ಬೆಂಗಳೂರು: ಕಸಾಪ ಅದ್ಯಕ್ಷ ಮಹೇಶ್ ಜೋಶಿ ಅವರಿಗೆ ಅವರ ಗೌರವ ಕಾರ್ಯದರ್ಶಿ ಬರೆದಿರುವುದು ಎನ್ನಲಾದ ಹಳೆಯ ಪತ್ರ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಪತ್ರದ ಪೂರ್ಣ ಪಾಠ ಇಲ್ಲಿದೆ:
ಇವರಿಗೆ,
ಮಾನ್ಯ ನಾಡೋಜ ಡಾ.ಮಹೇಶ ಜೋಶಿ.
ಅಧ್ಯಕ್ಷರು.ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ, ಬೆಂಗಳೂರು,೫೬೦೦೧೮
************
ಗೌರವಾನ್ವಿತ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರಿಗೆ ಕೃತಜ್ಞತಾ ಪೂರ್ವಕವಾದ ನಮಸ್ಕಾರಗಳು.
ಮಾನ್ಯರೇ, ತಾವು ನನ್ನ ಮೇಲೆ ವಿಶ್ವಾಸವನ್ನಿರಿಸಿ ೨೦೨೨ ರ ಆಗಸ್ಟ್ ೧೬ ರಂದು ಮಂಗಳವಾರ ಗೌರವ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಉನ್ನತ ಸ್ಥಾನವನ್ನು ನೀಡಿದಿರಿ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಈ ಮೂಲಕ ವಿನಮ್ರಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ತಾವು ನೇಮಕಾತಿ ಸಮಯದಲ್ಲಿ ನೀಡಿದ ಸಲಹೆ, ಸೂಚನೆಗಳನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪಾಲಿಸಿಕೊಂಡು ದಿನಾಂಕ ೨೭-೧೨-೨೦೨೨ ರವರೆಗೆ ಬಹಳ ಪ್ರೀತಿಯಿಂದ, ತಾಳ್ಮೆಯಿಂದ, ಅತ್ಯಂತ ವಿನಯದಿಂದ, ಸಹನೆಯಿಂದ, ತುಂಬಾ ಭಯ ಭಕ್ತಿ ಗೌರವದಿಂದ ನಿರ್ವಹಿಸಿಕೊಂಡು ಬಂದಿರುತ್ತೇನೆ.
೬೯ ವರ್ಷ ವಯೋಮಾನದ ನಿವೃತ್ತ ಕನ್ನಡ ಪ್ರಾಧ್ಯಾಪಕನಾದ ನಾನು, ನನ್ನ ವೃತ್ತಿ ಜೀವನದ ೪೦ ವರ್ಷಗಳಲ್ಲಿ ಎಲ್ಲಿಯೂ ಒಂದು ಸಣ್ಣ ಕಪ್ಪು ಚುಕ್ಕೆ ಬಾರದಂತೆ ನನ್ನ ಆತ್ಮಸಾಕ್ಷಿಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಿ ಶಿಕ್ಷಣ ಇಲಾಖೆಗೆ ಗೌರವ ತಂದುಕೊಟ್ಟ ಹೆಮ್ಮೆ ನನ್ನದು.
