ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಬಿಜೆಪಿ ಜನವರಿ 21ರಿಂದ 29ರವರೆಗೆ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನವನ್ನು ಆರಂಭಿಸುವುದಾಗಿ ಪ್ರಕಟಿಸಿದೆ. ಈ ಅಭಿಯಾನದ ಮೂಲಕ, 2 ಕೋಟಿ ಜನರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದಲ್ಲಿ ಜ.21ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದರು.
ಪಕ್ಷದ 39 ಸಂಘಟನಾ ಜಿಲ್ಲೆಗಳು, 312 ಮಂಡಲಗಳಲ್ಲಿ ಈ ಅಭಿಯಾನ ನಡೆಯಲಿದೆ. ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರಗಳ ಸಭೆಗಳು ನಡೆಯಲಿವೆ ಇವುಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳನ್ನು ಸಂಪರ್ಕಿಸಲಾಗುವುದು. ಸುಮಾರು 2 ಕೋಟಿಗೂ ಹೆಚ್ಚು ಫಲಾನುಭವಿಗಳು ಎಂದರೆ, 1 ಕೋಟಿ ಕುಟುಂಬಗಳನ್ನು ಸಂಪರ್ಕಿಸುವ ಗುರಿ ಹಮ್ಮಿಕೊಳ್ಳಲಾಗಿದೆ. ಜನ್‌ಧನ್, ಪಿಎಂ ಕಿಸಾನ್, ಪಿಎಂ ಆವಾಸ್, ಉಜ್ವಲಾ, ರೈತ ವಿದ್ಯಾನಿಧಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಫಲಾನುಭವಿಗಳನ್ನು ಸಂರ್ಕಿಸುತ್ತೇವೆ ಎಂದರು.
ಫಲಾನುಭವಿಗಳ ಮನೆಗಳ ಮೇಲೆ ಪಕ್ಷವನ್ನು ಬೆಂಬಲಿಸುವ ಉದ್ದೇಶದ ಸ್ಟಿಕರ್‌ಗಳನ್ನು ಅಂಟಿಸಲಾಗುವುದು. ಇದಕ್ಕಾಗಿ 3 ಕೋಟಿ ಸ್ಟಿಕ್ಕರ್ ಹಂಚಲಾಗುವುದು. ಈ ಕಾರ್ಯಕ್ರಮ ಏಕ ಕಾಲದಲ್ಲಿ 58 ಸಾವಿರ ಬೂತ್‌ಗಳಲ್ಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದರು.




