ಬೆಂಗಳೂರು: ಪ್ರಧಾನಮಂತ್ರಿಗಳಿಗೆ ಜನರ ಬಗ್ಗೆ ಕಾಳಜಿ ಇದ್ದರೆ, ಹೃದಯವಿದ್ದರೆ, ಆತ್ಮಸಾಕ್ಷಿ ಇದ್ದರೆ ಈ ಪುಟ್ಟ ಬಾಲಕಿಯ ಪತ್ರ ಕಾಡುತ್ತದೆ. ದೇಶದಲ್ಲಿ ಬೆಲೆ ಏರಿಕೆಯೇ ಇಲ್ಲ ಎಂದು ಸದನದಲ್ಲಿ ಹೇಳಿರುವ ಬಿಜೆಪಿಗೂ ಇದು ಮನವರಿಕೆ ಮಾಡಿ ಕೊಡುವಂತಿದೆ ಎಂದು ಕೆಪಿಸಿಸಿ ಹೇಳಿದೆ.
ಲೋಕಸಭೆ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಿಲ್ಲ ಎಂದಿದ್ದರು. ಈ ನಡುವೆ ಬಿಜೆಪಿಯೇ ಅಧಿಕಾರದಲ್ಲಿರುವ ಉತ್ತರಪ್ರದೇಶದಲ್ಲಿ 1ನೇ ತರಗತಿ ಓದುತ್ತಿರುವ ಕೃತಿ ದುಬೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಪೆನ್ಸಿಲ್, ರಬ್ಬರ್, ಮ್ಯಾಗಿ ಬೆಲೆ ಇಳಿಸಿ ಎಂದು ಕೋರಿದ್ದಳು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, ಉದ್ಯೋಗವೂ ಇಲ್ಲ, ಆದಾಯವೂ ಇಲ್ಲದೇ ಜನಸಾಮಾನ್ಯರು, ನಿತ್ಯ ಗೃಹ ಬಳಕೆ ವಸ್ತುಗಳನ್ನೂ ಖರೀದಿಸಲು ಪರದಾಡುವ ಸ್ಥಿತಿಗೆ ಬಂದಿದ್ದಾರೆ. ಒಂದೊಂದು ಪೈಸೆಯನ್ನೂ ಅಳೆದು-ತೂಗಿ ಖರ್ಚು ಮಾಡುವ ಸ್ಥಿತಿ ತಲುಪಿದ್ದಾರೆ. ಗ್ರಾಹಕರಿಲ್ಲದೇ ವ್ಯಾಪಾರವೂ ನೆಲ ಕಚ್ಚಿದೆ. ಇದರ ನಡುವೆ ಬೆಲೆ ಏರಿಕೆ, GST ಹೇರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನರ ‘ಮನ್ ಕಿ ಬಾತ್’ ಆಲಿಸುವ ಮನಸು ಪ್ರಧಾನಿಗಳಿಗೆ ಇಲ್ಲದಿರುವುದು ದೇಶದ ದುರಂತ ಎಂದಿದೆ.
ಮಕ್ಕಳು ಬಳಸುವ ರಬ್ಬರ್, ಪೆನ್ಸಿಲ್‌ಗಳ ಮೇಲೆಯೂ GSTಯನ್ನು ಹೇರುವ ಮೂಲಕ ಬಿಜೆಪಿ ಸರ್ಕಾರ ಮಕ್ಕಳ ಕೈಗೂ ಬೆಲೆ ಏರಿಕೆಯ ಬಿಸಿ ತಾಗುವಂತೆ ಮಾಡಿದೆ, ವಿದ್ಯಾರ್ಥಿಗಳ ರಬ್ಬರ್, ಪೆನ್ಸಿಲ್‌ಗಳ ಮೂಲಕ ದಿವಾಳಿ ಅಂಚಿನಲ್ಲಿರುವ ಸರ್ಕಾರದ ಖಜಾನೆ ತುಂಬುವ ದುರಾಸೆಯನ್ನು ಸರ್ಕಾರ ಕೈಬಿಡಲಿ ಎಂದಿದೆ.




