ಆಸ್ಪತ್ರೆಗೆ ದಾಖಲಾದ ಸಿ.ಟಿ.ರವಿ: ಸಿಂಗಾಪುರಕ್ಕೆ ತೆರಳಿದ ಕುಮಾರಸ್ವಾಮಿ

3 years ago

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಂಚರತ್ನ ಯಾತ್ರೆಯ ಮೂಲಕ ಪ್ರವಾಸ ಮತ್ತು ಪ್ರಚಾರದಲ್ಲಿ ತೊಡಗಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ರಾಂತಿ ಮತ್ತು ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದಾರೆ

ಕುಮಾರಸ್ವಾಮಿ ಅವರು ನಿನ್ನೆ ರಾತ್ರಿ ಸಿಂಗಾಪುರಕ್ಕೆ ತೆರಳಿದ್ದು, ಎರಡು ದಿನಗಳ ಕಾಲ ವಿಶ್ರಾಂತಿ ಪಡೆದ ಬಳಿಕ ರಾಜ್ಯಕ್ಕೆ ಮರಳಲಿದ್ದಾರೆ.

ಚುನಾವಣೆ ಸಮಯದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಸಂಬಂಧದ ತಪಾಸಣೆಗಾಗಿ ಅವರು ಸಿಂಗಾಪುರಕ್ಕೆ ತೆರಳಿದ್ದು, ಮತ ಎಣಿಕೆ ನಡೆಯುವ ಮೇ 13ರಂದು ಬೆಳಿಗ್ಗೆ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. 

ನಿನ್ನೆ ಸಂಜೆ ಮತದಾನ ಮುಕ್ತಾಯವಾದ ಬಳಿಕ ಅವರು ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಸಿ ಟಿ ರವಿ ಆಸ್ಪತ್ರೆಗೆ ದಾಖಲು: ಈ ನಡುವೆ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಇದ್ದಕ್ಕಿದ್ದಂತೆ ನಿನ್ನೆ ಮಧ್ಯರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿ.ಟಿ ರವಿ ಅವರಿಗೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಿತ್ತು. ಕಳೆದ 15 ದಿನಗಳಿಂದಲೂ ಆಸ್ಪತ್ರೆ ಸೇರಿದ್ದ ಅವರು, ಲಿಂಗಾಯತ ಸಮಾವೇಶಕ್ಕೂ ಗೈರಾಗಿ, ವೀಡಿಯೋ ಮೂಲಕ ಮತಯಾಚನೆ ಮಾಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಚಿಕಿತ್ಸೆಗಾಗಿ ಮತ್ತೆ ಆಸ್ಪತ್ರೆ ಸೇರಿದ್ದಾರೆ.

ಈ ಹಿಂದೆ ಅವರು ಕಿಡ್ನಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಸೇರಿದ್ದರು. ಆಗ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದಿದ್ದರು. ಆದರೆ ಇದೀಗ ಮತ್ತೆ ಕಿಡ್ನಿ ಸಮಸ್ಯೆಯಿಂದ ಆರೋಗ್ಯ ಕೆಟ್ಟಿದೆ ಎನ್ನಲಾಗಿದೆ.

Leave a Reply