ನಿಷ್ಟುರ ವಿಮರ್ಶೆ ಇಲ್ಲದೆ ಬೂಸಾ ಬರಹ ಕನ್ನಡ ಸಾಹಿತ್ಯವನ್ನು ಅಶಕ್ತಗೊಳಿಸಿದೆ

3 years ago

ಬರಹ ಮಾಡುವವರ ಬೂಟಾಟಿಕೆಗಳು…

ನಿಷ್ಟುರ ವಿಮರ್ಶೆ ಇಲ್ಲದೆ ಬೂಸಾ ಬರಹ ಕನ್ನಡ ಸಾಹಿತ್ಯವನ್ನು ಅಶಕ್ತಗೊಳಿಸಿದೆ

ಕುಪ್ಪಳ್ಳಿಯಲ್ಲಿ ಬುದ್ಧಿಜೀವಿಗಳ ಬಿಕ್ಕಟ್ಟು ಎನ್ನುವ ಕಮ್ಮಟ ನಡೀತು. ಲೋಕದ ಬುದ್ಧಿಜೀವಿಗಳು ಈ ಬಗ್ಗೆ ಏನೇನು ಆಲೋಚನೆ ಮಾಡಿದಾರೆ, ಅದನ್ನ ಈ ಹೊತ್ತು ಹೇಗೆ ಗ್ರಹಿಸಬೇಕು ಎನ್ನುವುದು ಈ ಕಮ್ಮಟದ ಕೇಂದ್ರವಾಗಿತ್ತು. ಅದರಲ್ಲಿ ಮೂರು ದಿನ ನಾನೂ ಶಿಬಿರಾರ್ಥಿಯಾಗಿದ್ದೆ. ಆಗ ನಾನು ಚರ್ಚೆಯ ಸಂದರ್ಭದಲ್ಲಿ ನಾವೆಲ್ಲಾ ಸೇಫರ್ ಜೋನ್ ಲ್ಲಿ ಆರಾಮಾಗಿ ಉಂಡುಟ್ಟು ಬರಹ ಮಾಡೋರು. ನಾವ್ಯಾರು ಬಹಳ‌ದೊಡ್ಡ ಬಿಕ್ಕಟ್ಟುಗಳನ್ನು ಮೈಮೇಲೆ ಎಳಕೊಂಡು ನಿಷ್ಟುರವಾಗಿ ಬರೀತಿಲ್ಲ ಮಾತಾಡ್ತಿಲ್ಲ… ಎನ್ನುವ ಅರ್ಥದಲ್ಲಿ ಮಾತಾಡಿದ್ದೆ. ಚೂರುಪಾರು ಅಪವಾದಗಳನ್ನು ಹೊರತುಪಡಿಸಿದರೆ ಇದು ನೂರಕ್ಕೆ ನೂರರಷ್ಟು ನಿಜ.

ನನ್ನನ್ನೂ ಒಳಗೊಂಡಂತೆ ಕನ್ನಡದಲ್ಲಿ ಬೆನ್ನುಮೂಳೆಯಿಲ್ಲದೆ ಡೊಗ್ಗಿ ಸಲಾಮು ಹೊಡೆಯುತ್ತ ಕಣ್ಣೆದುರಿನ ಜ್ವಲಂತ ಸಮಸ್ಯೆಗಳಿಗೆ ಜಾಣ ಮೌನ ಜಾಣ ಕಿವುಡುತನ ನಟಿಸುತ್ತಾ ಬಾಯಿಗೆ ಬೀಗ ಹಾಕಿಕೊಂಡು ಸುಕುಮಾರ ತೆವಲುಗಳನ್ನು ಬರೆದುಕೊಂಡಿರುವವರ ಸಂಖ್ಯೆ ದೊಡ್ಡದಿದೆ.

