ಶಾಂತಿಯುತ ಮತದಾನಕ್ಕೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದ ಎಡಿಜಿಪಿ

3 years ago

ಬೆಂಗಳೂರು: ರಾಜ್ಯದ  58,282 ಮತಗಟ್ಟೆಗಳಲ್ಲಿ ನಿನ್ನೆ ರಾತ್ರಿ 10.15ಕ್ಕೆ ಮತದಾನ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ನಡೆದಿದೆ.

ಕೆಲವು ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸವಾಲಾಗಿತ್ತು, ಆದರೂ ಬಹುತೇಕ ಮತದಾನ ಶಾಂತಿಯಿಂದ ನಡೆಸಲು ಸಹಕಾರ ನೀಡಿದ ರಾಜ್ಯದ ಜನತೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ( ಎಡಿಜಿಪಿ) ಅಲೋಕ್ ಕುಮಾರ್ ಕೃತಜ್ಞತೆ ತಿಳಿಸಿದ್ದಾರೆ. ಜೊತೆಗೆ, ಕರ್ನಾಟಕ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

ವಿಧಾನಸಭಾ ಚುನಾವಣೆ ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರು ತಮ್ಮ ತಾಯಿಯ ಅಂತ್ಯಸಂಸ್ಕಾರ ಮುಗಿಸಿ ತಕ್ಷಣವೇ ಕೆಲಸಕ್ಕೆ ಹಿಂದಿರುಗಿರುವ ಮೂಲಕ ಕರ್ತವ್ಯನಿಷ್ಠೆ ತೋರಿದ್ದು, ಅವರ ಕೆಲಸದ ಬದ್ಧತೆಗೆ ಪೊಲೀಸ್ ಮಹಾ ನಿರ್ದೇಶಕ ( ಡಿಜಿ- ಐಜಿಪಿ) ಪ್ರವೀಣ್ ಸೂದ್, ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ನಮ್ಮ ಸಿಬ್ಬಂದಿಯೊಬ್ಬರ ತಾಯಿ ನಿಧನರಾಗಿದ್ದು ವಿಷಯ ತಿಳಿದು ಅವರಿಗೆ ರಜೆ ತೆಗೆದುಕೊಳ್ಳಿ ಎಂದು ಹೇಳಲಾಗಿತ್ತು. ಆದರೂ, ರಜೆ ತೆಗೆದುಕೊಳ್ಳದೇ ಕರ್ತವ್ಯದಲ್ಲಿ ಮುಂದುವರಿಯುವುದಾಗಿ ಹೇಳಿದರು.

ಇದು ನಿಜಕ್ಕೂ ಹೆಮ್ಮೆ ಪಡುವ ವಿಷಯ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿ ಬದ್ಧತೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ಸಹೋದ್ಯೋಗಿಗಳು ಸನ್ಮಾನಿಸಿದ ವಿಡಿಯೋ ಶೇರ್ ಮಾಡಿದ್ದಾರೆ.

ಪ್ರವೀಣ್ ಸೂದ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಾತನಾಡಿದ ಪೊಲೀಸ್ ಸಿಬ್ಬಂದಿ, “ನನ್ನ ತಾಯಿಗೆ ಹುಷಾರಿರಲಿಲ್ಲ, ಅವರಿಗೆ 80 ವರ್ಷದ ಆಸುಪಾಸು. ಒಂದು ವರ್ಷದ ಹಿಂದೆ ಜಾರಿಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಿದರೂ ಕೂಡ ಕಾಲು ಸರಿಯಾಗಿರಲಿಲ್ಲ. ನಿನ್ನೆ ಸ್ಪಲ್ಪ ಉಸಿರಾಟದ ತೊಂದರೆಯಾಗಿದ್ದು, ಬೆಳಗಿನ ಜಾವ ತೀರಿಕೊಂಡರು. ಮನೆಯಲ್ಲಿ ಅಣ್ಣ ಇದ್ದಾನೆ, ಉಳಿದ ಎಲ್ಲ ಕಾರ್ಯಕ್ರಮಗಳನ್ನು ಮನೆಯವರು ನೋಡಿಕೊಳ್ಳುತ್ತಾರೆ ಎಂದು ತಿಳಿದು, ಎಲೆಕ್ಷನ್ ಡ್ಯೂಟಿ ಇರುವ ಕಾರಣ ನಾನು ಕೆಲಸಕ್ಕೆ ಬಂದಿದ್ದೇನೆ. ನಮ್ಮನ್ನು ಹೆತ್ತುಹೊತ್ತ ಸಾಕಿದ ತಾಯಿ ಸಾವನ್ನಪ್ಪಿದ್ದಾರೆ. ಈಗ ನಮ್ಮನ್ನು ಸಾಕಿ, ಜೋಪಾನ ಮಾಡುತ್ತಿರುವುದು ಪೊಲೀಸ್ ಇಲಾಖೆ, ಇದು ಸಹ ನಮ್ಮ ತಾಯಿಯೇ. ಇಬ್ಬರೂ ತಾಯಂದಿರು ಒಂದೇ” ಎನ್ನುವ ಮೂಲಕ ಕೆಲಸ ಮೇಲಿನ ವಿಶೇಷ ಆಸಕ್ತಿ ವ್ಯಕ್ತಪಡಿಸಿದ್ದಾರೆ.

Leave a Reply