ಬೆಂಗಳೂರು: ಬನಶಂಕರಿಯಲ್ಲಿ ಸ್ತಪತಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಕಂಚಿನ ಪ್ರತಿಮೆ ತಯಾರಿಕೆ ಹಂತದಲ್ಲಿ ಶೇಕಡ 90ರಷ್ಟು ಕೆಲಸ ಮುಗಿದಿದೆ. ಪ್ರತಿಮೆ ವೀಕ್ಷಿಸಲು ನಟ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ,ಬೆಂಗಳೂರುನಗರ ಜಿಲ್ಲೆ ಬಿ.ಜೆ.ಪಿ.ಅಧ್ಯಕ್ಷ ಎನ್.ಆರ್.ರಮೇಶ್ ರವರು, ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಪಾಲಿಕೆ ಕನ್ನಡ ಸಂಘದ ಅಧ್ಯಕ್ಷ ಸಂಗೂಳ್ಳಿ ಕೃಷ್ಣಮೂರ್ತಿ, ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಅವರಣದಲ್ಲಿರುವ ಮೇರುನಟ ಡಾ||ರಾಜ್ ಕುಮಾರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರತಿಮೆ ವೀಕ್ಷಣೆ ಮಾಡುವ ಸ್ಥಳಕ್ಕೆ ತೆರಳಿದರು.
ಸ್ತಪತಿ ಕ್ರಿಯೇಷನ್ಸ್ ಸಂಸ್ಥೆಯ ಶಿಲ್ಪಿ ಶಿವದತ್ತ ಮತ್ತು ಕನ್ನಡ ಹೋರಾಟಗಾರರಾದ ಸಾಯಿಶಂಕರ್, ವಾಟಾಳ್ ವೆಂಕಟೇಶ್, ರಾಮಚಂದ್ರ, ಮಂಜೇಗೌಡ, ರಾಮು ಉಪಸ್ಥಿತರಿದ್ದರು.
ಚಿತ್ರನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಪುನೀತ್ ರಾಜ್ ಕುಮಾರ್ ನಮ್ಮ ಕುಟುಂಬಕ್ಕಿಂತ ಹೆಚ್ಚು ಪ್ರೀತಿ ಅಭಿಮಾನಿಗಳಿಂದ ಸಂಪಾದನೆ ಮಾಡಿದ್ದಾರೆ. ಅಪ್ಪು ನಮ್ಮಿಂದ ದೂರವಾಗಿ 20 ದಿನವಾದರು ಜನರು ಇನ್ನು ನೋವನ್ನ ಮರೆತ್ತಿಲ್ಲ. ಅಪ್ಪು ಮಾಡಿದ ಸಮಾಜ ಸೇವಾ ಕಾರ್ಯಗಳನ್ನು ನಾವು ಮುನ್ನೆಡಿಸಿಕೊಂಡು ಬರುತ್ತೇವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲು ಹೋಗಿಲ್ಲ ನಮ್ಮ ಜೊತೆ ಇದ್ದಾರೆ. ಅಪ್ಪು ಪ್ರತಿಮೆ ತುಂಬಾ ಚನ್ನಾಗಿ ಮೂಡಿ ಬಂದಿದೆ, ಅಂತಿಮ ರೂಪ ನೀಡದಾಗ ಎದುರಲ್ಲಿ ನಮ್ಮ ಜೊತೆ ನಿಂತಂತೆ ಭಾಸವಾಗುತ್ತದೆ ಎಂದು ಹೇಳಿದರು.
ಎನ್.ಆರ್.ರಮೇಶ್ ಮಾತನಾಡಿ, ಮೇರುನಟ ಡಾ||ರಾಜ್ ಕುಮಾರ್ ಕುಟುಂಬ ಭಾರತೀಯ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಡಾ||ರಾಜ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಚಲನಚಿತ್ರಗಳು ಸಧಬಿರುಚಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಾಗಿವೆ. ಅಪ್ಪು ಅವರು ಅಂಧ ಮಕ್ಕಳ ಶಾಲೆ, ವೃದ್ದಾಶ್ರಮ, ಗೋಶಾಲೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸಿದರು ಎಂದರು.
ಅಮೃತ್ ರಾಜ್ ರವರು ಮಾತನಾಡಿ, ಪುನೀತ್ ರಾಜ್ ಕುಮಾರ್ ರವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳನ್ನು ನಟಿಸಿದರು. ಅವರ ಸರಳತೆ, ಸಮಾಜ ಸೇವೆ ಇಡಿ ದೇಶದ ಗಮನ ಸೆಳೆಯಿತು. ಸಾವಿನಲ್ಲು ಸಾರ್ಥಕ ಜೀವನ ಎಂಬಂತೆ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾದರು. ಅತಿ ಕಿರಿಯ ವಯಸ್ಸಿನಲ್ಲಿ, ಹಿರಿಯ ಸಾಧನೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಜೀವನ, ಆದರ್ಶಗಳ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಡಾ||ರಾಜ್ ಕುಮಾರ್ ರವರು ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿನಲ್ಲಿ ನೇತ್ರದಾನ ಜಾಗೃತಿ ಅಭಿಯಾನ ಮತ್ತು ನೇತ್ರದಾನಕ್ಕೆ ಸಹಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಮತ್ತು ಇನ್ನ ಎರಡು ತಿಂಗಳ ಒಳಗೆ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿಯಲ್ಲಿ ಅಪ್ಪುರವರ ಕಂಚಿನ ಪುತ್ಥಳಿ ಲೋಕರ್ಪಣೆಯಾಗಲಿದೆ ಎಂದರು.