ಕನ್ನಡದ ಸಂದರ್ಭದಲ್ಲಿ ನೂರಾರು ಪ್ರಶಸ್ತಿಗಳು ಬರಹಕ್ಕೆ ಪ್ರವೇಶಿಸುವವರನ್ನೆಲ್ಲ ಭ್ರಮೆಯಲ್ಲಿ ಮುಳುಗಿಸುತ್ತಿವೆ. ಅದೇನೋ‌ ಮಹತ್ ಸಾಧನೆ ಮಾಡಿದಂತೆ ತಮಗೆ ತಾವೇ ಕಿರೀಟಗಳನ್ನು ಹೊತ್ತು ಮೆರೆದಾಡುತ್ತಿವೆ. ಅವರಿಗೆ ಇವರು ಕಿರೀಟ ತೊಡಿಸೋದು, ಇವರಿಗೆ ಅವರು ಶಾಲು ಹಾಕೋದು. ಅವರ ಕೃತಿಯನ್ನು ಅವರು ಹೊಗಳೋದು ಇವರ ಪುಸ್ತಕನ ಅವರು ಪ್ರಮೋಟ್ ಮಾಡೋದು… ಇದೇ ಆಗೋಗಿ ಕನ್ನಡದಲ್ಲಿ ದಿನದಿಂದ ದಿನಕೆ ಕಸದಂತಹ ಬೂಸಾ ಬರಹ ತುಂಬಿ ತುಳುಕುತ್ತಿದೆ.

ಇದೆಲ್ಲಾ ಪರಸ್ಪರ ಕೊಡುಕೊಳೆಯಂತೆ ನಿನಗೆ ನಾನು ನನಗೆ ನೀನು ಎನ್ನುವಂತೆ ಲಜ್ಜೆಗೆಟ್ಟ ವ್ಯವಹಾರವಾಗಿದೆ. ಕಟುವಾದ ವಿಮರ್ಶೆ ವಾಗ್ವಾದಗಳಿಲ್ಲದ ಕಾಲವಿದು. ಪ್ರಖರ ವಿಮರ್ಶೆ ಚಾಲ್ತಿಯಲ್ಲಿರದ ಕಾರಣ ಬೂಸಾ ಬರೆಯುವವರೆಲ್ಲಾ ಸೆಲೆಬ್ರಿಟಿ ಬರಹಗಾರರಾಗಿ ಮೆರೆಯುವಂತಾಗಿದೆ. ತಮ್ಮ ಕಟೌಟುಗಳನ್ನು ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ತಮ್ಮ ತಮ್ಮ ಗುಂಪುಗಳಲ್ಲಿ ತಾವು ತಾವೇ ಹೊಗಳಿಕೊಂಡು ಇನ್ನೊಂದು ಗುಂಪಿನ ಬಗ್ಗೆ ಟೀಕೆ ಮಾಡ್ಕೊಂಡ್ ಖುಷಿ ಪಡೋತರದ ಮನಸ್ಥಿತಿಗಳು, ಸಿನಿಕರ ಸಂಖ್ಯೆ ದೊಡ್ಡದಾಗುತ್ತಿದೆ. ಆಳವಾದ ಓದು-ಅಧ್ಯಯನ ಇಲ್ಲದ ಕಾರಣವೂ ಸ್ವವಿಮರ್ಶೆ ಶೂನ್ಯವಾಗಿದೆ.