ಈ ಮಧ್ಯೆ ತಾವು ನನ್ನನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡ ಮೇಲೆ ನವ ಯುವ ವಿದ್ಯಾರ್ಥಿಯಂತೆ, ಹುಮ್ಮಸ್ಸಿನಿಂದ, ಹುರುಪಿನಿಂದ ಬೆಳಗ್ಗೆ ೫-೩೦ ಕ್ಕೆ ಎದ್ದು ನಿತ್ಯ ಕರ್ಮ, ಸ್ನಾನ ಪೂಜಾದಿಗಳನ್ನು ಮುಗಿಸಿ ಆತುರಾತುರವಾಗಿ ಉಪಾಹಾರ ಸೇವಿಸಿ ೭-೩೦ ಕ್ಕೆ ಬಸ್ ನಿಲ್ದಾಣಕ್ಕೆ ಬಂದು ನೂಕು ನುಗ್ಗಾಟದಲ್ಲಿ ಬಸ್ ಏರಿ ಸೀಟ್ ಸಿಗದಿದ್ದರೂ ನಿಂತುಕೊಂಡೇ ಪ್ರಯಾಣ ಮಾಡಿ ಅಪಾರ ಪ್ರಮಾಣದ ಟ್ರಾಫಿಕ್ ಜಾಮ್ ನಿಂದ ಪಾರಾಗಿ ಬೆಂಗಳೂರಿನ ಮಹಾರಾಣಿ ಕಾಲೇಜು ನಿಲ್ದಾಣಕ್ಕೆ ಬಂದಿಳಿದು ಮತ್ತೆ ಅಲ್ಲಿಂದ ಬಿ.ಎಂ.ಟಿ.ಸಿ ಬಸ್ ಮೂಲಕ ಬೆಳಗ್ಗೆ ೧೦-೩೦/೧೦-೪೫ ರೊಳಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಜರಾಗುತ್ತಿದ್ದೆ.
ತಮ್ಮ ಸಲಹೆ ಸೂಚನೆಗಳನ್ನು ಅನುಸರಿಸಿ ಕರ್ತವ್ಯ ನಿರ್ವಹಿಸಿ ಮತ್ತೆ ಸಂಜೆ ೬-೩೦ ಅಥವಾ ೭-೦೦ ಗಂಟೆ ವೇಳೆಗೆ ತಮ್ಮ ಅನುಮತಿಯನ್ನು ಪಡೆದು ಕಚೇರಿ ಬಿಟ್ಟು ಎರಡು ಬಸ್ ಮೂಲಕ
ರಾತ್ರಿ ೯-೦೦ ಗಂಟೆಗೆ ಮನೆ ತಲುಪುವುದು ನಿತ್ಯದ ದಿನಚರಿ ಆಗಿತ್ತು.
ಕೆಲವು ಸಲ ಬೆಂಗಳೂರಿನಲ್ಲಿಯೇ ಉಳಿದು ಕೆಲಸ ನಿರ್ವಹಿಸಿರುತ್ತೇನೆ. ಈ ಮಧ್ಯದಲ್ಲಿ ನನಗೆ
ಆದ ಅನುಭವ ಅಷ್ಟಿಷ್ಟಲ್ಲ. ನಿತ್ಯದ ದೈಹಿಕ ಆಯಾಸಕ್ಕಿಂತ ಮಾನಸಿಕ ಯಾತನೆ ಹೇಳಿಕೊಳ್ಳಲಾಗದ ಅನುಭವ. ತಮ್ಮ ದಿವ್ಯ ಅನುಗ್ರಹದಿಂದ ದೊರೆತ ಒಬ್ಬ ನಿಷ್ಠಾವಂತ ಕಾರ್ಯದರ್ಶಿಯಾಗಿ ಕೆಲಸ ಮಾಡಬೇಕಾದ ನಾನು ಅವ್ಯಕ್ತವಾದ ಭಯದಲ್ಲಿ ಹಾಗೂ ಉಸಿರು ಕಟ್ಟುವ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಯಿತು.
ಮಾನ್ಯ ಅಧ್ಯಕ್ಷರು ಕರೆದಾಗ , ಪ್ರಶ್ನೆ ಕೇಳಿದಾಗ,ಕೆಲಸ ನಿರ್ವಹಿಸುವಾಗ ನನ್ನಲ್ಲಿ ಭಯ ಆತಂಕಪಡುವ ಸ್ಥಿತಿ ಸೃಷ್ಟಿಯಾಗುತ್ತಿತ್ತು.ಅಧ್ಯಕ್ಷರನ್ನು ಕಾಣುವುದಕ್ಕೂ ಏನೋ ಒಂದು ರೀತಿಯ ಭಯ, ಕಂಡು ನಮಸ್ಕಾರ ಹೇಳಿದಾಗಲೂ ಆ ನನ್ನ ನಮಸ್ಕಾರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗದಿದ್ದಾಗ ಮತ್ತಷ್ಟು ಭಯ.
