ಧಾರವಾಡ: 402 ಪಿಎಸ್‌ಐ ಹುದ್ದೆಗೆ ಪರೀಕ್ಷೆ ನಡೆಸಲು ಮಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಹಾಗೂ ಪಿಎಸ್‌ಐ ಪರೀಕ್ಷೆಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ, ಈ ಹಿಂದೆ 545 ಪಿಎಸ್‌ಐ ಹುದ್ದೆಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಶ್ರೀನಗರ ವೃತದಿಂದ ಪ್ರತಿಭಟನಾ ಮೆರವಣಿಗೆಯು ಹೊರಟು ಸಪ್ತಾಪುರ, ಕೆಸಿಡಿ ವೃತ ಹಾಗೂ ಜುಬ್ಲಿ ವೃತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ 545 ಪೋಸ್ಟ್ ನಲ್ಲಿ ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯುದ್ದಕ್ಕೂ ಗೃಹ ಸಚಿವ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
545 ಪಿಎಸ್‌ಐ ಹುದ್ದೆಯ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ಪ್ರಗತಿಯಲ್ಲಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಈಗ 402 ಪಿಎಸ್‌ಐ ಹುದ್ದೆಗೆ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಿಂದ 545 ಹುದ್ದೆಗಳಿಗೆ ಪರೀಕ್ಷೆ ಬರೆದ ನಮ್ಮಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು.
ರಾಜ್ಯ ಸರ್ಕಾರ ನಮಗೆ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ಈ ಕೂಡಲೇ ಹೊಸದಾಗಿ ಪಿಎಸ್‌ಐ ಹುದ್ದೆಗೆ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು. 545 ಪಿಎಸ್‌ಐ ಹುದ್ದೆಯ ಅಕ್ರಮ ತನಿಖೆ ಪೂರ್ಣಗೊಂಡು, ನಮಗೆ ನ್ಯಾಯ ಸಿಗುವವರೆಗೂ ಪಿಎಸ್‌ಐ ಹುದ್ದೆಗಳ ನೇಮಕ ಪರೀಕ್ಷೆಯನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ಒಂದುವೇಳೆ ರಾಜ್ಯ ಸರ್ಕಾರ ಪಿಎಸ್‌ಐ ಹುದ್ದೆಗೆ ಪರೀಕ್ಷೆ ನಡೆಸುವ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಮುಂಬರುವ ದಿನಗಳಲ್ಲಿ ಈ ನಿರ್ಧಾರದ ವಿರುದ್ಧ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಭ್ಯರ್ಥಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.




