ಸುಳ್ಳುಗಳ ಅಧ್ಯಯನಕ್ಕೊಂದು ವಿಶ್ವವಿದ್ಯಾಲಯ ಬೇಕು: ಪುರುಷೋತ್ತಮ ಬಿಳಿಮಲೆ

3 years ago

ಈಚಿನ ದಿನಗಳಲ್ಲಿ ಯಾವುದೇ ಸಂಕೋಚವಿಲ್ಲದೆ ಸುಳ್ಳುಗಳನ್ನು ಉತ್ಪಾದಿಸಿ ಜನರ ನಡುವೆ ಹರಿಯಬಿಡಲಾಗುತ್ತಿದೆ. ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಅವರಿಗದು ಬೇಕಾಗುತ್ತದೆ. ಸುಳ್ಳು ಹೊರಬಂದ ತಕ್ಷಣ ಅದನ್ನು ಮಾರಾಟ ಮಾಡುವವರೂ ಹುಟ್ಟಿಕೊಳ್ಳುತ್ತಾರೆ. ಸುಳ್ಳುಗಳನ್ನು ಹಂಚಲು ಹಣ ಕೊಟ್ಟು ಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಸುಳ್ಳುಗಳ ಉದ್ದೇಶ ಜನರನ್ನು ಮೋಸ ಮಾಡುವುದು. ನಕಾರಾತ್ಮಕ ವಿಧಾನಗಳಿಂದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸುವುದು. ಬಹುಶ: ಇದು ಭಾರತದಲ್ಲಿ ಹಿಂದಿನಿಂದಲೂ ಇತ್ತೆಂದು ತೋರುತ್ತದೆ. ಅದರಿಂದಲೇ ನಾವು ಸತ್ಯವನ್ನೇ ಉಸಿರಾಗಿಸಿಕೊಂಡ ಹರಿಶ್ಚಂದ್ರನ ಕತೆಯನ್ನು ಮತ್ತೆ ಮತ್ತೆ ಜನರಿಗೆ ಹೇಳಬೇಕಾಯಿತು.

ʼಸತ್ಯಂ ವದʼ ( ಸತ್ಯವನ್ನು ಹೇಳು) ಎಂದು ತೈತ್ತೀರಿಯಾ ಉಪನಿಷತ್ ಘೋಷಿಸಬೇಕಾಯಿತು. ʼಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮʼ ಎಂದು ಹೇಳುವ ಪುಣ್ಯಕೋಟಿಯ ಕತೆಯನ್ನು ಕಟ್ಟಿಕೊಳ್ಳಬೇಕಾಯಿತು. ತನ್ನ ಸುತ್ತ ಸುಳ್ಳು ಹೇಳುವವರು ಇದ್ದುದು ಗಾಂಧೀಜಿಯ ಗಮನಕ್ಕೆ ಬಂದುದರಿಂದಲೇ ಅವರು ಸತ್ಯವನ್ನೇ ಸ್ಥಾಯಿಯನ್ನಾಗಿ ಮಾಡಿಕೊಂಡರು. ಗಲಾಟೆ ಮಾಡುವ ಮಕ್ಕಳಿದ್ದಾಗ ತಾನೇ ಮೇಸ್ಟ್ರು ʼ ಗಲಾಟೆ ಮಾಡ್ಬೇಡಿʼ ಎಂದು ಹೇಳುವುದು!

ನಮ್ಮ ನ್ಯಾಯಾಲಯಗಳಲ್ಲಿ ಅಪರಾಧಿಗಳು ಭಗವದ್ಗೀತೆಯನ್ನು ಮುಟ್ಟಿ ʼ ಸತ್ಯವನ್ನೇ ಹೇಳುತ್ತೇನೆʼ ಎಂದು ಪ್ರತಿಜ್ಞೆ ಮಾಡಿ ಮುಂದೆ ವಕೀಲರು ಹೇಳಿಕೊಟ್ಟದ್ದನ್ನು ಉಸುರುತ್ತಾರೆ. ಸರಕಾರಗಳು ಕೊಡುವ ಅಂಕಿ ಅಂಶಗಳು ಸತ್ಯವೇ ಆಗಿರಬೇಕಾಗಿಲ್ಲ. ರಶಿಯಾ ಉಕ್ರೇನ್ ಬಗ್ಗೆಯೂ, ಉಕ್ರೇನ್ ರಶಿಯಾದ ಬಗ್ಗೆಯೂ ನೀಡುವ ಮಾಹಿತಿಗಳಲ್ಲಿ ನಿಜ ಎಷ್ಟು, ಸುಳ್ಳು ಎಷ್ಟು ಎಂದು ಯಾರಿಗೆ ಗೊತ್ತು? ಪ್ರಭುತ್ವ ನಿಯಂತ್ರಿತ ಮೀಡಿಯಾಗಳು ಹೇಳುವುದು ಅರ್ಧ,ಮುಕ್ಕಾಲು , ಕಾಲು ಅಥವಾ ಸೊನ್ನೆ ಸತ್ಯಗಳನ್ನು.