ಹಾವೇರಿ ಸಮ್ಮೇಳನ ಹತ್ತಿರ ಹತ್ತಿರ ಬರುತ್ತಿದ್ದಂತೆ ಕಚೇರಿಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಮತ್ತಷ್ಟು ಭಯ ಆತಂಕಪಡುವ ಸ್ಥಿತಿ ಉಂಟಾಗುತ್ತಿತ್ತು. ಈ ಸಂದರ್ಭದಲ್ಲಿ ನಾನು ಕೇವಲ ಒಬ್ಬರು ಅಧ್ಯಕ್ಷರಲ್ಲದೆ ಬೇರೆ ಬೇರೆ ಅಧ್ಯಕ್ಷರ ಮಾತುಗಳನ್ನು ಕೇಳಬೇಕಾಗಿತ್ತು. ನಾನು ಬೆಳೆದು ಬಂದ ವಾತಾವರಣಕ್ಕೂ ಇಲ್ಲಿಯ ವಾತಾವರಣಕ್ಕೂ ತುಂಬಾ ವ್ಯತ್ಯಾಸವಿತ್ತು. ಈ ವಾತಾವರಣದಲ್ಲಿ ನನ್ನಂತಹ ಸೌಮ್ಯ ಸ್ವಭಾವ, ವಿಧೇಯತೆಗಳಿಗೆ ಮಾನ್ಯತೆ ಕಂಡು ಬರಲಿಲ್ಲ.
ಒಳಗೊಂದು ಹೊರಗೊಂದು ರೀತಿಯಲ್ಲಿ ಮಾತನಾಡುವ ಕಲೆ ನನಗೆ ರೂಢಿಯಲ್ಲಿಲ್ಲ.ಅಶ್ಲೀಲ, ಅವಾಚ್ಯವಾದ ನುಡಿಗಳು ವಾಚಾಮಗೋಚರವಾಗಿ ನಲಿದಾಡುವ ಸ್ಥಿತಿ ಭುವನೇಶ್ವರಿಯ ಆಲಯವಾದ ಪರಿಷತ್ತಿನ ಪವಿತ್ರ ಪಡಸಾಲೆಯಲ್ಲಿ ಕಂಡು, ಕೇಳಿದ ನನ್ನ ಮನಸ್ಸು ಆತಂಕಗೊಂಡಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಪೂರ್ವದಲ್ಲಿ ಅಧ್ಯಕ್ಷ ಆಕಾಂಕ್ಷಿಯಾಗಿ ಸ್ಪರ್ಧಿಸಿದ್ದ ನಾಡೋಜ ಡಾ.ಮಹೇಶ್ ಜೋಶಿ ಅವರು ನನಗೆ ಒಬ್ಬ ಮಹಾನ್ ದಾರ್ಶನಿಕರಾಗಿ, ನಿಷ್ಠಾವಂತ ಕನ್ನಡ ಸಾಹಿತ್ಯ ಸೇವಕರಾಗಿ, ಒಬ್ಬ ತತ್ವಜ್ಞಾನಿಯಾಗಿ, ಮುತ್ಸದ್ದಿಯಾಗಿ,ಮೇಧಾವಿಯಾಗಿ, ಸಾಮಾನ್ಯರಲ್ಲಿ ಒಬ್ಬ ಜನಸಾಮಾನ್ಯರಾಗಿ, ಕನ್ನಡ ಕುಲ ತಿಲಕರಾಗಿ, ಅಜಾತ ಶತ್ರುವಾಗಿ, ಸ್ನೇಹ ಜೀವಿಯಾಗಿ ಹಾಗೂ ಆದರ್ಶ ವ್ಯಕ್ತಿಯಾಗಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೇರು ಶಿಖರವಾಗಿ ಕಂಡಿದ್ದರು.
ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿ ವಿಜೇತರಾಗಿ ಅಧ್ಯಕ್ಷರಾದ ಮೇಲೆ ಎಲ್ಲವೂ ತದ್ವಿರುದ್ಧ. ತತ್ವ ಸಿದ್ಧಾಂತಗಳಿಂದ ಬಹಳ ಬಹಳ ದೂರ. ಮತ ನೀಡಿದ ಮಹನೀಯ ಮತದಾರರು, ಆಶೀರ್ವದಿಸಿ ಹಾರೈಸಿದ ಗುರು ಹಿರಿಯರು ಇವರೆಲ್ಲರಿಂದ ದೂರ. ಶಿಶುನಾಳ ಶರೀಫರ ಗುರು ಗೋವಿಂದ ಭಟ್ಟರ ವಂಶದ ಕರುಳ ಬಳ್ಳಿ ಎಲ್ಲೆಡೆ ಹಬ್ಬಿ ಆಶ್ರಯ ನೀಡಬೇಕು. ಆನಂದ ತರಬೇಕು. ಆತ್ಮತೃಪ್ತಿಗೆ ಒಳಗಾಗಬೇಕು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಾವಧಿ ಕೇವಲ ಐದು ವರ್ಷ ಮಾತ್ರ. ಮೂರು ವರ್ಷದ ಅವಧಿಯನ್ನು ಐದು ವರ್ಷಕ್ಕೆ ಏರಿಸಿ ತಿದ್ದುಪಡಿ ತಂದು ಮುಂದಿನವರಿಗೂ ಅಧ್ಯಕ್ಷಗಿರಿ ಮಾಡಲು ಅವಕಾಶ ಮಾಡಿಕೊಟ್ಟ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ.ಮನು ಬಳಿಗಾರ್ ರವರು ನೀಡಿದ ಹೆಚ್ಚುವರಿ ಎರಡು ವರ್ಷಗಳ ಅಧಿಕಾರದ ಬಳುವಳಿ ಎಂದರೆ ತಪ್ಪಾಗಲಾರದು.
ಮಾನ್ಯ ಅಧ್ಯಕ್ಷರೇ, ಈ ಮಾತುಗಳನ್ನು ಬಹಳ ಪ್ರೀತಿಯಿಂದ ತಮ್ಮ ಶ್ರೇಯಸ್ಸನ್ನು ಬಯಸಿ ಹಂಚಿಕೊಂಡಿದ್ದೇನೆ. ಸ್ವಲ್ಪ ನೋವಾದರೂ ಪರವಾಗಿಲ್ಲ. ಕಠಿಣವಾದ ಈ ಮಾತುಗಳು ತಮ್ಮ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಪೂರಕವಾದ ಬೆಳಕಿನ ಕಿರಣಗಳೆಂದು ತಾವು ಭಾವಿಸುತ್ತೀರೆಂದು ನಂಬಿರುತ್ತೇನೆ.
ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸುವ ಹೊಗಳು ಭಟ್ಟರ ಹಿನ್ನೆಲೆಯಿಂದ ನಾನು ಬಂದವನಲ್ಲ. ಕಂಡದ್ದನ್ನು ಕಂಡು ಹೇಳಲೇಬೇಕಾದ ಅನಿವಾರ್ಯತೆಯಿಂದ ಹೇಳುವ ನಿಮ್ಮ ಒಬ್ಬ ಹಿತೈಷಿ ಎಂದು ತಾವು ತಿಳಿಯದಿದ್ದರೂಪರವಾಗಿಲ್ಲ. ನಿಮ್ಮನ್ನು ನೀವು ಅರಿತು ಕೊಂಡರೆ ಸಾಕು.
ದಯಮಾಡಿ ಶರಣ ಶ್ರೇಷ್ಠ ಬಸವಣ್ಣನವರ ಸಪ್ತ ಸೂತ್ರಗಳನ್ನು ಒಳಗೊಂಡಿರುವ ಜನಪ್ರಿಯ ವಚನದ ಸಾರಾಂಶವನ್ನು ಒಮ್ಮೆ ನೆನಪಿಸಿಕೊಳ್ಳಿ. ೧)ಕಳಬೇಡ, ೨)ಕೊಲಬೇಡ, ೩)ಹುಸಿಯ ನುಡಿಯಲು ಬೇಡ ೪)ಮುನಿಯಬೇಡ ೫)ಅನ್ಯರಿಗೆ ಅಸಹ್ಯ ಪಡಬೇಡ ೬)ತನ್ನ ಬಣ್ಣಿಸಬೇಡ ೭) ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ.
