ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸ್ ಜಾಲತಾಣಗಳಲ್ಲಿ ಹಾಕಿದ್ದ ಪೋಸ್ಟ್ ಸುಳ್ಳು

12 months ago

ಬೆಂಗಳೂರು: ತನಗೆ ಕನ್ನಡ ಬರುವುದಿಲ್ಲ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಹಲ್ಲೆ ಮಾಡಲಾಗಿದೆ ಎಂದು  ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಪೋಸ್ಟ್ ಸಂಪೂರ್ಣ ಸುಳ್ಳು ಎಂದು ಗೊತ್ತಾಗಿದೆ.

ಕ್ಷುಲ್ಲಕ ಕಾರಣಕ್ಕೆ ತಾವೇ ಮೊದಲು ಸಾಫ್ಟ್ ವೇರ್ ಉದ್ಯೋಗಿ ವಿಕಾಸ್ ಎಂಬುವವರ ಮೇಲೆ ಹಲ್ಲೆ ನಡೆಸಿ ಭಾಷೆ ಹೆಸರಿನಲ್ಲಿ ಸುಳ್ಳು ಕಥೆ ಕಟ್ಟಿದ್ದಾರೆ.

ಮೊದಲಿಗೆ ವಿಂಗ್ ಕಮಾಂಡರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೊಸ್ಟ್ ಆಧರಿಸಿ ವಿಕಾಸ್ ವಿರುದ್ಧ ಕ್ರಮ ಕೈಗೊಂಡ ಪೊಲೀಸರು ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯ ಪಡೆದು ಪರಿಶೀಲನೆ ನಡೆಸಿದ್ದಾರೆ. ಆಗ ಅಸಲಿ ವಿಷಯ ಬೆಳಕಿಗೆ ಬಂದಿದ್ದು, ಇದೀಗ ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸ್ ವಿರುದ್ಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಘಟನೆ ಸಂಬಂಧ ಹಲ್ಲೆಗೆ ಒಳಗಾದ ಖಾಸಗಿ ಕಂಪನಿಯ ಸಾಫ್ಟ್ವೇರ್ ಉದ್ಯೋಗಿ ವಿಕಾಸ್ ನೀಡಿದ ದೂರಿನ ಆಧಾರದಲ್ಲಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರಿನ ನಂಬರ್ ಆಧಾರದಲ್ಲಿ ಶಿಲಾದಿತ್ಯಾ ಬೋಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಬಿಎನ್ಎಸ್  ಕಲಂ109(, 115(2), 304, 324 ಮತ್ತು , 352 ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಲಾಗಿದೆ.

ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸ್ ಹಲ್ಲೆ ಪ್ರಕರಣ ಸಂಬಂಧ ಮಾಡಿದ್ದ ವೀಡಿಯೋದಲ್ಲಿ ಹಣೆಯಿಂದ ರಕ್ತ ಸೋರುತ್ತಿತ್ತು. ಯುವಕ ವಿಕಾಸ್ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಈ ರೀತಿಯಾಗಿದೆ ಎಂದು ಅವರು ಬಿಂಬಿಸಿದ್ದರು. ಆದರೆ ವಿಕಾಸ್ಗೆ ಡಿಚ್ಚಿ ಹೊಡೆಯಲು ಹೋಗಿ ಹಣೆಯಲ್ಲಿ ರಕ್ತ ಬಂದಿದೆ ಎಂಬುದು ಸಿಸಿಟಿವಿ ಪರಿಶೀಲನೆ ವೇಳೆ ಗೊತ್ತಾಗಿದೆ.

ಗಲಾಟೆ ನಡೆದ ಸಂದರ್ಭ ವಿಂಗ್ ಕಮಾಂಡರ್ ಬೈಕ್ ಅನ್ನು ಬೀಳಿಸಿದ್ದಾರೆ. ಈ ವೇಳೆ  ವಿಕಾಸ್ ಬೈಕ್ ಕೀಯನ್ನು ಬೈಕಿನಿಂದ ತೆಗೆದು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ರೊಚ್ಚಿಗೆದ್ದ ವಿಂಗ್ ಕಮಾಂಡರ್ ವಿಕಾಸ್ಗೆ ಡಿಚ್ಚಿ ಹೊಡೆಯಲು ಹೋದ ಸಂದರ್ಭ ವಿಕಾಸ್ ಕೈಯಲ್ಲಿದ್ದ ಗಾಡಿ ಕೀ ವಿಂಗ್ ಕಮಾಂಡರ್ ಹಣೆಗೆ ತಗುಲಿ ರಕ್ತ ಬಂದಿದೆ. ಇದನ್ನೇ ಕರುಣೆ ಬರುವಂತೆ ವೀಡಿಯೋಗೆ ಬಳಸಿಕೊಂಡ ವಿಂಗ್ ಕಮಾಂಡರ್, ದೇವರು ನನಗೆ ಪವರ್ ಕೊಟ್ಟಿರುವುದು ಸೇಡು ತೀರಿಸಿಕೊಳ್ಳಲು ಅಲ್ಲ ಎಂದು ಸುಳ್ಳು ಹೇಳಿದ್ದಾರೆ.

ಭಾಷೆಯ ವಿಚಾರ ಹಾಗೂ ಸ್ಥಳೀಯರು ಯಾರೂ ನನ್ನ ನೆರವಿಗೆ ಬರಲಿಲ್ಲ ಎಂದು ವಿಂಗ್ ಕಮಾಂಡರ್ ವೀಡಿಯೋ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ. ವಿಂಗ್ ಕಮಾಂಡರ್ ಕಾರಿನ ಡ್ಯಾಶ್ಕ್ಯಾಮೆರಾ ವೀಡಿಯೋ ಬಿಡುಗಡೆ ಮಾಡದೇ ಹಲ್ಲೆಯ ವೀಡಿಯೋ ಅಷ್ಟೆ ಅಪ್ಲೋಡ್ ಮಾಡಿದ್ದರು. ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬರುತ್ತಿದ್ದಂತೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮುಖವಾಡ ಕಳಚಿ ಬಿದ್ದಿದೆ.

ವಿಕಾಸ್ ಪಕ್ಕೆಲುಬುಗಳಿಗೆ ವಿಂಗ್ ಕಮಾಂಡರ್ ಕಾಲಿನಿಂದ ಒದ್ದಿರುವ ಹಿನ್ನೆಲೆಯಲ್ಲಿ ವಿಕಾಸ್ ಪಕ್ಕೆಲುಬು ನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಹಲ್ಲೆಗೊಳಗಾದ ವಿಕಾಸ್ ಪರ ಹಲವು ಕನ್ನಡಪರ ಸಂಘಟನೆಗಳು ನಿಂತಿವೆ. ಎರಡು ದಿನಗಳಿಂದ ಶಿಲಾದಿತ್ಯ ಬೋಸ್ ಬಂಧನಕ್ಕೆ ಆಗ್ರಹ ವ್ಯಕ್ತವಾಗಿತ್ತು. ವಿಕಾಸ್ಗೆ ಕಾನೂನಿನ ನೆರವು ನೀಡಲು ಸಂಘಟನೆಗಳು ಮುಂದಾಗಿವೆ. ಇದೀಗ ವಿಕಾಸ್ ನೀಡಿದ ದೂರನ್ನು ಸ್ವೀಕರಿಸಿದ ಬೈಯಪ್ಪನಹಳ್ಳಿ ಪೊಲೀಸರು ವಿಂಗ್ ಕಮಾಂಡರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Leave a Reply