ಕಾಮಗಾರಿಗಳನ್ನು ಕೈಗೆತ್ತಿಕೊಂಡು ವಿಳಂಬವಿಲ್ಲದೆ ಕಾರ್ಯಗತಗೊಳಿಸಬೇಕು: ಪ್ರಿಯಾಂಕ್ ಖರ್ಗೆ

3 years ago

#Works #taken #executed #delay #PriyankKharge

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಜಿಲ್ಲೆಗಳಲ್ಲಿ ಅವಶ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ವಿಳಂಬವಿಲ್ಲದೆ ಕಾರ್ಯಗತಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಸಮಸ್ಯೆ ಹಾಗೂ ಪರಿಹಾರ ಎರಡರ ಬಗ್ಗೆ ಅರಿವಿದ್ದರೂ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ವಿಳಂಬ ಧೋರಣೆ ತೆಳೆಯುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗಳ ಆಸ್ತಿ, ಅವುಗಳ ವ್ಯಾಪ್ತಿ, ಸದಸ್ಯರ ಸಂಖ್ಯಾಬಲಕ್ಕೆ ಅನುಗುಣವಾಗಿ ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡಗಳ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಬೇಕು. ನಿರ್ಮಾಣಕ್ಕೆ ಮುನ್ನಾ ವಿವರಗಳನ್ನು ಸಂಗ್ರಹಿಸುವ ಕೆಲಸವನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದರು.

ಜಲಜೀವನ್ ಮಿಷನ್ ಅಡಿ ನಡೆಯುತ್ತಿರುವ ಪ್ರತಿ ಗ್ರಾಮಗಳಿಗೆ ಸಂಬಂಧಿಸಿದ ಕಾಮಗಾರಿಗಳ ವಿವರಗಳನ್ನು ಪಟ್ಟಿ ಮಾಡಬೇಕು ಪ್ರತಿ ಕಾಮಗಾರಿಗಳ ಉದ್ದ, ಅವುಗಳಿಗೆ ಮಾಡಲಾಗುತ್ತಿರುವ ವೆಚ್ಚ, ಕಾಮಗಾರಿಯ ಸ್ಥಿತಿಗತಿಗಳ ಅಂಕಿಅಂಶಗಳನ್ನು ಸಂಗ್ರಹಿಸಲು ಹೇಳಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದಿಷ್ಟ ದಿನದಂದು ನಿರ್ದಿಷ್ಟ ತಾಲ್ಲೂಕಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ, ಸಾರ್ವಜನಿಕರ ಅಹವಾಲು ಆಲಿಸಲು ಕ್ಯಾಲೆಂಡರ್ ಹಾಕಿಕೊಳ್ಳುವಂತೆ ಆದೇಶಿಸಿದರು.

ರಾಜ್ಯದಲ್ಲಿ ಹೆಚ್ಚು ಅಂತರ್ಜಲ ತುಂಬಿದ್ದ ಕೊಡಗು ಹಾಗೂ ಮಲೆನಾಡಿನಲ್ಲಿ ಅಂತರ್ಜಲ ಕುಸಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಕಾರಣಗಳನ್ನು ಪತ್ತೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಪ್ರತಿ ಗ್ರಾಮಗಳಿಗೆ ಸಂಬಂಧಿಸಿದಂತೆ ಕೆರೆ, ಜಲಾಶಯ, ನದಿ, ಕೊಳವೆಬಾವಿ ಮುಂತಾದ ನೀರಿನ ಸೌಲಭ್ಯಗಳ ವಿವರಗಳನ್ನು ಹೊಂದಿದಂತೆ ಮಾಹಿತಿ ಸಂಗ್ರಹಿಸಬೇಕು. ತಾವು ಸಭೆಗಳಲ್ಲಿ ಅಧಿಕಾರಿಗಳಿಗೆ ಸೂಚಿಸುವ ವಿಷಯಗಳ ಬಗ್ಗೆ ಕ್ರಮ ಕೈಗೊಂಡು, ಅನುಪಾಲನ ವರದಿ ಸಲ್ಲಿಸಬೇಕೆಂದು, ಕೇವಲ ಕಳೆದ ಸಭೆಯ ನಿರ್ಣಯಗಳನ್ನು ತಮ್ಮ ಗಮನಕ್ಕೆ ತರಬಾರದೆಂದು ಸಚಿವರು ಅಧಿಕಾರಿಗಳಿಗೆ ಕಟ್ಟಿನಿಟ್ಟಾಗಿ ಸೂಚನೆ ನೀಡಿದರು.

ರಾಜ್ಯದಲ್ಲಿ 18,000 ಶುದ್ಧ ನೀರು ಸರಬರಾಜು ಮಾಡುವ ಆರ್.ಒ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳು ಕೆಟ್ಟು ನಿಂತಾಗ ಕೂಡಲೇ ದುರಸ್ತಿ ಮಾಡುವಂತೆ ಆರ್.ಒ ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಆಗಬೇಕಿದೆ ಎಂದು ಹೇಳಿದ ಅವರು, ಈ ಸಂಬಂಧ ತೆಗೆದುಕೊಳ್ಳಲಾಗುವ ಕ್ರಮಗಳ ಬಗ್ಗೆ ತಮಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Leave a Reply