ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ ಮಾಡುತ್ತೇವೆ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಕೋರ್ಟ್ ನಲ್ಲಿ ವಿಚಾರಣೆ ಬರುತ್ತಿರುವ ಬೆನ್ನಲ್ಲೇ ಕಿಡಿಗೇಡಿಗಳ ಕಿತಾಪತಿ ಕೂಡಾ ಆರಂಭವಾಗಿದೆ. ಮಹಾರಾಷ್ಟ್ರದ ಕೆಲವೆಡೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಿಗೆ ಕಲ್ಲು ತೂರಿದ್ದಾರೆ ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಗಡಿ ವಿಷಯದಲ್ಲಿ ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದರೆ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗಳ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ಎಸೆದು ಮಸಿ ಬಳಿದಿರುವ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇಂಥ ಪುಂಡಾಟಿಕೆಯನ್ನು ನಾವು ಸಹಿಸುವುದಿಲ್ಲ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯ. ಅನಗತ್ಯವಾಗಿ ತೊಂದರೆ ಕೊಟ್ಟರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು

ಭಾರತ ಒಕ್ಕೂಟ ರಾಷ್ಟ್ರಗಳ ವ್ಯವಸ್ಥೆ ಹೊಂದಿದೆ. ಪ್ರತಿಯೊಂದು ರಾಜ್ಯಗಳು ದೇಶದ ಕಾನೂನಿಗೆ ತಲೆದೂಗಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಮಹಾರಾಷ್ಟ್ರ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು. ಮೊದಲು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.

ನಮ್ಮ ಗಡಿಗಳನ್ನು ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ನಮ್ಮ ಉದ್ದೇಶವೂ ಕೂಡ ಸ್ಪಷ್ಟವಾಗಿದೆ. ಕಾನೂನು ಹೋರಾಟವನ್ನು ನಾವು ಮುಂದುವರೆಸುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.

ರಾಜ್ಯಗಳ ನಡುವೆ ಶಾಂತಿ ಸೌಹಾರ್ದ ಸಂಬಂಧ ಇರಬೇಕು. ಗಡಿ ಕ್ಯಾತೆ ಮಾಡುವುದನ್ನು ಮಹಾರಾಷ್ಟ್ರ ಸರ್ಕಾರ ಮೊದಲು ನಿಲ್ಲಿಸಲಿ. ನಾವು ಕಾನೂನಿಗೆ ತಲೆ ಬಾಗಬೇಕಾಗುತ್ತದೆ. 2004ರಲ್ಲಿ ಮಹಾರಾಷ್ಟ್ರವೇ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ನಾವು ಕೂಡ ಕಾನೂನು ಸಮರವನ್ನು ಮುಂದುವರೆಸಿದ್ದೇವೆ. ಈ ಕಾನೂನು ಹೋರಾಟದಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸುತ್ತೇವೆ. ಮುಂದಿನ ವಾರ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದರು.

ನಾವು ಕಾನೂನು ಪಾಲಿಸುವವರಾಗಿದ್ದು, ನಮ್ಮ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಮಹಾರಾಷ್ಟ್ರ 2004ರಲ್ಲಿ ಪ್ರಕರಣ ದಾಖಲಿಸಿತ್ತು. ನಾವು ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ ಎಂದರು.

ನಮ್ಮ ಮೊದಲ ಆದ್ಯತೆ ಕಾನೂನಾತ್ಮಕ ಹೋರಾಟ ಮಾಡುವುದಾಗಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣವಿದ್ದಾಗ ಅದರ ತೀರ್ಪಿಗಾಗಿ ಕಾಯಬೇಕು. ಪ್ರಕರಣವು ಅದರ ಅರ್ಜಿಯ ಅರ್ಹತೆಯ ಮೇಲೆ ನಿಂತಿಲ್ಲ, ಬದಲಾಗಿ ಮೆಂಟೇನಬಿಲಿಟಿ ಆಧಾರದ ಮೇಲೆ ನಿಂತಿದೆ. ಕಲಂ 3 ಕೂಡ ಬಹಳ ಸ್ಪಷ್ಟವಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಒಂದು ನಿರ್ಣಯಕ್ಕೆ ಬರಬೇಕಿದೆ ಎಂದರು.

Leave a Reply