ಗಣರಾಜ್ಯೋತ್ಸವ ಆಚರಣೆ
ನ್ಯಾ. ನಾಗಮೋಹನ್ ದಾಸ್ ಭಾಗಿ
ಬೆಂಗಳೂರು: ನಿಮ್ಮ ದೃಢ ನಿರ್ಧಾರಕ್ಕೆ ನನ್ನದೊಂದು ಸಲಾಂ, ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಕೂಡಲೇ ಸರಕಾರ ಬೇಡಿಕೆಗಳನ್ನು ಈಡೇರಿಸಬೇಕು. ಅಂಗನವಾಡಿ ನೌಕರರು ಗ್ಯಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದನ್ನು ಸರಕಾರ ಜಾರಿ ಮಾಡಬೇಕು. ಅದು ಸರಕಾರದ ಜಾವಾಬ್ದಾರಿ, ವಿಳಂಬ ಮಾಡದೇ ಜಾರಿ ಮಾಡಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು)ನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಇಂದು( ಜನವರಿ 26) ನಾಲ್ಕನೇ ದಿನಕ್ಕೆ ಮುಂದುವರೆದಿದ್ದು, ಇಂದು ಗಣರಾಜ್ಯೋತ್ಸವ ಆಚರಣೆಯನ್ನು ಧರಣಿ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ನ್ಯಾ. ಎಚ್. ಎನ್. ನಾಗಮೋಹನದಾಸ್ ಭಾಗವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಮಹಿಳಾ ಸಮಾನತೆ ಅದು ನಮ್ಮ ಹಕ್ಕು, ಅದನ್ನು ಪಡೆಯಬೇಕು. ಸಂವಿಧಾನ ಜಾರಿಯಾಗಿ 73 ವರ್ಷಗಳಾಗಿವೆ. ಮಹಿಳಾ ಸಮಾನತೆ ಸಾಧಿಸುವ ಕೆಲಸ ನಡೆದಿದೆ. ಆದರೂ ಸಾಧಿಸುವುದು ಬೆಟ್ಟದಷ್ಟು ಇದೆ. ಅದಕ್ಕಾಗಿ ನಾವು ಹೋರಾಡಬೇಕಿದೆ ಎಂದು ಕರೆ ನೀಡಿದರು.
ತಾವುಗಳು ನಾಲ್ಕು ದಿನದಿಂದ ಶಾಂತಿಯುತವಾಗಿ, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೀರಿ, ಸರಕಾರ ಕಣ್ಣಬಿಟ್ಟು ನೋಡಬೇಕು. ಕಿವಿಗೊಟ್ಟು ಕೇಳಬೇಕು. ಹೃದಯ ತೆರೆದು ನೋಡಬೇಕು. ಇವರ ತಾಳ್ಮೆಯನ್ನು ಪ್ರಶ್ನಿಸುವ ಕೆಲಸ ಬೇಡ. ಇವರ ಹೋರಾಟ ತೀವ್ರಗೊಂಡು ಏನಾದರೂ ಅನಾಹುತವಾದರೆ ಸರಕಾರವೇ ಹೊಣೆಗಾರನಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭಾರತ ದೇಶವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವ ಜಾವಾಬ್ದಾರಿ ಸರಕಾರದ್ದಾಗಿದೆ. ಜನರಿಗೆ ಬೇಕಾದ ಕನಿಷ್ಠ ಮೂಲ ಸೌಲಭ್ಯ, ಶಿಕ್ಷಣ, ಆರೋಗ್ಯ, ವಸತಿ, ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಆದರೆ, ಜನರಿಗೆ ಇದು ಸಿಗುತ್ತಿಲ್ಲ. ರೈತರಿಂದ ಭೂಮಿ ಕಿತ್ತುಕೊಳ್ಳಲಾಗುತ್ತಿದೆ. ಬಡ ಜನರಿಂದ, ದಲಿತರಿಂದ ಶಿಕ್ಷಣ ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಅವರು ಮಾತನಾಡಿ, ಈ ಭಾರತದ ದೇಶದ ಜನರಾಗಿ ಪ್ರತಿಭಟನೆಯ ನಡುವೆಯೂ ಗಣರಾಜ್ಯೋತ್ಸವವನ್ನು ಆಚರಿಸುವ ಮೂಲಕ ಅಂಗನವಾಡಿ ನೌಕರರು ಕರ್ತವ್ಯವನ್ನು ಮೆರೆದಿದ್ದಾರೆ ಎಂದು ಹೇಳಿದರು.
