ಬೆಂಗಳೂರು: ಕಾಂಗ್ರೆಸ್ ಅಂದರೆ ಸುಳ್ಳು ಭರವಸೆ, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಈ ಪಕ್ಷದ ಗ್ಯಾರಂಟಿ ಅವಧಿ ಮುಗಿದು ಎಷ್ಟು ಕಾಲವಾಗಿದೆ ಎಂಬ ವಿಷಯವನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಐವತ್ತು ಲಕ್ಷ ಮಂದಿ ಪಕ್ಷದ ಕಾರ್ಯಕರ್ತರೊಂದಿಗೆ ವರ್ಚುವಲ್ ಮೂಲಕ ಸಭೆ ನಡೆಸಿದ ಅವರು, ಟ್ರ್ಯಾಕ್ಟರ್‌ಗೆ ಮಾರುತಿ ಕಾರಿನ ಚಕ್ರ ಹಾಕಿದರೆ ಅದು ಕೆಲಸ ಮಾಡುತ್ತದೆಯೇ? ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯ. ಇಂಥ ಸಣ್ಣ ವಿಚಾರಗಳನ್ನು ಜನರಿಗೆ ತಿಳಿಸಿ, ನೀವು ದೊಡ್ಡ ಭಾಷಣ ಮಾಡುವ ಅಗತ್ಯ ಇಲ್ಲ ಎಂದು ಸಲಹೆ ಮಾಡಿದರು.
ಬಿಜೆಪಿ ಅಭ್ಯರ್ಥಿಗಳ ಪರ ಕರ್ನಾಟಕ ರಾಜ್ಯದ ಜನತೆಯ ಆಶೀರ್ವಾದ ಪಡೆಯಲು ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತೇನೆ. ಕರುನಾಡಿನಲ್ಲಿ ಬಿಜೆಪಿ ಗೆಲ್ಲವುದು ಖಚಿತವಾಗಿದೆ. ಬೂತ್ ಮಟ್ಟದಲ್ಲಿ ಗೆದ್ದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ. ಹೀಗಾಗಿ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಮತ್ತು ಇತರ ಪಕ್ಷಗಳ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಕಾರ್ಯವಿಧಾನ. ನಮ್ಮ ವಿರೋಧಿಗಳ ಅಜೆಂಡಾ ಅಧಿಕಾರ ಹಿಡಿಯುವುದಾಗಿದೆ. ಮುಂಬರುವ 25 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಡಿಸುವುದು, ಬಡತನದಿಂದ ಮುಕ್ತಗೊಳಿಸುವುದು ಮತ್ತು ಯುವಕರ ಸಾಮಥ್ರ್ಯವನ್ನು ಮುಂಚೂಣಿಯಲ್ಲಿರಿಸುವುದು ಬಿಜೆಪಿಯ ಉದ್ದೇಶ ಮತ್ತು ಅಜೆಂಡಾವಾಗಿದೆ ಎಂದರು.
ಕರ್ನಾಟಕದಲ್ಲಿ ಲೋಕತಂತ್ರದ ಉತ್ಸವ ನಡೆಯುತ್ತಿದೆ. ಬಿಜೆಪಿ ಪ್ರತಿ ಬಾರಿ ಚುನಾವಣೆಯನ್ನು ಲೋಕತಂತ್ರದ ಉತ್ಸವವಾಗಿ ಸಂಭ್ರಮಿಸಿದೆ. ಭಗವಾನ್ ಬಸವೇಶ್ವರರ ಪವಿತ್ರ ಭೂಮಿ ಕರ್ನಾಟಕ. ಪ್ರತಿ ಬೂತ್‍ನಲ್ಲಿ ಕಾರ್ಯಕರ್ತರ ಕೆಲಸದಿಂದ ಕರ್ನಾಟಕದಲ್ಲಿ ಬಿಜೆಪಿಯನ್ನು ಅಭೂತವೂರ್ವ ಗೆಲುವು ಸಾಧಿಸಲು ಕಾರಣವಾಗಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೆಲಸದಿಂದಲೇ ನಾವು ಚುನಾವಣೆ ಗೆಲ್ಲುತ್ತೇವೆ. ಎರಡು ದಿನದಲ್ಲಿ ನಾನು ಕಾರ್ಯಕರ್ತರ ನಡುವೆ ಬರುತ್ತಿದ್ದೇನೆ. ಕರ್ನಾಟಕದ ಜನತೆಯ ಆಶೀರ್ವಾದ ಪಡೆಯಲು ಬರುತ್ತಿದ್ದೇನೆ ಎಂದರು.
