ದೇಶ ಭಕ್ತರ ಮಹಾಮೌನ
ನನಗಿನ್ನೂ ನೆನಪಿದೆ. 2014 ರ ಲೋಕಸಭೆಯ ಚುನಾವಣೆಗೆ ಮುನ್ನ ನರೇಂದ್ರಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶವನ್ನು ತಿರುಗುತ್ತಿದ್ದ ಸಮಯ ಅದಾಗಿತ್ತು. ಒಂದು ದಿನ ಬೆಳಿಗ್ಗೆ 10 ರಿಂದ ಹನ್ನೆರೆಡು ಗಂಟೆಯವರೆಗೆ ಕಲ್ಬುರ ಸಮಾವೇಶ. ಮಧ್ಯಾಹ್ನ 2ಗಂಟೆಯಿಂದ 4 ಗಂಟೆಯವರೆಗೆ ಹುಬ್ಬಳ್ಳಿ ಸಮಾವೇಶ. ನಂತರ ಸಂಜೆ 6 ಗಂಟೆಯಿಂದ ರಾತ್ರಿ ಎಂಟುಗಂಟೆಯವರೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ. ನಂತರ ನೇರವಾಗಿ ಗುಜರಾತಿನ ಅಹಮದಾದಿಗೆ ಹೋಗಿ ರಾತ್ರಿಯ ವಿಶ್ರಾಂತಿ. ಇದು ನನಗೆ ಅಚ್ಚರಿ ಮೂಡಿಸಿತು.
ಮತ್ತೆ ಬೆಳಗಿನ ಜಾವ ಐದು ಗಂಟೆಗೆ ಇನ್ನೊಂದು ರಾಜ್ಯದಲ್ಲಿ ಮೂರು ಅಥವಾ ನಾಲ್ಕು ಸಭೆಯಲ್ಲಿ ಪಾಲ್ಗೊಳ್ಳುವುದು. ಹೀಗೆ ಒಟ್ಟು ನಾಲ್ಕು ತಿಂಗಳಲ್ಲಿ 316 ಸಮಾವೇಶಗಳಲ್ಲಿ ಪಾಲ್ಗೊಂಡಿದ್ದನ್ನು ಯಾರೂ ಮರೆತಿರಲಾರರು. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ನಮ್ಮ ಉದಯ ಟಿ.ವಿ. ಕ್ಯಾಮರಾ ಮನ್ ಚಿತ್ರೀಕರಿಸಿದ್ದ ದೃಶ್ಯಗಳನ್ನು ಗಮನಿಸುತ್ತಿದ್ದೆ. ಅದಾನಿ ಕಂಪನಿಯ ಜೆಟ್ ಏರ್ ವಿಮಾನವನ್ನು ನರೇಂದ್ರಮೋದಿಗೆ ಅದಾನಿಯು ಉಚಿತವಾಗಿ ಒದಗಿಸಿದ್ದನು.
ಅಹಮದಾಬಾದ್ ನಿವಾಸದಲ್ಲಿ ವಿಶೇಷ ಅಡುಗೆ ಭಟ್ಟನು ಬೆಳಗಿನ ತಿಂಡಿ ಮತ್ತು ಮತ್ತು ಮಧ್ಯಾಹ್ನದ ಊಟವನ್ನು ಸಿದ್ಧಪಡಿಸಿಕೊಡುತ್ತಿದ್ದನು. ವಿಮಾನದಲ್ಲಿ ಮಲಗಿ ವಿಶ್ರಾಂತಿ ಪಡೆಯುವ ವ್ಯವಸ್ಥೆ, ಬಟ್ಟೆ ಬದಲಿಸಲು ವ್ಯವಸ್ಥೆ ಹಾಗೂ ಇಬ್ಬರು ಸಹಾಯಕರು ಹೀಗೆ ಎಲ್ಲವೂ ಇತ್ತು. ರಾತ್ರಿಯ ಭೋಜನ ಮತ್ತೇ ಅಹಮದಬಾದಿನ ಗಾಂಧಿನಗರದ ನಿವಾಸದಲ್ಲಿ.
ಗೋದ್ರಾ ನರಹತ್ಯೆಯ ಕಳಂಕವನ್ನು ಕಳಚಿಕೊಳ್ಳುವ ಆಸೆ ಮತ್ತು ಪ್ರಧಾನಿಯಾಗುವ ಮಹಾನ್ ಹಂಬಲ ಆ ಮನುಷ್ಯನಿಗೆ ಮುಖ್ಯ ಗುರಿಯಾಗಿದ್ದಾಗ ಅದಾನಿ ಎಂಬ ಮಹಾಶಯ ಚುನಾವಣಾ ವೆಚ್ಚವನ್ನು ಭರಿಸುವುದರ ಜೊತೆಗೆ ಮೋದಿಯ ಎಲ್ಲಾ ಆಸೆಗಳಿಗೆ ನೀರು ಎರೆದನು.
