ಬೆಂಗಳೂರು: ಕೇಂದ್ರ ಗೃಹ ಸಚಿವ ಹಾಗೂ
ಬಿಜೆಪಿ ಅಗ್ರಗಣ್ಯ ನಾಯಕ ಅಮಿತ್ ಶಾ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಅಮಿತ್ ಶಾ ಹಾಗೂ ವಸತಿ ವಿ. ಸೋಮಣ್ಣ ವಿರುದ್ಧ ಕಾಂಗ್ರೆಸ್ ನಾಯಕರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಾಟೆಗಳು, ಘರ್ಷಣೆಗಳು, ಗಲಭೆಗಳು ಹೆಚ್ಚಾಗುತ್ತವೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ನಿಲುವಾಗಿದೆ ಕೋಮು ಗಲಭೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಮಿತ್ ಶಾ ಅವರು ವಿಜಯಪುರ ಜಿಲ್ಲೆಯಲ್ಲಿ ಏಪ್ರಿಲ್ 25ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಭಾಷಣ ಸಮುದಾಯಗಳ ನಡುವೆ ದ್ವೇಷ ಬಿತ್ತಿ, ಗಲಭೆ ಸೃಷ್ಟಿಸುವ ಸಂಚು ಒಳಗೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸುವಂತೆ ಆಗ್ರಹಿಸಿದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರ ನಿಯೋಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ. ಭಾರತೀಯ ದಂಡ ಸಂಹಿತೆ 1860ರ ಹಲವು ಸೆಕ್ಷನ್‍ಗಳನ್ನು ನಮೂದಿಸಲಾಗಿದೆ. ಜನರನ್ನು ಬೆದರಿಸಿ ದಾರಿ ತಪ್ಪಿಸುವ ಯತ್ನ ಮಾಡಿರುವುದಕ್ಕಾಗಿ ಸೆಕ್ಷನ್ 505ರ ಅಡಿ, ಎರಡು ವರ್ಗಗಳ ನಡುವೆ ದ್ವೇಷ ಬಿತ್ತಲು ಯತ್ನಿಸಿದ್ದಕ್ಕಾಗಿ ಸೆಕ್ಷನ್ 505 (2) ಅಡಿ, ದಂಗೆಗೆ ಪ್ರಚೋದನೆ ನೀಡಿರುವ ಆರೋಪದಡಿ ಸೆಕ್ಷನ್ 153ರಡಿ, ಎರಡು ಗುಂಪು ಅಥವಾ ಧರ್ಮಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ಮಾಡಿದ್ದಕ್ಕಾಗಿ ಸೆಕ್ಷನ್ 153 (ಎ) ಅಡಿ, ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಸೆಕ್ಷನ್ 171 ಜಿ ಅಡಿ, ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ಸೆಕ್ಷನ್ 12 ಬಿ, ಹಾಗೂ ಜನಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 123 ಅಡಿ ಭ್ರಷ್ಟ ಆಚರಣೆಗಳಿಗಾಗಿ ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕವಾಗಿ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದೆ.
ಧರ್ಮಗಳು, ಜಾತಿ ನಡುವೆ ದ್ವೇಷ ಬಿತ್ತುವ ಮೂಲಕ ಕೋಮ ಸೌಹಾರ್ದತೆ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಸಂಪೂರ್ಣ ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಪಿಎಫ್‍ಐ ವಿರುದ್ಧದ ನಿಷೇಧವನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದೆ ಎಂದು ಮಾತನಾಡಿದ್ದಾರೆ. ಇದು ಸಂಪೂರ್ಣ ಸುಳ್ಳಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನಮ್ಮ ರಾಜ್ಯ ಶಾಂತಿಯ ತೋಟವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆ ಆಗಲಿವೆ ಎಂದು ಕೇಂದ್ರ ಗೃಹ ಸಚಿವ ಭಾಷಣ ಮಾಡಿದ್ದಾರೆ. ಜನರ ಹೆದರಿಸುವಂತ ಕೆಲಸವನ್ನು ಇವರು ಮಾಡಿದ್ದಾರೆ. ಪ್ರಜಾಪ್ರಭುತ್ವ ಎಲ್ಲಿದೆ, ಜನರ ಮೇಲೆ ಪ್ರಭಾವ ಬೀರುವ ಅಮಿತ್ ಶಾ ಮೇಲೆ ಕ್ರಮ ಆಗಬೇಕು.
ಎರಡೂ ಮೂರು ಸಮಾವೇಶದಲ್ಲಿ ಇಂತಹ ಹೇಳಿಕೆಗಳನ್ನ ನೀಡಿದ್ದಾರೆ. ಇವರ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗಬೇಕು. ಚುನಾವಣಾ ಆಯೋಗ ಅಮಿತ್ ಶಾ ಅವರು ಚುನಾವಣಾ ಪ್ರಚಾರ ಮಾಡದಂತೆ ನಿಷೇಧ ಮಾಡಬೇಕು.
ಬೇರೆಯವರು ಮಾತನಾಡಿದರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಪೇ ಸಿಎಂ ಘೋಷಣೆಗೆ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಈಗ ಈ ದೂರಿನ ಮೇಲೆ ಕ್ರಮ ಆಗಬೇಕು. ಜನರ ಮೇಲೆ ಪ್ರಭಾವ ಬೀರುವ ಹೇಳಿಕೆಗಳನ್ನ ನೀಡಬಾರದು. ನಮ್ಮ ದೂರಿಗೆ ಕೂಡಲೇ ಕ್ರಮ ಆಗಬೇಕು ಎಂದು ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಪಿಎಫ್‌ಐ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮಿತ್ ಶಾ ಪಿಎಫ್ಐ ನಿಷೇಧ ರದ್ದು ಮಾಡುತ್ತಾರೆ ಎಂದು ಸುಳ್ಳು ಹೇಳಿದ್ದಾರೆ. ಪಿಎಫ್ಐ ನಿಷೇಧ ಮಾಡಲು ಸಿದ್ದರಾಮಯ್ಯ ಮತ್ತು ನಾನು ಒತ್ತಾಯಿಸಿದ್ದೆವು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿಲ್ಲ. ಕಾಂಗ್ರೆಸ್ ಪಿಎಫ್ಐ ನಿಷೇಧ ಮಾಡಲು ಒತ್ತಾಯ ಮಾಡಿದೆ. ಬಿಜೆಪಿ ಚುನಾವಣೆಯಲ್ಲಿ 40 ಸ್ಥಾನಗಳು ಬರಲಿದೆ. ಸೋಲುವುದರಿಂದ ತಪ್ಪಿಸಿಕೊಳ್ಳಲು ಅಮಿತ್ ಶಾ ಇಂತಹ ಸುಳ್ಳು ಆರೋಪಗಳನ್ನ ಮಾಡಿದ್ದಾರೆ. ಇವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಾಗಬೇಕು. ಅಮಿಶ್ ಶಾರನ್ನ ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.




