ಬೆಂಗಳೂರು: ಬೆಸ್ಕಾಂನಿಂದ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ನೀಡುವುದರಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಬೇಗೂರು ಹೋಬಳಿಯ ಬೆಟ್ಟದಾಸನಪುರ, ಮೈಲಸಂದ್ರದ ಸಾಯಿ ಶಕ್ತಿ ಬಡಾವಣೆಯ ನಾಗರಿಕರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ನಾಗರಿಕರು ಬೆಸ್ಕಾಂಗೆ ಬರೆದಿರುವ ಪತ್ರದ ಪೂರ್ಣಪಾಠ ಈ ಕೆಳಗಿನಂತಿದೆ:
ವಿಷಯ: ಬೆಸ್ಕಾಂನಿಂದ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ನೀಡುವುದರಲ್ಲಿ ಆಗುತ್ತಿರುವ ಅನ್ಯಾಯದ ಕುರಿತು
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಾಯಿ ಶಕ್ತಿ ಬಡಾವಣೆಯ ನಿವಾಸಿಗಳಾದ ನಾವುಗಳು ಈ ಮೂಲಕ ತಿಳಿಸುವುದೇನೆಂದರೆ ಈ ಬಡಾವಣೆಯು 2010ರಲ್ಲಿ ನಿರ್ಮಾಣವಾಗಿದ್ದು, ಆ ದಿನಗಳಿಂದ 2022ರ ಇವತ್ತಿನವರೆಗು BESCOM S-10 ವ್ಯಾಪ್ತಿಗೆ ಬರುವ ಸುಮಾರು 3000 ನಿವೇಶನಗಳಲ್ಲಿ ಸುಮಾರು 1500ಕ್ಕೂ ಮನೆಗಳು ನಿರ್ಮಾಣವಾಗಿರುತ್ತವೆ. ಈ ಬಡಾವಣೆಯಲ್ಲಿ ದಿನಗೂಲಿ ಕೆಲಸದವರು, ಕೂಲಿ ಕಾರ್ಮಿಕರು, ಗಾರ್ಮೆಂಟ್ ಕೆಲಸದವರು, ಆಟೋ ಡ್ರೈವರ್ ಗಳು ಮತ್ತು ಹೆಚ್ಚಿನ ಮಧ್ಯಮ ವರ್ಗದ ನಿವಾಸಿಗಳು ವಾಸವಾಗಿರುತ್ತಾರೆ. ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟುವ ಕನಸನ್ನು ಈಡೇರಿಸಿಕೊಂಡರು ಬಡಾವಣೆ ನಿರ್ಮಾಣವಾದಾಗಿನಿಂದ ಸುಮಾರು 10 ವರ್ಷಗಳ ಕಾಲ ಬೆಸ್ಕಾಂನಿಂದಾಗಿ ನಾವುಗಳು ಅನುಭವಿಸಿರುವ ನೋವು ಹೇಳತೀರದು. ಅದನ್ನು ಹಂತ ಹಂತವಾಗಿ ಈ ಕೆಳಗೆ ವಿವರಿಸಿದ್ದೇವೆ.
2010 ರಲ್ಲಿ ಈ ಬಡಾವಣೆ ನಿರ್ಮಾಣವಾದಾಗ, ರೆವೆನೂ ಲೇಔಟ್ ಆಗಿದ್ದ ಕಾರಣ ಹೊಸದಾಗಿ ನಿರ್ಮಾಣ ಮಾಡುತ್ತಿದ್ದ ಹಾಗು ಮಾಡಿದ ಯಾವುದೇ ಮನೆಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ನೀಡುತ್ತಿರಲಿಲ್ಲ. ಸತತ ಹೋರಾಟದ ನಂತರ ಮೂರು ವರ್ಷಗಳ ಬಳಿಕ ವಿದ್ಯುತ್ ಲೋಕಪಾಲದವರ ಪ್ರತಿ ಸಂಖ್ಯೆ “OMB/CG/2013/207” ಆದೇಶದ ಅನ್ವಯ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಸೂಚಿಸಿದ್ದರು. ಆದರೆ ಮನೆಗಳು ಪೂರ್ಣ ನಿರ್ಮಾಣವಾಗಿದ್ದ ಕಾರಣ ಪರ್ಮನೆಂಟ್ ವಿದ್ಯುತ್ ಸಂಪರ್ಕದ ಅವಶ್ಯಕತೆ ಇದ್ದುದರಿಂದ ನಿವಾಸಿಗಳು ಮೀಟರ್ ಪಡೆಯದೇ ಹೋರಾಟವನ್ನು ಮುಂದುವರಿಸಿದ್ದರು.
