ಆಂಧ್ರದಲ್ಲಿ ಭೀಕರ ಬಸ್ ಅಪಾಘಾತ: ದೇವಸ್ಥಾನಕ್ಕೆ ತೆರಳುತ್ತಿದ್ದ 9 ಜನ ದುರ್ಮರಣ
ಹೈದರಾಬಾದ್: ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಗುಡ್ಡಗಾಡು ಪ್ರದೇಶದ ತುಳಸಿಪಾಕಲು ಬಳಿ ಇಂದು ಬೆಳಗ್ಗೆ ದಟ್ಟ ಮಂಜಿನಿಂದಾಗಿ ನಿಯಂತ್ರಣ ತಪ್ಪಿದ ಬಸ್ ಆಳವಾದ ತಗ್ಗಿಗೆ ಉರುಳಿ ಬಿದ್ದ ಪರಿಣಾಮ 9 ಜನ ಸಾವನ್ನಪ್ಪಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಜಿಲ್ಲಾಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಬಸ್‌ನಲ್ಲಿ 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ ಇದ್ದರು. ಇವರ ಪೈಕಿ 9 ಜನ ಮೃತಪಟ್ಟಿದ್ದಾರೆ. 7 ಗಾಯಾಳುಗಳನ್ನು 15 ಕಿ.ಮೀ. ದೂರದಲ್ಲಿರುವ ಚಿಂತೂರು ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಭದ್ರಾಚಲಂಗೆ ಕೊಂಡೊಯ್ಯುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ.
ಕಾಡಿನ ಗುಡ್ಡಗಾಡು ಪ್ರದೇಶದಲ್ಲಿ ಕಡಿದಾದ ತಿರುವಿನಲ್ಲಿ ಬಸ್ ರಸ್ತೆಯಿಂದ ಹೊರಗೆ ಜಾರಿ, ತೀವ್ರ ಇಳಿಜಾರಿನಿಂದ ಕೆಳಗೆ ಬಿದ್ದಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವ ಪ್ರಕಾರ, ದಟ್ಟ ಮಂಜಿನಿಂದ ಚಾಲಕನಿಗೆ ತಿರುವು ಕಾಣದೇ ಇರುವುದೇ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ಪ್ರಯಾಣಿಕರು ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮ ಮಂದಿರಕ್ಕೆ ತೆರಳುತ್ತಿದ್ದರು.
ಅಪಘಾತ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದು, ಅಧಿಕಾರಿಗಳೊಂದಿಗೆ ಮಾತನಾಡಿ ಗಾಯಾಳುಗಳಿಗೆ ಒದಗಿಸುತ್ತಿರುವ ಪರಿಹಾರ ಕುರಿತು ಚರ್ಚಿಸಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣ ಅಪಘಾತ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮತ್ತು ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದಾರೆ.