2014 ರ ಮೇ ತಿಂಗಳಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅದೇ ಗುಜರಾತಿನ ಗೌತಮ್ ಅದಾನಿಯ ಭವಿಷ್ಯವೂ ಬದಲಾಯಿತು. ಈ ದೇಶದ ಹಡಗು ಬಂದರುಗಳು, ವಿಮಾನ ನಿಲ್ದಾಣಗಳು ಆತನ ಕೈ ವಶವಾದವು. ಕೊಚ್ಚಿ ವಿಮಾನನಿಲ್ದಾಣದ ನಿರ್ವಹಣೆಗೆ ಇರಬೇಕಾದ ಅರ್ಹತೆಯಲ್ಲಿ ಅನುಭವ ಎಂಬ ಶಬ್ದವನ್ನು ತೆಗೆದು ಹಾಕಲಾಯಿತು. ಮುಂಬೈ ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿದ್ದ ಆಂಧ್ರ ಮೂಲದ ಜಿ.ಕೆ.ವಿ.ಕೆ. ಸಂಸ್ಥೆಗೆ ಬೆದರಿಕೆ ಒಡ್ಡಿ ಅದನ್ನು ಅದಾನಿಗೆ ವಹಿಸುವಂತೆ ಮಾಡಲಾಯಿತು. ಕಲ್ಲಿದ್ದಲು ವಿಷಯದಲ್ಲಿ ಎರಡನೆಯ ದರ್ಜೆಯ ಕಲ್ಲಿದ್ದಲು ಎಂಬ ಹಣೆ ಪಟ್ಟಿಯನ್ನು ಕಟ್ಟಿ ಬಿಸಾಡುವ ಬೆಲೆಯನ್ನು ನಿರ್ಧರಿಸಿ ಅಪಾರ ಪ್ರಮಾಣದ ಕಲ್ಲಿದ್ದನ್ನು ಅದಾನಿ ಕಂಪನಿಗೆ ಮಾರಲಾಯಿತು. ಆತ ಅದೇ ಕಲ್ಲಿದ್ದನ್ನು ಖಾಸಗಿ ವಿದ್ಯುತ್ ಸ್ಥಾವರಗಳಿಂದ ಹಿಡಿದು, ಕೇಂದ್ರ ಸರ್ಕಾರದ ಸ್ಥಾವರಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿದನು. ದೇಶದ ರಾಷ್ಟ್ರೀಯ ಬ್ಯಾಂಕ್ ಗಳಿಂದ ಭದ್ರತೆಯ ನಿಯಮ ಮೀರಿ ಅದಾನಿಗೆ ಸಾಲ ನೀಡಲಾಯಿತು.
ಎಲ್.ಐ.ಸಿ. ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳ ಜೀವ ವಿಮಾ ಪ್ರೀಮಿಯಂ ಹಣವನ್ನು ಅದಾನಿ ಕಂಪನಿಗಳ ಶೇರುಗಳಲ್ಲಿ ಹೂಡುವಂತೆ ಒತ್ತಾಯ ಮಾಡಲಾಯಿತು. ಇಷ್ಟು ಮಾತ್ರವಲ್ಲದೆ ಯಾವುದೇ ರಂಗದಲ್ಲಿ ಅದಾನಿ ಕಂಪನಿಯು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಇತರೆ ಕಂಪನಿಗಳು ಭಾಗವಹಿಸದಂತೆ ಬೆದರಿಕೆ ಒಡ್ಡಲಾಯಿತು.
ಇವೆಲ್ಲವುಗಳ ಒಟ್ಟು ಪರಿಣಾಮ ಎಂಬಂತೆ ಕೇವಲ ಎಂಟು ವರ್ಷಗಳ ಅವಧಿಯಲ್ಲಿ ಭಾರತದ ಸಾಮಾನ್ಯ ಉದ್ಯಮಿಯಾಗಿದ್ದ ಗೌತಮ್ ಅದಾನಿ ಜಗತ್ತಿನ ಮೂರನೆಯ ಅತಿ ದೊಡ್ಡ ಶ್ರೀಮಂತನಾಗಿ ಬೆಳೆದನು.
ಜೊತೆಗೆ ಭಾರತದ ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ.ಯ ಹಣದ ಖಜಾನೆಯಾಗಿ ಪರಿವರ್ತನೆಗೊಂಡನು. 2019ರ ಲೋಕಸಭಾ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗಿನ ರಾಜ್ಯಗಳ ಚುನಾವಣಾ ವೆಚ್ಚವನ್ನು ಆತನೇ ಭರಿಸುತ್ತಿದ್ದಾನೆ, ಇದು ರಹಸ್ಯವಾಗಿ ಉಳಿದಿರುವ ಸಂಗತಿಯಲ್ಲ. ಆದರೆ, ಭಾರತದ ಬಹುತೇಕ ಮಾಧ್ಯಮ ಸಂಸ್ಥೆಗಳು ಬಾಯಿಗೆ ಬೀಗ ಜಡಿದುಕೊಂಡು ಕುಳಿತಿರುವಾಗ ಅಮೇರಿಕಾದ ಹಿಂಡೆನ್ ಬರ್ಗ್ ಎಂಬ ಆರ್ಥಿಕ ವ್ಯವಹಾರಗಳ ಸಂಸ್ಥೆಯು ಅದಾನಿಯ ಜಾತಕವನ್ನು ಜಗತ್ತಿಗೆ ತನಿಖಾ ವರದಿಯ ಮೂಲಕ ಅನಾವರಣಗೊಳಿಸಿತು.