ಮಾನ್ಯರೇ, ದಯಮಾಡಿ ತಮ್ಮ ಅಧಿಕಾರದ ಬಿರುನುಡಿಗಳು ಅಮಾಯಕರನ್ನು ನಿರ್ಗತಿಕರನ್ನು ಕೊಂದ ಹಾಗೆಯೇ! ದಯಮಾಡಿ ಸುಳ್ಳಿಗೆ ಆಸ್ಪದ ಕೊಡಬೇಡಿ. ದೂರ್ವಾಸ ಮುನಿಯಂತೆ ಮುನಿಯಬೇಡಿ. ಯಾವಾಗಲೂ ತಮ್ಮನ್ನು ತಾವೇ ಹೊಗಳಿಕೊಳ್ಳಬೇಡಿ. ಬೇರೆಯವರ ಎದುರಿಗೆ ಇತರರನ್ನು ಹೀಯಾಳಿಸಿ ಮಾತನಾಡಬೇಡಿ. ತಮ್ಮನ್ನು ಕಾಣಲು ಪ್ರೀತಿಯಿಂದ ಬಹಳ ದೂರದಿಂದ ಅಭಿಮಾನಿಗಳು ಬಂದಾಗ ಒಂದೆರಡು ಪ್ರೀತಿಯ ಮಾತಾಡಿ ಎಂಬುದು ನನ್ನ ಕಳಕಳಿಯ ಮನವಿ ಎಂದು ಭಾವಿಸಿ. ನಿಮ್ಮ ಸುತ್ತಲೂ ಹೊಗಳು ಭಟ್ಟರನ್ನಿರಿಸಿಕೊಂಡು ಹೊಗೆಯಾಡುವ ಸನ್ನಿವೇಶವನ್ನು ತರಿಸಿಕೊಳ್ಳಬೇಡಿ.
ಸಲಹೆ ಸೂಚನೆಗಳನ್ನು ನೀಡುವವರು ಚಿಕ್ಕವರೇ ಆಗಿರಲಿ, ಅವರ ಮಾತುಗಳನ್ನು ಆಲಿಸಿ ಪ್ರಶಾಂತವಾದ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡಿ ಕೊಳ್ಳಿ. ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧತೆಯ ಕಡೆಗೆ ಹೆಚ್ಚು ಗಮನ ಕೊಡಿ.
ಎದುರಿಗೆ ಹೊಗಳುವ, ಹಿಂದೆ ತೆಗಳುವ ಮಂದಿ ಬಹಳ ಇದ್ದಾರೆ. ಇದೇ ರೀತಿಯ ಹೊಗಳು ಭಟ್ಟರು ನಿಮ್ಮ ಮುಂದೆ ಪ್ರದರ್ಶನ ಮಾಡುವ ಸನ್ನಿವೇಶ ಸೃಷ್ಟಿಯಾಗದಂತೆ ನೋಡಿಕೊಳ್ಳಿ. ಸದಾ ನಗು ನಗುತ್ತಾ ಹಸನ್ಮುಖಿಯಾಗಿ, ಮಂದಹಾಸದ ಹೊನಲು ಹರಿಯುತ್ತಿರಲಿ. ಕೋಪವೆಂಬುದು ಪಾಪದ ಕೂಪ ಎನ್ನುವುದನ್ನು ಮರೆಯಬೇಡಿ. ಸದಾ ಆಶಾವಾದಿಯಾಗಿರಿ.ಧನಾತ್ಮಕವಾಗಿ ಚಿಂತಿಸಿ. ಪ್ರತ್ಯಕ್ಷವಾಗಿ ಕಂಡರೂ ಪರೀಕ್ಷಿಸಿ ನೋಡಿ. ಹಿತ್ತಾಳೆ ಕಿವಿಯಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರವಿರಲಿ. ಅಂತ:ಕರುಣೆ, ಪ್ರೀತಿಗೆ ಜಾಗವಿರಲಿ. ತನ್ನಂತೆ ಪರರೆಂಬ ಭಾವವಿರಲಿ. ಅಪನಂಬಿಕೆ, ಅನುಮಾನ ಬದಿಗಿರಿಸಿ.