ಜನರು ತಮ್ಮ ಆರೋಗ್ಯದ ಬಗ್ಗೆ ಸತ್ಯ ಹೇಳುವುದು ಕಡಿಮೆ. ಜಾಹೀರಾತುಗಳು ಹೇಳುವ ಸುಳ್ಳುಗಳನ್ನು ನಂಬದವರೇ ಇಲ್ಲ. ಸುಳ್ಳು ಸಿದ್ಧಾಂತಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಶ್ರೇಣೀಕೃತ ಸಮಾಜದಲ್ಲಿ ತಮಗಿಂತ ಮೇಲಿನವರು ಹೇಳುವುದೆಲ್ಲವೂ ಸತ್ಯ ಎಂದೂ, ಕೆಳಗಿನವರು ಹೇಳುವುದೆಲ್ಲವೂ ಸುಳ್ಳು ಎಂದು ಜನರು ಭಾವಿಸುತ್ತಾರೆ. ಒಮ್ಮೆ ಸುಳ್ಳು ಹೇಳಿದವರು ಮತ್ತೆ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಕಡಿಮೆ. ಒಂದು ಸುಳ್ಳನ್ನು ಮರೆಮಾಚಲು, ಇನ್ನೊಂದು ಸುಳ್ಳು ಹೇಳುವುದು, ಅದನ್ನು ತಪ್ಪಿಸಲು ಮತ್ತೊಂದು ಸುಳ್ಳು ಹೇಳುವುದು ನಡೆದೇ ಇದೆ.ನಾವು ಎಂದೂ ಕಂಡಿರದ, ಬದುಕಿರದ ಇತಿಹಾಸದ ಬಗ್ಗೆ ಸುಳ್ಳು ಹೇಳುವುದು ಬಹಳ ಸುಲಭ.

ಇಂತ ಸುಳ್ಳುಗಳು ವ್ಯಕ್ತಿಗಳ ಮೇಲೆ ಮತ್ತು ರಾಷ್ಟ್ರಗಳ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಅಭ್ಯಸಿಸಲು ವಿದೇಶಗಳಲ್ಲಿ ಕೆಲಸ ಸುರು ಆಗಿದೆ. ನಮ್ಮ ದೇಶದಲ್ಲಿ ಇದಕ್ಕೊಂದು ವಿಶ್ವವಿದ್ಯಾಲಯವನ್ನೇ ತೆರೆಯುವುದು ಸೂಕ್ತ. ಇದಕ್ಕೆ ಕುಲಪತಿಗಳಾಗಲು ಅರ್ಹತೆ ಇರುವವರು ನಮ್ಮಲ್ಲಿ ಅನೇಕರಿದ್ದಾರೆ.

ಸದಾ ಸುಳ್ಳು ಹೇಳುವವನು ಒಂದು ಬಗೆಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾನೆ ಎಂದು ನೊಟ್ರೆ ಡೇಮ್ ವಿಶ್ವವಿದ್ಯಾನಿಲಯದ (University of Notre Dame) ಸಂಶೋಧಕರು ತಿಳಿಸಿದ್ದಾರೆ. ಯುವಕರು ಹೆಚ್ಚು ಸುಳ್ಳು ಹೇಳುತ್ತಾರೆ ಮತ್ತು ಸುಳ್ಳುಗಳನ್ನು ನಂಬುತ್ತಾರೆ ಎಂದೂ ಅವರು ಹೇಳಿದ್ದಾರೆ. ಅವರ ಪ್ರಕಾರ ಸುಳ್ಳು ಒಂದು ತಮಾಷೆ ಅಲ್ಲ, ಬದಲು ಅಪಾಯಕಾರಿ.

ಬಹುಶ: ನಾವೀಗ ʼಸುಳ್ಳು ಹೇಳುವುದು ದೇಶಕ್ಕೆ ಹಾನಿಕರʼ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಬರೆಸಿಡಬೇಕಾದ ಅಗತ್ಯ ಇದೆ.

-ಪುರುಷೋತ್ತಮ ಬಿಳಿಮಲೆ, ವಿಮರ್ಶಕರು

Leave a Reply