ಆಧುನಿಕ‌ ಮಾರುಕಟ್ಟೆಯ ಗಾಢ ಪ್ರಭಾವದಲ್ಲಿ ಬಹುಸಂಖ್ಯಾತರು ಬರಹವನ್ನು/ಆಲೋಚನೆಯನ್ನು ಮಾರಾಟದ ಸರಕನ್ನಾಗಿಸುವ ತರಾತುರಿಯಲ್ಲಿದ್ದಂತಿದೆ. ಹೆಚ್ಚು ಮಾರಾಟವಾಗಬೇಕಾದರೆ ಸರಕಿನ ಆಕರ್ಷಣೆ/ಸೆಳೆಯುವ ಗುಣ ಹೆಚ್ಚಾಗಬೇಕು. ಹಾಗಾಗಿ ಕಡ್ಲೆಪುರಿಯಂತಹ/ಮಸಾಲೆ ರುಚಿಯಂತಹ ಬಹರವೂ ಹೆಚ್ಚಾಗುತ್ತಿರುವಂತಿದೆ. ಇದು ಪ್ರಭುತ್ವಕ್ಕೆ ವರವಾಗಿದೆ. ಇಂತಹದನ್ನು ದೊಡ್ಡ ದೊಡ್ಡ ಲಿಟರರಿ ಫೆಸ್ಟುಗಳು ಸಾಬೀತು ಮಾಡುತ್ತಿವೆ.

ದಲಿತ ಬುಡಕಟ್ಟು ದಮನಿತ ಅಲ್ಪಸಂಖ್ಯಾತರ ಪರವಾಗಿ ಒಂದು ಮಾತೂ ಆಡದವರು, ಕಣ್ಣೆದುರಿನ ಅಸಮಾನ ಸಾಮಾಜಿಕ ಸಮಸ್ಯೆಗಳಿಗೆ ತಲ್ಲಣಕ್ಕೆ ಒಳಗಾಗದವರು, ತುಟಿಬಿಚ್ಚದೆ ಘನಗಾಂಭೀರ್ಯ ಮೌನ ವಹಿಸಿದವರೆಲ್ಲಾ… ನನ್ನ ಗುರುತಿಸ್ತಾ ಇಲ್ಲ… ನನ್ನ ಬರಹಕ್ಕೆ ಬೆಂಬಲ ಇಲ್ಲ… ನನ್ನ ಕವಿಗೋಷ್ಠಿಗೆ ಕರೆದಿಲ್ಲ… ನನ್ನ ತುಳಿತಿದಾರೆ… ಕಾಂಟ್ಯಾಕ್ಟ್ ಇರೋದು ಮುಖ್ಯ ಮುಂತಾದ ಹಳಹಳಿಕೆಯಲ್ಲಿ ಕೊಳೆಯುತ್ತಿದ್ದಾರೆ.

ನಾನು ಪಡೆದ ಸಮತೆಯ/ಡೆಮಾಕ್ರಟಿಕ್ ಆದ ಅರಿವನ್ನು, ಇಂತಹ ಅರಿವಿನ ವ್ಯಾಪ್ತಿಗೆ ಬರಲಾಗದ ಸಮಾಜಕ್ಕೆ ತಲುಪಿಸಲು ಬರೆಯುವೆ, ಉಳಿದಂತೆ ಏನೋ ನನ್ನ ವಯಕ್ತಿಕ ಆಸಕ್ತಿ ನನ್ನ ಖುಷಿಗೆ ಬರೀತಿನಿ ಅನ್ಕೊಂಡು ಬರೆಯೋರ ಸಂಖ್ಯೆ ವಿರಳಾತಿವಿರಳವಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ, ಇಡೀ ಬರಹಗಳನ್ನು ಹಿಂಡಿದರೆ ಹನಿ ರಸವೂ ಇಲ್ಲದ ಬೂಸಾ ಬರೆದುಕೊಂಡು ಒಬ್ಬರನ್ನೊಬ್ಬರು ವಿಮರ್ಶೆ ಇಲ್ಲದೆ..ಸ್ವ ವಿಮರ್ಶೆ ಇಲ್ಲದೆ ಗೊಬ್ಬೆದ್ದು ಹೋದಂತಿದೆ. ಶೇಕಡ ಒಂದೋ‌ಎರಡೋ‌ ಪರ್ಸೆಂಟ್… ಏನೋ ತನಗೆ ತೋಚಿದ್ದು ಬರೀತಿನಿ… ಸಮಾಜವನ್ನು ತಿದ್ದಲು ನನ್ನ ತಿಳಿವನ್ನು ಬಳಸ್ತೀನಿ ಅನ್ಕೊಂಡ್ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡ್ಕೊಂಡ್ ಯಾವ ಭ್ರಮೆಗಳೂ ಇಲ್ಲದೆ ಇರೋರಿದಾರೆ.