ಹಿಂದೆ ಒಂದು ಮನೆ ನಿರ್ಮಿಸಲು 300 ದಿನ ಬೇಕಿತ್ತು. ಆದರೀಗ ಆವಾಸ್ ಯೋಜನೆ ಅಡಿ ಬಡವರಿಗೆ ಸುಸಜ್ಜಿತ ಮನೆಯನ್ನು ನೂರು ದಿನಗಳಲ್ಲಿ ಕಟ್ಟಿಕೊಡಲಾಗುತ್ತಿದೆ. ದೇಶದ ವೈದ್ಯಕೀಯ ಕಾಲೇಜು ಸಂಖ್ಯೆ ಹೆಚ್ಚಳವಾಗಿದೆ. ಕಿಸಾನ್ ಸನ್ಮಾನ್ ಯೋಜನೆಯಿಂದ ರೈತರು ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಆರು ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕದ ಬೆಂಗಳೂರು ಗ್ಲೋಬಲ್ ಹಬ್ ಆಗಿ ಪರಿವರ್ತನೆ ಆಗಿದೆ ಎಂದರು.
ಕರ್ನಾಟಕದ ವಿಕಾಸದಿಂದಲೇ ಭಾರತದ ಅಭಿವೃದ್ಧಿ ಸಾಧ್ಯ. ಇಡೀ ವಿಶ್ವ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ನೋಡುತ್ತಿದೆ. ಮುಂದಿನ ಕೆಲ ವರ್ಷಗಳಲ್ಲಿ ಹಲವು ಕಂಪನಿಗಳು ಭಾರತಕ್ಕೆ ಆಗಮಿಸುತ್ತಿದೆ. ಇದರ ಬಹುಪಾಲ ಲಾಭ ಕರ್ನಾಟಕ ಪಡೆದುಕೊಳ್ಳಲಿದೆ. ನಾವು ಹಲವು ಮೂಲಭೂತ ಸೌಕರ್ಯ ಮೇಲ್ದರ್ಜೆಗೆ ಏರಿಸಬೇಕು. ಇದಕ್ಕಾಗಿ ಡಬಲ್ ಎಂಜಿನ್ ಸರ್ಕಾರದ ಅವಶ್ಯತೆ ಇದೆ ಎಂದು ಪ್ರತಿಪಾದಿಸಿದರು.
ಕಳೆದ ಕೆಲ ವರ್ಷಗಳಲ್ಲಿ ಸರ್ಕಾರಿ ಕೆಲಸಕ್ಕಾಗಿ ಕರ್ನಾಟಕ ಯಾವುದೇ ಪ್ರದೇಶಕ್ಕೆ ತೆರಳಿದರೂ ಅಭೂತಪೂರ್ವ ಪ್ರೀತಿ ಬೆಂಬಲ ತೋರಿಸಿದ್ದಾರೆ. ನಮ್ಮ ನಾಯಕರು ಯಾವುದೇ ಪ್ರದೇಶಕ್ಕೆ ತೆರಳಿದರೆ ಅವರಿಗೆ ಪ್ರೀತಿ ತುಂಬಿದ ಸ್ವಾಗತ ಸಿಗುತ್ತಿದೆ. ಇದು ಬಿಜೆಪಿ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ. ಕರ್ನಾಟಕ ಬಿಜೆಪಿಯನ್ನು ಈ ರೀತಿಯ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ಭಾಷಣದಲ್ಲಿ ಸಂತ ಕನಕದಾಸರು, ಶಿವ ಶರಣರ ಬಗ್ಗೆ ಮೋದಿ ಉಲ್ಲೇಖ ಮಾಡಿ, ಕನ್ನಡ ಭಾಷೆ ಸಮೃದ್ಧ ಸಾಹಿತ್ಯವನ್ನು ಹೊಂದಿದೆ. ಕರ್ನಾಟಕದ ಯುವಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸಬೇಕಿದೆ. ಅದಕ್ಕಾಗಿಯೇ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ಸದಾ ಶ್ರಮಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಅಕ್ಕಿ ವಿತರಣೆ ನೀಡಿದ್ದೇವೆ. ಬಿಜೆಪಿಗೆ ಬಡವರ ಬಗ್ಗೆ ಅಪಾರ ಕಾಳಜಿ ಇದೆ, ಅವರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ.
ದೇಶದಲ್ಲಿ 25 ವರ್ಷಗಳ ಹಿಂದೆ ವೈದ್ಯರ ಸಂಖ್ಯೆ ಬಹಳ ಕಡಿಮೆ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವೈದ್ಯರ ಸಂಖ್ಯೆ ಬಹಳಷ್ಟು ಹೆಚ್ಚಿದೆ ಎಂದರು.