ಹೆಣ್ಣು ಎನ್ನುವ ಕಾರಣಕ್ಕಾಗಿ ಕೀಳಾಗಿ ನೋಡಲಾಗುತ್ತಿದೆ. ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಲ್ಯಾಣ ರಾಜ್ಯದ ಕಲ್ಪನೆ ನಾಶವಾಗುತ್ತಿದೆ. ಶಾಲೆಗೆ ಮಗು ಹೋಗಲು, ಸತ್ಪ್ರಜೆಯನ್ನಾಗಿಸಲು ಅಂಗನವಾಡಿ ನೌಕರರು ಹಾಕುತ್ತಿರುವ ಶ್ರಮ ದೊಡ್ಡದಿದೆ. ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಜಾವಾಬ್ದಾರಿ ಸರಕಾರದ್ದು ಎಂದರು.
ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ಹೇಳಿಕೆಯನ್ನು ಖಂಡಿಸಿದರು. ಸಚಿವ ಹಾಲಪ್ಪ ಆಚಾರ್ ಅವರ ಹೇಳಿಕೆ ಉಡಾಫೆಯಿಂದ ಕೂಡಿದೆ. ಇದನ್ನು ನಾವು ಖಂಡಿಸುತ್ತೇವೆ. ಸಚಿವರು ನಾಟಕವಾಡುವುದನ್ನು ಬಿಡಬೇಕು. ಆದೇಶ ತೆಗೆದುಕೊಂಡು ಬರುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ(2020)-ಎನ್ಇಪಿ ಜಾರಿಯಾದಲ್ಲಿ ಅಂಗನವಾಡಿ ಕೇಂದ್ರಗಳು ಮುಳಗಿ ಹೋಗಲಿವೆ. ಇದು ದೊಡ್ಡ ಅಪಾಯವಾಗಿದೆ. ಹೋರಾಟವನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಇದರ ಪರಿಣಾಮವನ್ನು ಸರಕಾರ ಅನುಭವಿಸಲಿದೆ ಎಂದು ಹೇಳಿದರು.
ಧರಣಿ ಸ್ಥಳಕ್ಕೆ ಇಲಾಖೆಯ ನಿರ್ದೇಶಕರು ಬಂದು ಹೋಗಿದ್ದಾರೆ, ಸಭೆ ನಡೆಸಿದ್ದಾರೆ. ಸಚಿವ ಸಂಪುಟಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ. ಆ ಪ್ರತಿಯನ್ನು ನಮಗೆ ತಂದು ನೀಡಬೇಕು. ಸಚಿವರು ಆ ಕುರಿತು ಸ್ಪಷ್ಟವಾದ ಆದೇಶದ ಪ್ರತಿಯನ್ನು ತರುವವರೆಗೂ ಈ ಹೋರಾಟ ಮುಂದುವರೆಯಲಿದೆ ಎಂದು ಎಸ್ ವರಲಕ್ಷ್ಮಿ ಆಗ್ರಹಿಸಿದರು.
ಕಾರ್ಮಿಕ್ರಮ ನಿಮಿತ್ತ ಚಿಂತನ್ ವಿಕಾಸ್ ಜನಪರ ಗೀತೆ ಹಾಡಿದರು. ಅಂಗನವಾಡಿ ನೌಕರರು ಡೊಳ್ಳು ಬಾರಿಸಿ ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ರಾಜ್ಯ ಮುಖಂಡರಾದ ಯಮುನಾ ಗಾಂವ್ಕರ್, ಜಿ.ಕಮಲಾ, ಶಾಂತಾ ಎನ್ ಘಂಟೆ, ಸಮುದಾಯ ಕರ್ನಾಟಕದ ಟಿ. ಸುರೇಂದ್ರ ರಾವ್ ಇದ್ದರು.