ಸಾಮರಸ್ಯದಿಂದ ಸಂತೋಷ ಶಾಂತಿ ನೆಮ್ಮದಿ ತೃಪ್ತಿ ನೀಡುತ್ತದೆ. ಸಂಘರ್ಷದಿಂದ ನೋವು, ಅವಮಾನ, ಮಾನಸಿಕ ನೆಮ್ಮದಿ ಕೆಡುವ ಜೊತೆಗೆ ಆರೋಗ್ಯ ಕೆಡುತ್ತದೆ. ತಾವು ಇತರರಿಗೆ ಸ್ಫೂರ್ತಿಯ ಚಿಲುಮೆಯಾಗಿ. ಸ್ವಾರ್ಥಿಯಾಗದೆ ನಿಸ್ವಾರ್ಥ ಸೇವೆಯಿಂದ ಭುವನೇಶ್ವರಿಯ ಕಾಣಿ.
ನಿಂದನೆ, ಟೀಕೆ, ಅವಮಾನಗಳನ್ನು ಸಹಿಸಿಕೊಂಡು, ತಾಳ್ಮೆಯಿಂದ, ಸಹನೆಯಿಂದ, ಔದಾರ್ಯದಿಂದ, ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಿರಿ. ಸಣ್ಣಪುಟ್ಟ ತಪ್ಪುಗಳನ್ನು ದೊಡ್ಡದು ಮಾಡದೆ ಕ್ಷಮಿಸಿ ದೊಡ್ಡವರಾಗಿ. ಅನಗತ್ಯ ಟೀಕೆ ಟಿಪ್ಪಣಿಗಳಿಗೆ ಗಮನ ಕೊಡಬೇಡಿ. ಬೇರೆಯವರು ಮಾತನಾಡುವುದಕ್ಕೂ ಅವಕಾಶ ಮಾಡಿಕೊಡಿ. ಇತರರ ಅಭಿಪ್ರಾಯಗಳನ್ನು ಮುಕ್ತವಾಗಿ ಆಲಿಸಿ. ಏಕಮುಖವಾದ ಅಭಿಪ್ರಾಯ ಸೂಕ್ತ ಪರಿಹಾರ ಒದಗಿಸುವ ಬದಲು ಸಂಘರ್ಷಕ್ಕೆ ಕಾರಣವಾಗುತ್ತದೆ. ಪಾರದರ್ಶಕತೆಯನ್ನು ಎಲ್ಲರಿಂದ ಬಯಸುವ ನಾವೂ ಸಹ ಪಾರದರ್ಶಕವಾಗಿ ಇರಬೇಕಲ್ಲವೇ?
ಎಲ್ಲವೂ ನನ್ನದು ಎನ್ನದೆ ಎಲ್ಲರೂ ನನ್ನವರೆನ್ನುವ ಸಹೃದಯಿ ಭಾವವನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಸೇವೆಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕಲ್ಲವೇ? ಎಲ್ಲವೂ ನನ್ನಿಂದಲೇ ಆಯಿತು ಎಂಬ ಭಾವನೆಯ ಮೂಸೆಯಿಂದ ಹೊರಗೆ ಬಂದು, ನನ್ನೊಳಗೆ ಎಲ್ಲರೂ ಅಲ್ಲ ಎನ್ನದೆ, ಎಲ್ಲರೊಳಗೆ ನಾನೂ ಒಬ್ಬ ಎಂಬುದನ್ನು ಮೈಗೂಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂಬುದನ್ನು ನಾನು ಅರ್ಥೈಸಿಕೊಂಡಿದ್ದೇನೆ.
“ಮಾಡಿದೆನೆಂಬುದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ. ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ. ಮಾಡಿದೆನೆಂಬುದು ಮನದಲಿ ಇಲ್ಲದಿದ್ದರೆ ಬೇಡಿತ್ತನೀವ ನಮ್ಮ ಕೂಡಲಸಂಗಮದೇವ ” ಎಂಬುದನ್ನು ಮೈಗೂಡಿಸಿಕೊಂಡಾಗ ಚೆಂದದ ಸಮಾಜ ಕಲ್ಯಾಣ ಸಾಧ್ಯವಾಗುತ್ತದೆ ಎಂದು ಎಲ್ಲರೂ ತಿಳಿಯಬೇಕು.