ಈ ತನಿಖಾ ವರದಿಯಿಂದ ಅದಾನಿಯ ಸಮೂಹಕ್ಕೆ ಆಗಿರುವ ನಷ್ಟ ಸುಮಾರು ಹತ್ತು ಲಕ್ಷ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಅಂದರೆ, ಇದು ಗೌತಮ್ ಅದಾನಿ ಕಂಪನಿಗಳ ಶೇರು ಮಾರುಕಟ್ಟೆಯ ಮೌಲ್ಯ ಕುಸಿತದಿಂದ ಆಗಿರುವ ನಷ್ಟ. ವಾಸ್ತವಾಗಿ 200 ರೂಪಾಯಿಗಳಿಂದ 400 ರೂಪಾಯಿ ಮಾರುಕಟ್ಟೆಯ ಮೌಲ್ಯವಿದ್ದ ಅದಾನಿಯ ಕಂಪನಿಯ ಶೇರುಗಳು 3200 ರೂಪಾಯಿವರೆಗೆ ಏರಿದ್ದವು. 1986 ರಿಂದ 2017 ರವರೆಗೆ ಸತತ ಮುವತ್ತೊಂದು ವರ್ಷಗಳ ಕಾಲ ಶೇರು ಮಾರುಕಟ್ಟೆಯ ವ್ಯವಹಾರದಲ್ಲಿ ತೊಡಗಿದ್ದ ನಾನು 36 ಲಕ್ಷ ರೂಪಾಯಿಗಳನ್ನು ವಾಪಸ್ ತೆಗೆದು ನನ್ನ ಖಾತೆಯನ್ನು 2017 ರಲ್ಲಿ ಮುಕ್ತಾಯ ಮಾಡಿದೆ.
ನರೇಂದ್ರಮೋದಿ ಅಧಿಕಾರದಲ್ಲಿ ಇರುವವರೆಗೆ ಇದು ಅಪಾಯಕಾರಿ ಎಂದು ಆ ಕ್ಷಣದಲ್ಲಿ ನನಗೆ ಅನಿಸಿತ್ತು. ಜೊತೆಗೆ ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ದೇಶದ ಕಂಪನಿಗಳ ವಾರ್ಷಿಕ ವರದಿಯಿಂದ ಹಿಡಿದು ಅವುಗಳ ವಿಶೇಷ ಬೆಳವಣಿಗೆ, ನಷ್ಟ ಇವುಗಳನ್ನು ಗಮನಿಸಬೇಕಿತ್ತು.
ಈಗ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ವಿದ್ಯಾಮಾನವನ್ನು ಎಲ್ಲರೂ ಗಮನಿಸಿದ್ದಾರೆ. ದೇಶದ ಖಾಸಗಿ ಕಂಪನಿಯ ಅವ್ಯವಹಾರಗಳ ಕುರಿತು ಸಂಸತ್ತಿನಲ್ಲಿ ಬಹಿರಂಗ ಚರ್ಚೆ ಮಾಡಲು ಬಿ.ಜೆ.ಪಿ. ಸರ್ಕಾರ ಏಕೆ ಅಡ್ಡಿ ಮಾಡುತ್ತಿದೆ? ಪ್ರಧಾನಿಯಿಂದ ಹಿಡಿದು ಸಂಘ ಪರಿವಾರದ ಎಲ್ಲರೂ ಏಕೆ ಮೌನ ವಹಿಸಿದ್ದಾರೆ? ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಇತರೆ ಸಂಸ್ಥೆಗಳು ಅದಾನಿ ಕಂಪನಿಗಳಲ್ಲಿ ತೊಡಗಿಸಿರುವ ಹಣ ಭಾರತದ ಪ್ರತಿಯೊಬ್ಬ ನಾಗರೀಕನ ಹಣವಾಗಿದೆ. ಇದನ್ನು ತಿಳಿದು ಕೊಳ್ಳುವ ಹಕ್ಕು ಎಲ್ಲರಿಗೂ ಇದೆಯಲ್ಲವೆ? ಬಿ.ಜೆ.ಪಿ. ಸರ್ಕಾರ ಗೌತಮ್ ಅದಾನಿಯ ಪರವಾಗಿ ವಕಾಲತ್ತು ವಹಿಸುವ ಅಗತ್ಯವೇನಿದೆ? ಈಗಲಾದರೂ ದೇಶಭಕ್ತರು ಮೌನ ಮುರಿದು ಮಾತನಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




