ಬೆಂಗಳೂರು: ಉದ್ಯಮಿಯೊಂದಿಗೆ ಸಲುಗೆ ಬೆಳೆಸಿಕೊಂಡು ಅವರಿಂದ ಹಣ ದೋಚಲು ಮಹಿಳೆಯನ್ನು ಮುಂದಿಟ್ಟುಕೊಂಡು ಹನಿಟ್ರಾಪ್ ಸಂಚು ರೂಪಿಸಿದ್ದ ದಂಪತಿ ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಖಲೀಂ-ಸಭಾ ದಂಪತಿ ಹಾಗೂ ಒಬೇದ್, ರಕೀಂ ಹಾಗೂ ಅತೀಕ್. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉದ್ಯಮಿ ಅತಾವುಲ್ಲಾಗೆ ತನ್ನ ಪತ್ನಿ ಸಭಾಳನ್ನು ವಿಧವೆ ಎಂದು ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಖಲೀಂ ಹೇಳಿದ್ದ. ಅದರಂತೆ ಸಭಾ ಅವರು ಅತಾವುಲ್ಲಾ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಅತಾವುಲ್ಲಾ ಜೊತೆ ಸಲುಗೆ ಕೂಡಾ ಏರ್ಪಟ್ಟು ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು.
ಕೆಲವು ದಿನಗಳ ನಂತರ ರಾಜರಾಜೇಶ್ವರಿ ನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ಜೊತೆ ಬಾ ಎಂದು ಅತಾವುಲ್ಲಾನನ್ನು ಕರೆದಿದ್ದಾಳೆ. ಅದರಂತೆ, ರಾಜರಾಜೇಶ್ವರಿ ನಗರಕ್ಕೆ ಬಂದಿದ್ದ ಅತಾವುಲ್ಲಾ, ರೂಮ್ ಬುಕ್ ಮಾಡಿ ಒಳಗಡೆ ಹೋದ ಕೆಲ ಹೊತ್ತಲ್ಲೇ ಖಲೀಮ್, ರಕೀಬ್, ಅತೀಕ್ ಬಂದಿದ್ದಾರೆ.
ಅತಾವುಲ್ಲಾನನ್ನು ಬೆದರಿಸಿ 6 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದರೆ ಈ ವಿಚಾರ ನಿಮ್ಮ ಮನೆಯವರಿಗೆ ಹೇಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲೇ ಮಾಹಿತಿ ತಿಳಿದು ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಹಿಡಿದಿದ್ದಾರೆ. ಇದೇ ರೀತಿ ಹಲವನ್ನು ಈ ಗ್ಯಾಂಗ್ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.