ಕನ್ನಡದಲ್ಲಿ ಈ ಹೊತ್ತಿಗೆ ಜಗತ್ತಿನ ಬಹಳ ಮುಖ್ಯವಾದ ಬರಹಗಳ ಅನುವಾದ ದೊಡ್ಡಪ್ರಮಾಣದಲ್ಲಿ ಬರುತ್ತಿದೆ. ಇದೂ ಕೂಡ ಕನ್ನಡದಲ್ಲಿ ಜೀವವಿರುವ ಉಸಿರಾಡುವ ಬರಹ ಬರುತ್ತಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳುವಂತಿದೆ. ಇಂತಹ ಅನುವಾದಗಳನ್ನಾದರೂ ಗಂಭೀರವಾಗಿ ಓದತೊಡಗಿದರೆ ಒಂದಿಷ್ಟಾದರೂ ಸ್ವವಿಮರ್ಶೆ ಮತ್ತು ಲೋಕವಿಮರ್ಶೆಯ ಕಸುವು ಚಿಗುರೊಡೆಯಬಹುದೇನೋ?

ನನ್ನ ಓದು-ತಿಳಿವಿನ ಮಿತಿಯಲ್ಲಿ ಹೇಳುವುದಾದರೆ, ಈ ಎಲ್ಲಾ‌ ಕಾರಣಕ್ಕೆ ಈ ಕಾಲದಲ್ಲಿ ಬಂಡುಕೋರ ಬಾಬಾ ಸಾಹೇಬ್ ಅಂಬೇಡ್ಕರ್ ಅಂತವರು… ಕನ್ನಡ ಸಾಹಿತ್ಯದ ಮಟ್ಟಿಗೆ ‘ಲಂಕೇಶ್’ ಅಂತವರು ಇರಬೇಕಿತ್ತು ಅನ್ನಿಸುತ್ತಿದೆ ಅಥವಾ ಇವರ ಬರಹ ಮತ್ತು ಆಲೋಚನೆಗಳನ್ನು ಆಳವಾಗಿ ಓದಿಕೊಂಡರೂ ನಮ್ಮೊಳಗೆ ಕಿಂಚಿತ್… ಭಯ ರಹಿತ ಪ್ರತಿರೋಧ ಮೊಳೆಯಬಹುದು.

ಬರಹ ಮಾಡುವವರ ಈ ನಡೆಗಳು ಆಳುವ ಪ್ರಭುತ್ವವನ್ನು ಖುಷಿಪಡಿಸುವ ಸಂಗತಿಗಳಾಗಿವೆ.

ಒಳಗಿನ ತಿಳಿಯನು ಕಲಕದೆ ಇದ್ದರೆ… ಮತ್ತಷ್ಟು ಕೊಚ್ಚೆ ಹೆಚ್ಚಾಗಬಹುದು…

ಇಲ್ಲಿ ಮಾಡಿದ ಕಮೆಂಟಿಗೆ ನಾನೂ ಹೊರತಲ್ಲ ಎನ್ನುವ ಸ್ವವಿಮರ್ಶೆಯೊಂದಿಗೆ, ಎಲ್ಲಾ ವಲಯದಲ್ಲಿಯೂ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸ್ವಾತಂತ್ರ್ಯ-ಸಮತೆ-ಸಾಮಾಜಿಕ ನ್ಯಾಯದ ಕನಸಿನ ಸಂವಿಧಾನ ಜಾರಿಯಾದ ದಿನವಾದ ಇಂದು..

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
-ಡಾ.ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು

Leave a Reply