ಬಡಾವಣೆಯ ಎಲ್ಲ ನಿವಾಸಿಗಳು ಅಂದಿನ ಮುಖ್ಯಮಂತ್ರಿ “ಸಿದ್ಧರಾಮಯ್ಯ” ನವರ ಜನತಾ ದರ್ಶನಕ್ಕೆ ಅಲೆದಾಡಿದ ಪರಿಣಾಮ 11 ಜೂನ್ 2014 ರಂದು ಈ ಬಡಾವಣೆಗಳಿಗೆ ಪರ್ಮನೆಂಟ್ ಮೀಟರ್ ನೀಡಲು ಬೆಸ್ಕಾಂ MD ಯವರಿಗೆ ಪ್ರತಿ ಸಂಖ್ಯೆ “CM/35598/REP-1/11-6-14” ರ ಪುಕಾರ ಆದೇಶಿಸಿದ್ದರು. ಅದರಂತೆ ಚೀಫ್ ಇಂಜಿನಿಯರ್ C, O&M, BMAZ ಬೆಸ್ಕಾಂ ನವರು ಆದೇಶದ ಪ್ರತಿ ಸಂಖ್ಯೆ: “BESCOM/CGM(E1/BC-05/P- 218(3)/11-15/3632-35” ದಿನಾಂಕ 21 ಜೂನ್ 2014ಕ್ಕೆ KERCಯ ನಿಯಮಾವಳಿಯ ಅನ್ವಯ ಬೆಸ್ಕಾಂ ವತಿಇಂದ ವಿದ್ಯುತ್ ಕಂಬಗಳ ಎಸ್ಟಿಮೇಟ್ ಆಗಿ, ಕಂಬಗಳನ್ನು ನೆಟ್ಟು 2014 ರಿಂದ 2016 ರವರೆಗೆ ಸುಮಾರು 350 ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ನೀಡಿದ್ದಾರೆ.
2017ರಿಂದ ಬೆಸ್ಕಾಂ S-10 ಡಿವಿಷನ್ ಗೆ “ಧನಂಜಯ್” ಎನ್ನುವ AEE ಬರುತ್ತಾರೆ, ಅವರು ಲಂಚದ ಬೇಡಿಕೆಯ ಮೇರೆಗೆ ನಿವಾಸಿಗಳೊಂದಿಗೆ ಆದ ವಾಗ್ವಾದದ ಕಾರಣ ಈ ಬಡಾವಣೆಗೆ ಶಾಶ್ವತ ವಿದ್ಯುತ್ ಸಂಪರ್ಕ ನೀಡಲು ನೀರಾಕರಿಸುತ್ತಾರೆ. ಕೇಳಿದರೆ ಈ ಮೇಲಿನ ಅಧಿಕಾರಿಗಳ ಆದೇಶ ಎಂದು ಹೇಳುತ್ತಾ ಲಂಚ ಕೊಟ್ಟವರಿಗೆ ಒಳಗೊಳಗೇ ಶಾಶ್ವತ ವಿದ್ಯುತ್ ಸಂಪರ್ಕ ನೀಡಿರುತ್ತಾರೆ. ಅಷ್ಟರಲ್ಲಿ ಈ ಲೇಔಟ್ ನಲ್ಲಿ ಬಹಳ ಮನೆಗಳು ನಿರ್ಮಾಣವಾಗಿದ್ದು, ಕಡುಬಡವರಿಗೆ ಬಹಳ ಅನ್ಯಾಯವಾಗಿರುತ್ತದೆ. ಈ ಕಾರಣ ಮತ್ತೆ ನಿವಾಸಿಗಳು ಹೋರಾಟ ಶುರು ಮಾಡುವಂತಾಯಿತು. ಇಲ್ಲಿ ಬಹಳ ದೊಡ್ಡ ಅನ್ಯಾಯವೆಂದರೆ 2017 ರಿಂದ 2018 ರವರೆಗೆ ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣವಾದ ಮತ್ತು ನಿರ್ಮಿಸಿದ ಮನೆಗಳಿಗೆ ತಾತ್ಕಾಲಿಕ ವಿದ್ಯುತ್ ಕೂಡ ನೀಡುತ್ತಿರಲಿಲ್ಲ.
