭೆ ಎನನುವುದು ಕೇವಲ ಅಂಕ ತೆಗೆಯುವುದಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿಭೆಯ ಜೊತೆ ಮಾನವೀಯತೆ ಮತ್ತು ಬಡ ಗ್ರಾಮ ಭಾರತವನ್ನು ಸದೃಢವಾಗಿ ಕಟ್ಟುವ ಕನಸುಗಳನ್ನು ಇಂದಿನ ಯುವ ಅಧಿಕಾರಿಗಳು ಹೊಂದಿರಬೇಕು. ಇಂತಹ ಅಧಿಕಾರಿಗಳು ಮಾತ್ರ ನಮಗೆ ಬೇಕಾಗಿದ್ದಾರೆ. ಹವಾ ನಿಯಂತ್ರಿತ ಕಾರು ಮತ್ತು ಬಂಗಲೆಯೊಳಗೆ ಕಳೆದು ಹೋಗುವ ಅಧಿಕಾರಿಗಳು ನಮಗೆ ಬೇಕಾಗಿಲ್ಲ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




