ಆರು ತಿಂಗಳಲ್ಲಿ ವಿದ್ಯುತ್ ಅವಘಡಗಳಲ್ಲಿ 118 ಜನ ಬಲಿ

1 year ago

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ ವಿವಿಧ ವಿದ್ಯುತ್ ಅವಘಡಗಳಲ್ಲಿ 118 ಜನ ಬಲಿಯಾಗಿದ್ದಾರೆ. ಇದು ಹಿಂದಿನ ದಶಕದಲ್ಲೇ ದಾಖಲಾದ ಸರಾಸರಿ ವಾರ್ಷಿಕ ಸಾವುಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ.

ಬೆಸ್ಕಾಂ ಸುಂಕ ಪರಿಷ್ಕರಣೆ ಪ್ರಸ್ತಾವನೆಯ ಭಾಗವಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ  ಸಲ್ಲಿಸಿದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಅವಘಡಗಳಿಗೆ ಸಾರ್ವಜನಿಕರ ನಿರ್ಲಕ್ಷ್ಯವೇ ಕಾರಣ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

2024 ರಲ್ಲಿ ಕೇವಲ ಆರು ತಿಂಗಳಲ್ಲಿ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 118 ಜನ ಮೃತಪಟ್ಟಿದ್ದಾರೆ. ಅದೇ ಅವಧಿಯಲ್ಲಿ, ವಿದ್ಯುತ್ ಅಪಘಾತಗಳಿಂದಾಗಿ 61 ಪ್ರಾಣಿಗಳು ಬಲಿಯಾಗಿರುವ ಸಂಗತಿ ಕೂಡ ವರದಿಯಲ್ಲಿ ದಾಖಲಾಗಿದೆ.

ಪಾದಚಾರಿ ಮಾರ್ಗಗಳಲ್ಲಿ ತಂತಿಗಳು ತುಂಡಾಗಿ ನೇತಾಡುವುದು ಅಥವಾ ಬಿದ್ದಿರುವುದು ಸಾಮಾನ್ಯ. ಇಂಥ ಕಡೆಗಳಲ್ಲಿ ನಡೆಯಲು ಭಯವಾಗುತ್ತದೆ. ಒಂದು ತಪ್ಪು ಹೆಜ್ಜೆ ಇಟ್ಟರೆ ಮಾರಕವಾಗಬಹುದು ಎಂದು ಸುದ್ದಗುಂಟೆಪಾಳ್ಯದ ನಿವಾಸಿಯೊಬ್ಬರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏಪ್ರಿಲ್ ಮತ್ತು ಸೆಪ್ಟೆಂಬರ್ 2024ರ ನಡುವೆ 39,024 ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಹೇಳಿಕೊಂಡಿದೆ. ಆದರೆ, 17,463 ಕಡೆಗಳಲ್ಲಿ ಇನ್ನೂ ಸಮಸ್ಯೆಗಳು ಹಾಗೇಯೇ ಇವೆ. ವಿದ್ಯುತ್ ಮೂಲಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಿದೆ.

Leave a Reply