ಈ ಅವಧಿಯಲ್ಲಿ ಬಡಾವಣೆಯ ಅತಿ ಹೆಚ್ಚು ನಿವಾಸಿಗಳಿಗೆ ವಿದ್ಯುತ್ ಕಳ್ಳತನದ ಆರೋಪದ ಅಡಿಯಲ್ಲಿ “ಜಾಗೃತ ದಳ”ದ ಅಧಿಕಾರಿಗಳು ಮನಬಂದಂತೆ ದಂಡ ವಿಧಿಸಿದರು. ಅದರಿಂದ ಹೆಚ್ಚು, ನಿವಾಸಿಗಳು ಒಂದು ಲಕ್ಷಕ್ಕೂ ಹೆಚ್ಚು ದಂಡ ಕಟ್ಟುವಂತಾಯಿತು.
ತದನಂತರ, 2018ರ ಸೆಪ್ಟೆಂಬರ್ ನಲ್ಲಿ ಅಂದಿನ ಬೆಸ್ಕಾಂ MDಯವರ ಬಳಿ ಈ ಸಮಸ್ಯೆ ಹೇಳಿಕೊಂಡಾಗ ಅವರು ಸದ್ಯಕ್ಕೆ ತಾತ್ಕಾಲಿಕ ಮೀಟರ್ ತೆಗೆದುಕೊಳ್ಳಿ ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು. ಅದರಂತೆ ನಿವಾಸಿಗಳು ತಾತ್ಕಾಲಿಕ ವಿದ್ಯುತ್ ಮೀಟರ್ ತೆಗೆದುಕೊಂಡರು. ಆದರೆ ಇಲ್ಲಿಯವರೆಗೂ 4 ವರ್ಷಗಳು ಕಳೆದರು ಈ ಸಮಸ್ಯೆ ಪರಿಹಾರವಾಗಿಲ್ಲ. ಮೊದಲಿಗೆ 3 ವರ್ಷ ಈ ತಾತ್ಕಾಲಿಕ ಮೀಟರ್ ನಲ್ಲಿ MDI ಬಗ್ಗೆ ಯಾವ ಬೆಸ್ಕಾಂ ಅಧಿಕಾರಿಯು ಮಾತನಾಡಿರುವುದಿಲ್ಲ. ಈ ಕೆಳಗೆ 8 ತಿಂಗಳಿಂದ MDI ಬಗ್ಗೆ ಮಾತನಾಡಿಕೊಂಡು ಕಳೆದ 3 ತಿಂಗಳಿಂದ ಬಹಳಷ್ಟು ಜನರಿಗೆ 6 ತಿಂಗಳ MDI ದಂಡ ಎಂದು ಹೇಳಿಕೊಂಡು 20ರಿಂದ 70 ಸಾವಿರದವರೆಗೂ ತಿಂಗಳ ವಿದ್ಯುತ್ ಬಿಲ್ ಎಂದು ನೀಡಿರುತ್ತಾರೆ. ಇದರ ಜೊತೆಗೆ 30 ರಿಂದ ಒಂದೂವರೆ ಲಕ್ಷದ ವರೆಗೂ ಲಂಚ ನೀಡಿದ ಪ್ರತಿ ಮನೆಗೂ ಬೆಸ್ಕಾಂ ಅಧಿಕಾರಿಗಳು ಶಾಶ್ವತ ವಿದ್ಯುತ್ ಸಂಪರ್ಕ ನೀಡಿರುತ್ತಾರೆ. ಇದೆಲ್ಲದರ ಜೊತೆಗೆ ಅತಿ ಹೆಚ್ಚು ಹಣ ಪಡೆದು TC ಸಹ ನೀಡಿರುತ್ತಾರೆ. ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಈ ರೀತಿಯ ಭ್ರಷ್ಟ ಅಧಿಕಾರಿಗಳಿಂದ ನಮ್ಮಂತ ಮಧ್ಯಮ ವರ್ಗದ ಜನರಿಗೆ ಸಹಿಸಲಾಗದಷ್ಟು ಅನ್ಯಾಯವಾಗಿರುತ್ತದೆ.