೧೦೮ ವರ್ಷಗಳ ಇತಿಹಾಸವಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿರಂತರವಾಗಿ ಹಗಲೂ ರಾತ್ರಿ ಕನಿಷ್ಠ ಸಂಬಳದಲ್ಲಿ ಸೇವೆ ಸಲ್ಲಿಸಿಕೊಂಡು ಬದುಕು ಸಾಗಿಸಿಕೊಂಡು ಬರುತ್ತಿರುವ ಸಿಬ್ಬಂದಿ ವರ್ಗದವರು ಖಾಯಂ ಆಗದಿದ್ದರೂ ಪರಿಶ್ರಮದಿಂದ ಪ್ರೀತಿಯಿಂದ ಪರಿಷತ್ತಿನ ಘನತೆ, ಗೌರವಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಪರಿಷತ್ತಿನ ಬೆನ್ನೆಲುಬಾಗಿ ದುಡಿಯುವ ಆ ಶ್ರಮಜೀವಿಗಳ ನೆಮ್ಮದಿಗೆ ಪೂರಕವಾಗಿ ಮಾನ್ಯ ಅಧ್ಯಕ್ಷರು ತಮ್ಮ ಅಧಿಕಾರದ ಅವಧಿಯಲ್ಲಿ ಈ ನೌಕರರನ್ನು ಖಾಯಂಗೊಳಿಸುವ ಕ್ರಿಯೆಗೆ ಮುಂದಾದರೆ ತಮ್ಮ ಹೆಸರು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆಯುತ್ತದೆ.
ತಾವು ಯಾವುದೇ ರೀತಿಯಲ್ಲಿ ಈ ಸಿಬ್ಬಂದಿ ವರ್ಗದವರಿಗೆ ನೋವು ಕೊಡಬೇಡಿ. ಮನೆಗೆ ಕಳಿಸುವ ಮಾತಾಡಿ ಸಿಬ್ಬಂದಿ ವರ್ಗದವರ ಬಾಳಿಗೆ ಕತ್ತಲೆಯಾಗಬೇಡಿ. ಪರಿಷತ್ತಿನ ಬೆಳವಣಿಗೆಗೆ ಸಿಬ್ಬಂದಿ ವರ್ಗದವರ ಪರಿಶ್ರಮ ಕಟ್ಟಡದ ತಳಪಾಯ ಎಂಬುದನ್ನು ಮರೆಯಬಾರದು. ಇಡೀ ಕನ್ನಡ ಸಾಹಿತ್ಯ ಪರಿಷತ್ತಿನ ಕಾವಲುಗಾರರು ಈ ಸಿಬ್ಬಂದಿ ವರ್ಗದವರು ಎಂಬುದರಲ್ಲಿ ಎರಡು ಮಾತಿಲ್ಲ.
ಕೊನೆಯದಾಗಿ ಪ್ರಾರ್ಥನೆ ಮಾಡುವುದೇನೆಂದರೆ ತಾವು ಅನ್ಯಥಾ ಭಾವಿಸಬೇಡಿ, ನಿಮ್ಮಂತೆ ನಾನು ಹೆಚ್ಚು ಅರಿತವನಲ್ಲ. ಮಕ್ಕಳಿಗೆ ದೇಶ ಭಕ್ತಿಯ ಪಾಠವನ್ನು ಹೇಳಿಕೊಟ್ಟವನು. ಮಕ್ಕಳೆದೆಯಲ್ಲಿ ಪ್ರಾಮಾಣಿಕತೆಯ ಬೀಜಗಳನ್ನು ಬಿತ್ತಿದವನು. ನಡೆ- ನುಡಿ ಒಂದಾಗಿ ಬಾಳಿದವನು. ಮಾನವೀಯತೆಯನ್ನು ಮೈಗೂಡಿಸಿಕೊಂಡು ಬಾಳುತ್ತಿರುವವನು ನಾನು. ಎಲ್ಲವೂ ನನ್ನದು ಎನ್ನದೆ ಎಲ್ಲರೂ ನನ್ನವರೆಂದು ಬಾಳುತ್ತಿರುವ ನಿವೃತ್ತ ಕನ್ನಡ ಪ್ರಾಧ್ಯಾಪಕ ನಾನು.
