ವಿಪ್ರೋ-ಜಿಇ ಹೆಲ್ತ್ ಕೇರ್ ವತಿಯಿಂದ 8,000 ಕೋಟಿ ರೂ. ಹೂಡಿಕೆ

1 year ago

ಬೆಂಗಳೂರು: ವಿಪ್ರೋ-ಜಿಇ ಹೆಲ್ತ್ ಕೇರ್ ಸಂಸ್ಥೆಯು ಕರ್ನಾಟಕದ ಆರೋಗ್ಯಸೇವೆಗಳ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಇನ್ನೂ 8,000 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥ ಚೈತನ್ಯ ಸರವಟೆ ಹೇಳಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ  ನಡೆದ `ಜಗತ್ತಿನ ಅಗತ್ಯಗಳಿಗೆ ಮೇಕ್ ಇನ್ ಇಂಡಿಯಾ ಉಪಕ್ರಮ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದು ಕಳೆದ ಎರಡು ದಶಕಗಳಲ್ಲಿ ವಿನಿಯೋಗಿಸಿರುವ 32 ಸಾವಿರ ಕೋಟಿ ರೂ. ಬಂಡವಾಳದ ಮುಂದುವರಿದ ಭಾಗವಾಗಿದೆ ಎಂದರು.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಿಪ್ರೋ-ಜಿಇ ಕೇವಲ ಕಿಲೋಮೀಟರ್ ಅಂತರದಲ್ಲಿ ನಾಲ್ಕು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಇಲ್ಲಿ 30ಕ್ಕೂ ಹೆಚ್ಚು ಔಷಧೋತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

ಇದರ ಜೊತೆಗೆ 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿರುವ ಆರ್ & ಡಿ ಕೇಂದ್ರವನ್ನೂ ವಿಪ್ರೋ ಹೊಂದಿದೆ. ಸಮಾಜದ ಋಣವನ್ನು ತೀರಿಸುವ ನೈತಿಕ ಹೊಣೆಗಾರಿಕೆ ಅರಿತು ಸರಕಾರದ ಹಲವು ಹಲವು ಯೋಜನೆಗಳಲ್ಲೂ ಕಂಪನಿ ಕೈಜೋಡಿಸಿದೆ ಎಂದರು.

ಜತೆಗೆ ರಾಯಚೂರಿನಂತಹ ಹಿಂದುಳಿದ ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು. 

ವಿಪ್ರೊ-ಜಿಇ ಹೆಲ್ತ್ ಕೇರ್ ಇದುವರೆಗೆ 300 ಮಿಲಿಯನ್ ರೋಗಿಗಳಿಗೆ ತನ್ನ ಸೇವೆಗಳನ್ನು ಒದಗಿಸಿದೆ. ಬೇಡಿಕೆ, ಸಾಮರ್ಥ್ಯ ಮತ್ತು ಜನಸಂಖ್ಯೆಗಳೇ ಕರ್ನಾಟಕ ಮತ್ತು ಭಾರತದ ಶಕ್ತಿಗಳಾಗಿವೆ. ವಿಶೇಷವಾಗಿ ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಪೋಷಿಸುವ ಸಂಸ್ಕೃತಿ ಹೊಂದಿದೆ. ಇದರಿಂದಾಗಿ ಇಲ್ಲಿಂದ ಆಫ್ರಿಕಾ ಸೇರಿದಂತೆ ಜಗತ್ತಿನ ನಾನಾ ದೇಶಗಳಿಗೆ ರಫ್ತು ವಹಿವಾಟು ಅಗಾಧವಾಗಿದೆ. ಉದ್ಯಮಗಳ ಜಾಗತಿಕ ಸಾಮರ್ಥ್ಯ ಕೇಂದ್ರಗಳು ನೆಲೆಯೂರಿರುವುದು ರಾಜ್ಯದ ಕೈಗಾರಿಕಾಸ್ನೇಹಿ ನೀತಿಯ ಫಲವಾಗಿದೆ ಎಂದರು.

Leave a Reply