ಆದರೆ ನಮಗೆ ತಿಳಿದಿರುವಂತೆ KERC ನಿಯಮಾವಳಿಯ ಪ್ರಕಾರ ಶಾಶ್ವತ ವಿದ್ಯುತ್ ಸಂಪರ್ಕ ಪ್ರತಿ ಒಬ್ಬರ ಹಕ್ಕಾಗಿರುತ್ತದೆ. ಅದನ್ನು BESCOM ನಿಡಲೇಬೇಕಾಗಿರುತ್ತದೆ. ಆದರೂ BESCOM KERC ಯ ಎಲ್ಲ ನಿಯಮಾವಳಿಯನ್ನು ಗಳಿಗೆ ತೂರಿ ನಿವಾಸಿಗಳಿಗೆ ಅನ್ಯಾಯವೆಸಗಿದ್ದಾರೆ. ನಮ್ಮ ಬಡಾವಣೆ ನಿರ್ಮಾಣವಾದ ನಂತರ ನಮ್ಮದೇ ರೀತಿಯ ವಿವಿಧ ಲೇಔಟ್ ಗಳು ನಿರ್ಮಾಣವಾಗಿವೆ. ಅವಲ್ಲಕ್ಕೂ BESCOM ನವರು ಶಾಶ್ವತ ವಿದ್ಯುತ್ ಸಂಪರ್ಕ ನೀಡಿರುತ್ತಾರೆ. ಇದು ಬೆಸ್ಕಾಂನವರಿಂದ ನಮಗಾಗಿರುವ ಶುದ್ಧ ತಾರತಮ್ಮ ಹಾಗು ಮೇಲೆ ತಿಳಿಸಿರುವ ಎಲ್ಲ ದಾಖಲೆಯ ನಕಲು ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿರುತ್ತೇವೆ.
ಈ ಮೂಲಕ ಸಾಯಿ ಶಕ್ತಿ ಬಡಾವಣೆಯ ನಿವಾಸಿಗಳು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 2014 ರಲ್ಲಿ ಹೊರಡಿಸಿದ ಪರ್ಮನೆಂಟ್ ಮೀಟರ್ ಆದೇಶ ಎಲ್ಲಿಯೂ ರದ್ದಾಗಿರುವುದಿಲ್ಲ. ಅದರಂತೆ ಆ ಆದೇಶ ಮೇರೆಗೆ ನಮ್ಮ ಎಲ್ಲ ನಿವಾಸಿಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ನೀಡಲೇಬೇಕು. ಇಲ್ಲವಾದಲ್ಲಿ ಇದಕ್ಕೆ ಸೂಕ್ತ ಕಾರಣದೊಂದಿಗೆ “endorsement” ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಒಂದು ವೇಳೆ ನಮಗಾಗುತ್ತಿರುವ ಈ ಅನ್ಯಾಯಕ್ಕೆ ಸೂಕ್ತ ನ್ಯಾಯ ದೊರಕದ ಹೋದಲ್ಲಿ ಎಲ್ಲ ರೀತಿಯ ಉಗ್ರ ಹೋರಾಟಕ್ಕೆ ನಾವು ಅಣಿ ಮಾಡಿಕೊಳ್ಳುತ್ತೇವೆಂದು ಈ ಮೂಲಕ ನಿಮ್ಮನ್ನು ಎಚ್ಚರಿಸುತ್ತಿದ್ದೇವೆ.
ಇಂತಿ,
ಸಾಯಿ ಶಕ್ತಿ ಬಡಾವಣೆ ನಿವಾಸಿಗಳು
ಈ ಮನವಿ ಪತ್ರಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಇದೀಗ ನಿವಾಸಿಗಳು ಅಹೋರಾತ್ರಿ ಪ್ರತಿಭಟನೆ ನಡೆಸತೊಡಗಿದ್ದಾರೆ.