ಹಾವೇರಿಯ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಎಂಟತ್ತು ದಿನಗಳಿರುವಾಗ ಸಮ್ಮೇಳನಕ್ಕೂ ಬಾರದೆ ದೂರ ಉಳಿಯಲು ನನ್ನ ಮನಸ್ಸಿನ ಮೇಲೆ ಉಂಟಾದ ನೋವಿನ ಪರಿಣಾಮವಾದರೂ ಏನಿರಬಹುದು? ಹೀಗಾಗಲು ಕಾರಣವೇನು? ಎಂಬುದನ್ನು ಅಧ್ಯಕ್ಷರಾದ ತಾವು ತಿಳಿದು ಸೌಜನ್ಯಕ್ಕಾದರೂ ಒಂದು ಕರೆ ಮಾಡಿದ್ದರೆ ಈ ನನ್ನ ಮನದಾಳದ ಪತ್ರ ಬರೆಯುವ ಔಚಿತ್ಯವೇ ಇರುತ್ತಿರಲಿಲ್ಲ.
ಒಟ್ಟಾರೆ ತಮ್ಮ ಮೇಲಿನ ಪ್ರೀತಿ ಗೌರವಗಳ ದ್ಯೋತಕವಾಗಿ, ಕೃತಜ್ಞತಾ ಪೂರ್ವಕವಾಗಿ ನನ್ನ ಅಂತರಾಳದ ಕೆಲವು ನೋವಿನ ನುಡಿಗಳನ್ನು ತಮ್ಮ ದಿವ್ಯ ಚಿಂತನಾಂಬುದಿಗೆ ಸಮರ್ಪಣೆ ಮಾಡಿದ್ದೇನೆ.
ತಾವು ಈ ಪತ್ರವನ್ನು ಓದುತ್ತೀರೋ ಅಥವಾ ಹರಿದು ಬುಟ್ಟಿಗೆ ಎಸೆಯುತ್ತೀರೋ ಗೊತ್ತಿಲ್ಲ.
“ಯದ್ಭಾವಂ ತದ್ಭವತಿ” ” ದೃಷ್ಟಿಯಂತೆ ಸೃಷ್ಟಿ” ತಮಗೆ ಬಿಟ್ಟಿದ್ದು. ನನ್ನ ಅಂತರಾತ್ಮಕ್ಕೆ ತೋಚಿದಂತೆ ಕೆಲವು ಅಂಶಗಳನ್ನು ಮಾತ್ರ ಹಂಚಿಕೊಂಡಿದ್ದೇನೆ.
ನಾನು ಹೊಗಳುವವನೂ ಅಲ್ಲ ತೆಗಳುವವನೂ ಅಲ್ಲ. ಒಳಗೊಂದು ಹೊರಗೊಂದು ತೋರಿ ನಟನೆ ಮಾಡುವವನೂ ಅಲ್ಲ.” ಅತಿ ವಿನಯಂ ಧೂರ್ತ ಲಕ್ಷಣಂ” ಎಂಬಂತೆ ಅತಿಯಾದ ವಿನಯಶಾಲಿಯೂ ಅಲ್ಲ. ಬರೆದುದು ಅತಿಯಾಯಿತು. ಕ್ಷಮೆಯಿರಲಿ ಸರ್
ನಿಮ್ಮ ಪ್ರೀತಿಯ ಹೃದಯವಂತಿಕೆಗೆ ಧನ್ಯವಾದಗಳು ಸರ್. ನಮಸ್ಕಾರ.
– ಕೆ.ಮಹಾಲಿಂಗಯ್ಯ, ನಿವೃತ್ತ ಕನ್ನಡ ಅಧ್ಯಾಪಕ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾ.ಜಿಲ್ಲೆ.




