ಮಹಿಳೆ ವಿವಸ್ತ್ರ, ಹಲ್ಲೆ ಪ್ರಕರಣ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು

2 years ago

ಬೆಂಗಳೂರು: ಬೆಳಗಾವಿಯ ವಂಟಮೂರಿಯಲ್ಲಿ ನಡೆದ ಮಹಿಳೆ ವಿವಸ್ತ್ರ, ಹಲ್ಲೆ ಪ್ರಕರಣ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಇಂತಹ ಅಮಾನವೀಯ ಘಟನೆಗಳಿಂದ ಮಹಿಳೆಯ ಬದುಕುವ ಹಕ್ಕು ಮತ್ತು ಘನತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಬೆಳಗಾವಿಯ ಕಾಕತಿ ಸಮೀಪದ ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ಯುವತಿಯ ಕುಟುಂಬದ ಸದಸ್ಯರು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದರು. ಅಷ್ಟೇ ಅಲ್ಲದೆ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ನಡೆದ ಈ ಅಮಾನುಷ ಕೃತ್ಯ ಕುರಿತ ಮಾಧ್ಯಮ ವರದಿಗಳನ್ನಾಧರಿಸಿ ಮಾನವ ಹಕ್ಕುಗಳ ಆಯೋಗ  ಕ್ರಮಕ್ಕೆ ಮುಂದಾಗಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ಹಲ್ಲೆ ನಡೆಸಿರುವುದು ಸಂತ್ರಸ್ಥ ಮಹಿಳೆಯ ಮಾನವ ಹಕ್ಕುಗಳ ಉಲ್ಲಂಘನೆ ಅತ್ಯಂತ ಗಂಭೀರ ವಿಷಯವಾಗಿದ್ದು, ದುರ್ಬಲ ವರ್ಗಗಳನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ರಕ್ಷಿಸುವುದು ರಾಜ್ಯ ಕರ್ತವ್ಯವಾಗಿದೆ ಎಂದು ಆಯೋಗ ಹೇಳಿದೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ.

ಪ್ರಕರಣ ಕುರಿತು ಎಫ್‌ಐಆರ್ ದಾಖಲಾತಿ, ತನಿಖೆಯ ಪ್ರಗತಿ, ಆರೋಪಿಗಳ ಬಂಧನ ಹಾಗೂ ಸಂತ್ರಸ್ಥ ಮಹಿಳೆಗೆ ಪರಿಹಾರ ನೀಡುವ ಹಾಗೂ ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆಗಳನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸುವಂತೆ ಆಯೋಗ ನಿರ್ದೇಶನ ನೀಡಿದೆ.

ಪ್ರಕರಣ ಕುರಿತು ತನಿಖೆ ನಡೆಸಲು ತ್ವರಿತವಾಗಿ ತನಿಖಾ ತಂಡ ರಚಿಸಬೇಕು. ಪ್ರಕರಣದ ಸತ್ಯಾಸತ್ಯತೆ ಅರಿಯಲು ಈ ತನಿಖಾ ತಂಡ ವಿಚಾರಣೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

Leave a Reply