ಬಸನಗೌಡ ಪಾಟೀಲ ಯತ್ನಾಳ ಹರಕು ಬಾಯಿಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಸೋಲು: ಎಂ ಪಿ ರೇಣುಕಾಚಾರ್ಯ
ಮೈಸೂರು: ಶಿಸ್ತಿನ ಪಕ್ಷ ಎಂದು ಸ್ವಯಂ ಕರೆದುಕೊಳ್ಳುವ ಬಿಜೆಪಿಯಲ್ಲಿ ಬಣ ರಾಜಕಾರಣ ಉಲ್ಬಣಿಸಿದೆ. ಪಕ್ಷದ ಅಧ್ಯಕ್ಷ ವಿಜಯೇಂದ್ರ ಪದಚ್ಯುತಿಗೆ ಆಗ್ರಹಿಸಿ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ತಂಡ ಹೋರಾಟ ಮುಂದುವರಿಸಿದರೆ, ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಕ್ಷ ನಿಷ್ಠರ ಬಣ ದೇವಾಲಯ ಯಾತ್ರೆ ಆರಂಭಿಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ ಸಿ ಪಾಟೀಲ್ ಮತ್ತು ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೂವತ್ತಕ್ಕೂ ಹೆಚ್ಚು ಜನ ಮಾಜಿ ಶಾಸಕರ ತಂಡ ನಿನ್ನೆ ಮುಳುಬಾಗಿಲು ಕುರುಡು ಮಲೆ ಗಣೇಶ ದೇವಾಲಯದಲ್ಲಿ ಆರಂಭಿಸಿದ ಯಾತ್ರೆ ಮೈಸೂರಿನ ಚಾಮುಂಡಿ ಬೆಟ್ಟ ತಲುಪಿದೆ.
ಇಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕರು, ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವ ಯತ್ನಾಳ್ ಮತ್ತು ಅವರ ತಂಡದ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ನಿಂದ ಸುಪಾರಿ ಪಡೆದು ಬಿಜೆಪಿ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ಸ್ ಮಾಡಿಕೊಂಡ ಅವರು ಮುಡಾ ಪಾದಯಾತ್ರೆಗೆ ಬರಲಿಲ್ಲ.ಈ ಮೂಲಕ ಭ್ರಷ್ಟಾಚಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿಯ ಬ್ಲಾಕ್ ಮೇಲ್ ರಾಜಕಾರಣ ನಡೆಯದು ಎಂದು ರೇಣುಕಾಚಾರ್ಯ ಆರೋಪಿಸಿದರು.
ಯಡಿಯೂರಪ್ಪ ಅವರಿಗೆ ಇಂತಹ ಕೆಲವರು ಶಕುನಿಗಳು, ಮೀರ್ ಸಾಧಕರು ಕಾಟ ಕೊಡುತ್ತಲೇ ಇದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷರಾಗಿ ಮಾಡಿದ್ದು ಬಿಜೆಪಿ ಹೈಕಮಾಂಡ್ ಹೊರತು ಯಡಿಯೂರಪ್ಪ ಅಲ್ಲ. ಹೀಗಾಗಿ ಅವರಿಗೆ ಬೈಯ್ದರೆ ಹೈಕಮಾಂಡ್ ಗೆ ಬೈಯ್ದಂತೆ ಎಂದರು.
ಯತ್ನಾಳ ಹಿಂದುತ್ವದ ಮುಖವಾಡ ಧರಿಸಿದ್ದಾರೆ. ಅವರ ಹರಕು ಬಾಯಿಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಯಿತು. ಉಪ ಚುನಾವಣೆ ಸೋಲಿಗೆ ಅವರೇ ಕಾರಣ. ವಿಜಯಪುರದ ಪ್ರಭಾವಿ ಸಚಿವರ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದರು.
ಬಸವಣ್ಣ ಎಲ್ಲ ವರ್ಗದವರಿಗೆ ಸೇರಿದ ವಿಶ್ವಗುರು. ಅಂತಹವರಿಗೆ ಅಪಮಾನ ಮಾಡಿರುವ ಯತ್ನಾಳ ವಿರುದ್ಧ ಮಠಾಧೀಶರು ಛೀಮಾರಿ ಹಾಕಬೇಕು. ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಬೇಕು ಎಂದು ಒತ್ತಾಯಿಸಿದರು.
ನಾವು ಬಣ ರಾಜಕೀಯ ಮಾಡುತ್ತಿಲ್ಲ. ವಿಜಯೇಂದ್ರ ಒಂದು ಶಕ್ತಿ. ಯತ್ನಾಳರದ್ದು ನಾಲ್ಕು ಜನರ ಒಂದು ಗುಂಪು ಅಷ್ಟೇ. ತಾಯಿ ಚಾಮುಂಡಿ ಇಂತಹ ಆಂತರಿಕ ದುಷ್ಟರನ್ನು ಸಂಹಾರ ಮಾಡಲಿ ಎಂದರು.
ಮುರ್ಡೇಶ್ವರದಲ್ಲಿ ಸದ್ಯದಲ್ಲೇ ಇನ್ನೊಂದು ಸಭೆ ನಡೆಸಲಾಗುವುದು. ನಂತರ ದಾವಣಗೆರೆಯಲ್ಲಿ 3-4 ಲಕ್ಷ ಜನ ಸೇರಿಸಿ ಬಿಜೆಪಿ ನಾಯಕರ ಸಮಾವೇಶ ಆಯೋಜಿಸಲಾಗುವುದು. ಯತ್ನಾಳರ ಉಚ್ಛಾಟನೆಗೆ ಆಗ್ರಹಿಸಿ ಸದ್ಯದಲ್ಲೇ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲಾಗುವುದು. ಕೇಂದ್ರದ ನಾಯಕರು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.




